ಹರಿಹರ: ಇಂದಿನ ವಿದ್ಯಾರ್ಥಿಗಳಿಗೆ ಉನ್ನತ ನೀತಿ- ಮೌಲ್ಯಗಳ ಅರಿವಿನ ಅವಶ್ಯಕತೆ ಇದೆ ಎಂದು ಎಐಡಿಎಸ್ಒ ರಾಜ್ಯ ಉಪಾಧ್ಯಕ್ಷೆ ಸಿ.ಎಂ. ಅಪೂರ್ವ ತಿಳಿಸಿದರು.
ನಗರದ ಬೈಪಾಸ್ ಬಳಿ ಇರುವ ಮೈತ್ರಿವನದ ಪೊ›.ಬಿ. ಕೃಷ್ಣಪ್ಪ ಮೆಮೋರಿಯಲ್ ಭವನದಲ್ಲಿ ಶನಿವಾರ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಅರ್ಗನೈಜೆಷನ್ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಣ- ಮಾನವತೆ- ಸಂಸ್ಕೃತಿ ಉಳಿಸಿ ಎಂಬ ಎರಡು ದಿನದ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಮಾತನಾಡಿದರು.
ಸಮಾಜದಲ್ಲಿ ಸಾಂಸ್ಕೃತಿಕ ಪತನದಿಂದ ಉನ್ನತ ನೀತಿ, ಸಂಸ್ಕೃತಿ, ಮೌಲ್ಯಗಳ ಕೊರತೆಯಿರುವುದನ್ನು ಕಾಣುತ್ತಿದ್ದು, ಇದಕ್ಕೆ ವಿದ್ಯಾರ್ಥಿಗಳು, ಯುವಜನರು ಬಲಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವ್ಯಕ್ತಿತ್ವ ವಿಕಸನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕ್ರಾಂತಿಕಾರಿಗಳಾದ ಭಗತ್ಸಿಂಗ್ ಮತ್ತು ನೇತಾಜಿ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ನಡೆಸಿದ ಸಂಘರ್ಷ ಇಂದಿಗೂ ಸ್ಮರಿಸುವಂತದ್ದು. ಆದರೆ ಅವರ ಹೋರಾಟ ಸ್ವಾತಂತ್ರ್ಯ್ಕೆ ಮಾತ್ರ ಸೀಮಿತವಾಗಿರದೇ ಶೋಷಣೆ ಮುಕ್ತ ಸಮಾಜವಾದಿ ಭಾರತದ ಕನಸನ್ನು ಹೊಂದಿದ್ದರು ಎಂದು ಹೇಳಿದರು.
ಶಿಬಿರದಲ್ಲಿ ವಿವಿಧ ವಿಷಯಗಳ ಚರ್ಚೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಿನಿಮಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಯಿತು.
ಅಧ್ಯಕ್ಷತೆಯನ್ನು ಎಐಡಿಎಸ್ಒ ಜಿಲ್ಲಾಧ್ಯಕ್ಷ ಪೂಜಾ ನಂದಿಹಳ್ಳಿ ವಹಿಸಿದ್ದರು. ಸಂಘಟನಾಕಾರರಾದ ಅಭಿಷೇಕ್, ನಂದೀಶ್ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿದ್ದರು.