ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಯಾವುದೇ ಫಲಪೇಕ್ಷೆ ಇಲ್ಲದೆ ಮಾಡುವ ಕೆಲಸವು ಸೇವೆಯ ರೂಪದಲ್ಲಿ ಗುರುತಿಸಲ್ಪಡುತ್ತದೆ. ತುರ್ತು ಸಂದರ್ಭದಲ್ಲಿ ನೆರವಾಗುವ ಅತಿ ಚಿಕ್ಕ ವಿಚಾರವೂ ಹೆಚ್ಚಿನ ಮಹತ್ವ ಪಡೆದಿರುತ್ತದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಮಾಂಡರ್ ಶಾಂತಿ ಲಾಲ್ ಜಟಿಯ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಪ್ರಾದೇಶಿಕ ವಿಭಾಗದ ಬಂಟ್ವಾಳ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಸ್ವಯಂ ಸೇವಕರಿಗೆ ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸೌಧದಲ್ಲಿ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಮಹಾಬಲ್ ಕುಲಾಲ್ ಕಾರ್ಯಾಗಾರ ಉದ್ಘಾಟಿಸಿದರು. ಶೌರ್ಯ ಸಮಿತಿ ಮಾಸ್ಟರ್ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ವಿಪತ್ತು ನಿರ್ವಹಣಾ ಪ್ರಾಧಿಕಾರ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ ವಿಜಯ್ ಕುಮಾರ್ ವಿಪತ್ತಿನ ವಿಧಗಳು ಮತ್ತು ಅವುಗಳನ್ನು ತಡೆಗಟ್ಟುವ ವಿಧಾನ ಕುರಿತು ಮಾರ್ಗದರ್ಶನ ನೀಡಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಂಡದಿಂದ ಜೀವರಕ್ಷಣಾ ಕೌಶಲ ಕುರಿತು ತರಬೇತಿ ಸ್ವಯಂ ಸೇವಕರಿಗೆ ನೀಡಲಾಯಿತು. ಹೊಸದಾಗಿ ಸೇರ್ಪಡೆಯಾದ ಶೌರ್ಯ ಸ್ವಯಂ ಸೇವಕರಿಗೆ ಸಮವಸ್ತ್ರ ವಿತರಿಸಲಾಯಿತು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಬ್‌ಇನ್‌ಸ್ಪ್ಪೆಕ್ಟರ್ ಮುನಿಕೃಷ್ಣ, ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮ ಯೋಜನಾಧಿಕಾರಿ ಜೈವಂತ ಪಟಗಾರ, ಜನಜಾಗೃತಿ ವೇದಿಕೆ ಆಡಳಿತ ಯೋಜನಾಧಿಕಾರಿ ಮಾಧವ ಗೌಡ ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಎಂ.ಪ್ರಾಸ್ತಾವಿಸಿ, ಸ್ವಾಗತಿಸಿದರು. ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಮೇಲ್ವಿಚಾರಕ ನಿತೇಶ್ ಕೆ.ನಿರೂಪಿಸಿದರು.