ಜಿಲ್ಲೆ

ಹಕ್ಕಿಪಿಕ್ಕಿ ಜನಾಂಗದಿಂದ ವಯನಾಡಿನ ಸಂತ್ರಸ್ತರಿಗೆ ನೆರವು

ಹುಣಸೂರು: ಕೇರಳ ರಾಜ್ಯದ ವಯನಾಡಿನಲ್ಲಿ ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ 50ಕ್ಕೂ ಹೆಚ್ಚು ಕುಟುಂಬಗಳಿಗೆ ಗ್ಯಾಸ್‌ಸ್ಟವ್‌ಗಳನ್ನು ತಾಲೂಕಿನ ಪಕ್ಷಿರಾಜಪುರದ ಒಂದನೇ ಬ್ಲಾಕಿನ ಹಕ್ಕಿ-ಪಿಕ್ಕಿ ಆದಿವಾಸಿ ಜನಾಂಗ ವತಿಯಿಂದ ನೀಡಲಾಗಿದೆ ಎಂದು ಕೆಎಂಸಿಸಿ ಸಂಸ್ಥೆ ತಾಲೂಕು ಅಧ್ಯಕ್ಷ ಸಿ.ಟಿ.ಶಂಸುದ್ದೀನ್ ತಿಳಿಸಿದ್ದಾರೆ.

ನಗರದ ಬಜಾರ್ ರಸ್ತೆಯಲ್ಲಿರುವ ಶಾಫಿ ಮಸೀದಿಯ ಸಭಾಂಗಣದಲ್ಲಿ ಗ್ಯಾಸ್ ಸ್ಟವ್ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ತಾಲೂಕಿನ ಆದಿವಾಸಿ ಹಕ್ಕಿ-ಪಿಕ್ಕಿ ಜನಾಂಗದವರು ದೇಶ ಹಾಗೂ ವಿದೇಶದಲ್ಲಿ ವ್ಯಾಪಾರ ವಹಿವಾಟು ಮಾಡಿಕೊಂಡು ಸುತ್ತಾಡಿದ್ದಾರೆ. ಕಷ್ಟ- ಸುಖದ ಅರಿವಿರುವುದರಿಂದ ಪ್ರವಾಹ ಪೀಡಿತ ಜನರಿಗೆ ತಮ್ಮ ಜನಾಂಗದಿಂದ ಸಹಾಯ ಮಾಡಲು ಮುಂದಾಗಿರುವುದು ಸಂತೋಷದ ವಿಷಯ ಎಂದರು.

ಆದಿವಾಸಿ ಜನಾಂಗದ ಯುವಕ ಸತ್ಯ ಮಾತನಾಡಿ, ನಮ್ಮ ಸಮಾಜದ ವತಿಯಿಂದ ಕುಟುಂಬ ಸದಸ್ಯರ ವೈಯಕ್ತಿಕ ಹಣದಿಂದ ಸಹಾಯ ಮಾಡಿದ್ದೇವೆ ಎಂದರು.

ಶಾಫಿ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್, ಕೆಎಂಸಿಸಿ ಕಾರ್ಯದರ್ಶಿ ನಾಸೀರ್, ಖಜಾಂಚಿ ಇಬ್ರಾಹಿಂ, ಸದಸ್ಯ ಶಫೀಕ್, ಶಾಕೀರ್, ಸುಹೇಲ್ ಆರ್.ಕೆ. ಮುಯಿದುಲ್ಲಾ ಖಾನ್, ಸುದೀಪ್, ವಿಜಯ್, ಸಲ್ವರಾಜ್ ಇದ್ದರು.