ಜಿಲ್ಲೆ

ನಾಳೆ ಮಲ್ಲಿಕಾರ್ಜುನ ಖರ್ಗೆ ಮತಯಾಚನೆ: ಜಿಲ್ಲಾ ಕಾಂಗ್ರೆಸ್ ಎಸ್ಸಿ, ಎಸ್ಟಿ ಸಮಿತಿ ಅಧ್ಯಕ್ಷ ಸುರೇಶ್ ಕಂಠಿ ಮಾಹಿತಿ

ಮಂಡ್ಯ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏ.29ರಂದು ಮಳವಳ್ಳಿ ಮತ್ತು ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿರುವ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಎಸ್ಸಿ, ಎಸ್ಟಿ ಸಮಿತಿ ಅಧ್ಯಕ್ಷ ಸುರೇಶ್ ಕಂಠಿ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸಂಕಲ್ಪ ಮಾಡಲಾಗಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಬಹಿರಂಗ ಸಭೆಗಳು, ಚುನಾವಣಾ ಪ್ರಚಾರ, ಮತಯಾಚನೆ ಸುಗಮವಾಗಿ ನಡೆಯುತ್ತಿದೆ ಎಂದು ನುಡಿದರು.

29ರಂದು ಬೆಳಗ್ಗೆ 11ಗಂಟೆಗೆ ಮಳವಳ್ಳಿ ಮತ್ತು ಮಧ್ಯಾಹ್ನ 1 ಗಂಟೆಗೆ ಕೆ.ಆರ್.ಪೇಟೆಯಲ್ಲಿ ಆಯೋಜಿಸಿರುವ ಬಹಿರಂಗ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತದಾರರಲ್ಲಿ ಮತಯಾಚನೆ ಮಾಡಲಿದ್ದಾರೆ. ಕೆಪಿಸಿಸಿ ಉಪಾಧ್ಯಕ್ಷರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಸೇರಿದಂತೆ ಹಲವು ರಾಜ್ಯಮಟ್ಟದ ನಾಯಕರು ಭಾಗವಹಿಸಲಿದ್ದಾರೆ ಎಂದರು.

ಸಭೆಯಲ್ಲಿ ಪದಾಧಿಕಾರಿಗಳಾದ ಸಾತನೂರು ಕೃಷ್ಣ, ಸಿದ್ದರಾಜು, ನಾಗಭೂಷಣ್, ಶಿವಯ್ಯ, ರವಿ, ಆಟೋಕೃಷ್ಣ, ಪ್ರಾಣೇಶ್, ಮುತ್ತು, ನಾಗೇಶ್, ಪ್ರಕಾಶ್, ಕನ್ನಲಿ ಚನ್ನಪ್ಪ ಇತರರಿದ್ದರು.