ಜಿಲ್ಲೆ

ಶೀಘ್ರದಲ್ಲಿ ಎಐ ಮೂಲಕ ವಿಜ್ಞಾನ ಸಮಸ್ಯೆಗೆ ಪರಿಹಾರ;ಐಐಎಸ್‌ಸಿ ಘಟಿಕೋತ್ಸವದಲ್ಲಿ ಪ್ರೊ.ಮಂಜುಲ್ ಭಾರ್ಗವ್ ವಿಶ್ವಾಸ

ಪ್ರಶಾಂತ ರಿಪ್ಪನ್​ಪೇಟೆ

ಕೆಲವೇ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮಾದರಿಗಳು ಪದವಿಪೂರ್ವ ವಿಜ್ಞಾನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ಪ್ರಸಿದ್ಧ ಗಣಿತಶಾಸ್ತ್ರಜ್ಞ ಪದ್ಮಭೂಷಣ ಪ್ರೊ.ಮಂಜುಲ್ ಭಾರ್ಗವ ಹೇಳಿದ್ದಾರೆ. ಶುಕ್ರವಾರ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ರೂಪುಗೊಂಡಿರು ಎಐನಲ್ಲಿ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಆವಿಷ್ಕಾರಗಳಾಗಿಲ್ಲ. ವಿದ್ಯಾರ್ಥಿಗಳು ವೈಜ್ಞಾನಿಕ ಮತ್ತು ಗಣಿತದ ಪ್ರಶ್ನೆಗಳನ್ನು ಕೇಳಿದರೆ ಎಐ ಅಸಂಬದ್ಧವಾಗಿ ಉತ್ತರಿಸುತ್ತಿದೆ. ಆದರೆ ಇನ್ನು ಕೆಲವೇ ವರ್ಷಗಳಲ್ಲಿ ಸಮಂಜಸ ಉತ್ತರವನ್ನು ಕಂಡುಕೊಳ್ಳಲು ಎಐ ಆವಿಷ್ಕಾರಗೊಳ್ಳಲಿದೆ. ಆಗ ಪದವಿಪೂರ್ವ ವಿಜ್ಞಾನ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು. ಶತಮಾನಗಳ ಹಿಂದೆ ಭಾರತದಲ್ಲಿ ಸಂಶೋಧನಾ ಪ್ರವೃತ್ತಿ ಪ್ರಬಲವಾಗಿತ್ತು. ದೇಶದಲ್ಲಿ ವೈಜ್ಞಾನಿಕ ಮನೋಭಾವ ಇನ್ನಷ್ಟು ಸದೃಢಗೊಳ್ಳಬೇಕು. ಪ್ರತಿಷ್ಠಿತ ವಿಜ್ಞಾನ ಸಂಸ್ಥೆಯಾಗಿರುವ ಐಐಎಸ್‌ಸಿ ಹಲವು ಆವಿಷ್ಕಾರಗಳಿಗೆ ಸಾಕ್ಷಿಯಾಗಿದೆ. ಇಲ್ಲಿ ಅಧ್ಯಯನ ಮಾಡಿ ಪದವಿ ಪಡೆದ ವಿದ್ಯಾರ್ಥಿಗಳು ವಿಶೇಷ ಕೌಶಲವನ್ನು ಸಾಧಿಸಿ ಹೊರ ಹೋಗುತ್ತಾರೆ. ಅದಕ್ಕೆ ಸಾಕ್ಷಿ ಇಂದಿನ ಘಟಿಕೋತ್ಸವ ಎಂದು ಭಾರ್ಗವ್ ಪ್ರಶಂಸಿಸಿದರು. ಕಾರ್ಯಕ್ರಮದಲ್ಲಿ ಐಐಎಸ್‌ಸಿ ಕೌನ್ಸಿಲ್ ಮುಖ್ಯಸ್ಥರಾದ ಪದ್ಮಭೂಷಣ ಕ್ರಿಸ್ ಗೋಪಾಲಕೃಷ್ಣ, ನಿರ್ದೇಶಕ ಪ್ರೊ. ಗೋವಿಂದನ್ ರಂಗರಾಜನ್, ಡೀನ್ ಅಶೋಕ ಸುಂದರರಾಜ್ ಮತ್ತಿತರರು ಉಪಸ್ಥಿತರಿದ್ದರು.

84 ವಿದ್ಯಾರ್ಥಿಗಳಿಗೆ ಪದಕ ಪ್ರದಾನ

ಘಟಿಕೋತ್ಸವದಲ್ಲಿ ಸುಮಾರು 1,487 ಪಿಎಚ್‌ಡಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು 106 ಪದವಿಪೂರ್ವ ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ಪಡೆದರು. ವಿಶೇಷವಾಗಿ ಶೈಕ್ಷಣಿಕ ಸಾಧನೆಗೈದ 84 ವಿದ್ಯಾರ್ಥಿಗಳಿಗೆ ವಿವಿಧ ಪದಕಗಳನ್ನು ನೀಡಿ ಗೌರವಿಸಲಾಯಿತು. ಪ್ರೊ. ಬಿ.ಜಿ. ರಾಘವೇಂದ್ರ ಸ್ಮಾರಕ ಪದಕವನ್ನು ಪಡೆದ ಸೋಮವಾನಿಶ್ ನಿಖಿಲ್ ಚೊಟ್ಟು ಎಂಬ ವಿದ್ಯಾರ್ಥಿ ಕಳೆದ ಏಪ್ರಿಲ್ನಲ್ಲಿ ಅಕಾಲಿಕವಾಗಿ ಮರಣಹೊಂದಿದ್ದು, ಮರಣೋತ್ತರವಾಗಿ ಪದಕವನ್ನು ಘೋಷಿಸಿದ್ದು, ನೆರೆದವರನ್ನು ಭಾವುಕಗೊಳಿಸಿತು.

"ಪ್ರಯೋಗಾಲಯಗಳಲ್ಲಿ ಅಭಿವೃದ್ಧಿ ಪಡಿಸುವ ಉತ್ಪನ್ನಗಳು, ತಂತ್ರಜ್ಞಾನಗಳು ಜನಸಾಮಾನ್ಯರ ಬಳಕೆಗೂ ಸಿಗುವಂತಾಗಬೇಕು. ಕುಡಿಯುವ ನೀರು, ಕ್ಯಾನ್ಸ್‌ರ್, ಅಲ್‌ಝೈಮರ್ ಮುಂತಾದ ಕಾಯಿಲೆಗಳಿಗೆ ಔಷಧಿ ಹೀಗೆ ಸಮಾಜದ ಸಮಸ್ಯೆಗಳನ್ನು ಕೇಂದ್ರೀಕರಿಸುವ ಸಂಶೋಧನೆಗಳಿಗೆ ಹೆಚ್ಚಿನ ಅವಕಾಶವಿದೆ. ನಾವು ಕಂಡು ಹಿಡಿಯುವ ಪರಿಹಾರಗಳು ಮಿತವ್ಯಯಿ ಆಗಿರಬೇಕು. ಜಗತ್ತಿನ ಇತರ ದೇಶಗಳಿಗೂ ಕೈಗೆಟಕುವಂತಿರಬೇಕು. ಕೃತಕ ಬುದ್ದಿಮತ್ತೆ ಸೃಷ್ಟಿಸುತ್ತಿರುವ ಅವಕಾಶಗಳನ್ನು ಸದುಪಯೋಗ ಪಡಿಸಬೇಕು. ದೇಶದಲ್ಲಿ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಸಂಶೋಧನೆಗೆ ಒತ್ತು ನೀಡಬೇಕು"  -ಸೇನಾಪತಿ ಕ್ರಿಸ್ ಗೋಪಾಲಕೃಷ್ಣನ್, ಐಐಎಸ್‌ಸಿ ಕೌನ್ಸಿಲ್ ಮುಖ್ಯಸ್ಥ