ಜಿಲ್ಲೆ

ಅಮಿತ್ ಷಾ ವಿರುದ್ಧದ ಹೋರಾಟಕ್ಕೆ ಅಹಿಂದ ಬೆಂಬಲ; ಸಂಘಟನೆ ಜಿಲ್ಲಾಧ್ಯಕ್ಷ ಬಿ.ಆರ್. ಲಕ್ಷ್ಮೀಶ್ ಹೇಳಿಕೆ

ಹಾಸನ: ಡಾ. ಬಿ.ಆರ್ ಅಂಬೇಡ್ಕರ್ ಬಗ್ಗೆ ಲಘುವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಜ.8ರ ಬುಧವಾರ ಹಾಸನದಲ್ಲಿ ದಲಿತ ಜನಪರ ಚಳವಳಿಗಳ ಒಕ್ಕೂಟ ಕರೆ ಕೊಟ್ಟಿರುವ ಹೋರಾಟಕ್ಕೆ ಅಹಿಂದ ಸಂಘಟನೆಯಿಂದ ಸಂಪೂರ್ಣ ಬೆಂಬಲ ಸೂಚಿಸುತ್ತೇವೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಹಿಂದುಳಿದವರ ದಲಿತರ ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ಆರ್. ಲಕ್ಷ್ಮೀಶ್ ತಿಳಿಸಿದರು.

ಭಾರತದ ಸಂವಿಧಾನ ಶಿಲ್ಪಿ, ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಆಡಿರುವ ಅಪಮಾನಕರ ಮಾತುಗಳು ಅತ್ಯಂತ ಖಂಡನೀಯವಾದುದು. ಈ ಮಾತುಗಳು ಅಮಿತ್ ಷಾ ಅವರ ಮನುವಾದಿ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಹಾಗೂ ಅವರು ಹಿಂದೆಯೂ ಈಗಲೂ ಮುಂದೆಯೂ ಬಾಬಾ ಸಾಹೇಬರನ್ನು ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಸಾಬೀತಾಗುತ್ತದೆ. ಇಂತಹ ಮನುವಾದಿ ಮನಸ್ಥಿತಿಯ ಅಮಿತ್ ಷಾ ಭಾರತದ ಗೃಹ ಸಚಿವರಾಗಿ ಮುಂದುವರಿದರೆ ಡಾ.ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಅವರ ಆಶಯಗಳಿಗೆ ವಿರುದ್ಧವಾಗುತ್ತದೆ. ಹಾಗೂ ಭಾರತದ ಸಂವಿಧಾನದ ಮೂಲ ತತ್ವಗಳಿಗೆ ದಕ್ಕೆಯಾಗುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಹಿಂದ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಲುವನಹಳ್ಳಿ ಶೇಖರಪ್ಪ, ಉಪಾಧ್ಯಕ್ಷ ಮಲ್ಲಿಕಾರ್ಜುನ ಭಂಡಾರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ಎಲ್. ವಿಜಯಕುಮಾರ್, ಬೇಲೂರು ತಾಲೂಕು ಅಧ್ಯಕ್ಷ ಜಾವಗಲ್ ಇಂದ್ರೇಶ್, ಅರಸೀಕೆರೆ ತಾಲೂಕು ಅಧ್ಯಕ್ಷ ಮಲ್ಲಾಪುರ ರಮೇಶ್ ಇತರರು ಉಪಸ್ಥಿತರಿದ್ದರು.