ಜಿಲ್ಲೆ

ಸಿದ್ದರಾಮಯ್ಯ ಪರವಾಗಿ ಮೈಸೂರಿನಲ್ಲಿ ಧ್ವನಿ ಎತ್ತಿದ ಅಹಿಂದ ವರ್ಗ

ಮೈಸೂರು: ಶೋಷಿತರು ಹಾಗೂ ಹಿಂದುಳಿದ ವರ್ಗದವರು ಅಧಿಕಾರದಲ್ಲಿರುವುದನ್ನು ಸಹಿಸದ ಕೋಮುವಾದಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಷಡ್ಯಂತ್ರ ರೂಪಿಸುತ್ತಿದ್ದಾರೆ ಚಿಂತಕ ಜಾಣಗೆರೆ ವೆಂಕಟರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಅಹಿಂದ ಸಂಘಟನೆಗಳ ವತಿಯಿಂದ ನಗರದ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ರಾಜ್ಯಪಾಲರ ನಡೆ ಮತ್ತು ದ್ವೇಷ ರಾಜಕಾರಣ’ ಚಿಂತನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ 5 ವರ್ಷ ಯಶಸ್ವಿಯಾಗಿ ಅಧಿಕಾರ ಪೂರೈಸಿ ಇದೀಗ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ರುವುದೇ ಕೋಮುವಾದಿಗಳು ಹಾಗೂ ಜಾತಿವಾದಿಗಳ ಹೊಟ್ಟೆಹುರಿಗೆ ಕಾರಣವಾಗಿದೆ. ಇದೇ ರೀತಿಯ ಕಿರುಕುಳವನ್ನು ಹಿಂದುಳಿದ ವರ್ಗಗಳ ಧ್ವನಿಯಾಗ್ದಿ ದೇವರಾಜ ಅರಸು, ವೀರಪ್ಪಮೊಯ್ಲಿ, ಎಸ್. ಬಂಗಾರಪ್ಪ, ಧರ್ಮಸಿಂಗ್ ಎದುರಿಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ಅಹಿಂದ ವರ್ಗದವರು ಒಗ್ಗೂಡಿ ನಿಲ್ಲಬೇಕು ಎಂದು ಕರೆ ನೀಡಿದರು.

ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹೊರಟಿರುವವರ ಪೈಕಿ ಹಲವರು ಹಗರಣದಲ್ಲಿ ಮುಳುಗಿದವರಾಗಿದ್ದಾರೆ. ಅವರಿಗೆ ಪಾದಯಾತ್ರೆ ಕೈಗೊಳ್ಳುವ ಯಾವುದೇ ನೈತಿಕತೆ ಇಲ್ಲ. ಅತ್ಯಾಚಾರ, ಭ್ರಷ್ಟಾಚಾರದಲ್ಲಿ ಪಾಲ್ಗೊಂಡ ಹಲವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಸಮಾಜದ ಎದುರು ತಲೆ ತಗ್ಗಿಸಬೇಕಾದ ಇವರು ತಲೆ ಎತ್ತಿ ನಡೆಯುತ್ತಿರುವುದು ವಿಪರ್ಯಾಸ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಮಾತನಾಡಿ, ಶೋಷಿತರ ಪರವಾಗಿ ಧ್ವನಿ ಎತ್ತಿದ ಹಲವಾರು ನಾಯಕರು ರಾಜ್ಯದಲ್ಲಿ ಸಂಕಷ್ಟಕ್ಕೆ ಗುರಿಯಾಗಿರುವ ಇತಿಹಾಸವಿದೆ. ಪ್ರತಿಯೊಬ್ಬರನ್ನು ಸಮಾನವಾಗಿ ಕಂಡು ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಜಗಜ್ಯೋತಿ ಬಸವಣ್ಣ ಸಹ ಕೋಮುವಾದಿಗಳ ಕಿರುಕುಳಕ್ಕೆ ಗುರಿಯಾಗಬೇಕಾಯಿತು. ಬಸವಣ್ಣ ಅವರಿಗೆ ಕಿರುಕುಳ ನೀಡಿದವರು ಇನ್ನು ಸಿದ್ದರಾಮಯ್ಯ ಅವರನ್ನು ಬಿಡುತ್ತಾರೆಯೇ ಎಂದು ಪ್ರಶ್ನಿಸಿದರು.

ಸಮಾಜದ ಪರವಾಗಿ ನಿಂತವರನ್ನು ವರ್ತಮಾನ ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುತ್ತದೆ. ಆದರೆ, ಇತಿಹಾಸ ಅಂತಹ ನಾಯಕರನ್ನು ಸ್ಮರಿಸಿಕೊಳ್ಳುತ್ತದೆ. ಇಂದು ಸಿದ್ದರಾಮಯ್ಯ ವಿರುದ್ಧ ಟೀಕೆಗಳು ವ್ಯಕ್ತವಾಗಬಹುದು. ಆದರೆ, ಇನ್ನು ಹತ್ತಾರು ವರ್ಷಗಳು ಕಳೆದ ನಂತರ ನಗರದಲ್ಲಿ ಸಿದ್ದರಾಮಯ್ಯ ಅವರ ಹಲವು ಪ್ರತಿಮೆಗಳು ನಿರ್ಮಾಣವಾಗಬಹುದು ಎಂದು ಭವಿಷ್ಯ ನುಡಿದರು.

ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಪ್ರಾಸಿಕ್ಯೂಷನ್ ನೀಡಿದ ತಕ್ಷಣ ಸಿದ್ದರಾಮಯ್ಯ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುವ ಅವಕಾಶ ಇರುವುದಿಲ್ಲ. ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡಿದ ನಂತರ ನ್ಯಾಯಾಲಯ ಪ್ರಕರಣ ವಿಚಾರಣೆಗೆ ಯೋಗ್ಯವಾ ಗಿದೆಯೇ ಎಂದು ಪರಿಶೀಲನೆ ನಡೆಸುತ್ತದೆ. ಹಾಗಾಗಿ ಸಿದ್ದರಾಮಯ್ಯ ಅವರಿಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದರು.

ವೇದಿಕೆಯಲ್ಲಿ ಸಾಹಿತಿಗಳಾದ ಕೆ.ಷರೀಫಾ, ಬಂಜಗೆರೆ ಜಯಪ್ರಕಾಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಡಿ.ತಿಮ್ಮಯ್ಯ, ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು, ರಾಜ್ಯ ಕುರುಬ ಸಮಾಜದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಹಾಗೂ ಇತರರು ಇದ್ದರು.