ಜಿಲ್ಲೆ

ಅಹಿಂದ ಕಾರ್ಯಕಾರಿಣಿ ಸಭೆ ಆ. 3ರಂದು,  ಸಂಘಟನೆ ಬಲಪಡಿಸಲು ಹುಬ್ಬಳ್ಳಿಯಲ್ಲಿ ಗಹನ ಚರ್ಚೆ,  ಸಿಎಂ ಬದಲಾವಣೆ ಚರ್ಚೆ ಸಂದರ್ಭದಲ್ಲಿ ಮತ್ತೆ ಮುನ್ನೆಲೆಗೆ

ಹುಬ್ಬಳ್ಳಿ: ಅಲ್ಪಸಂಖ್ಯಾತ, ಹಿಂದುಳಿದ, ದಲಿತರ (ಅಹಿಂದ) ಒಕ್ಕೂಟದ ರಾಜ್ಯ ಕಾರ್ಯಕಾರಿಣಿ ಹಾಗೂ ಪದಾಧಿಕಾರಿಗಳ ಸಭೆ ಆಗಸ್ಟ್ 3ರಂದು ಬೆಳಗ್ಗೆ 11.30ಕ್ಕೆ ಹಳೇಹುಬ್ಬಳ್ಳಿ ಗುರುನಾಥನಗರದ ಪ್ರಿಯದರ್ಶಿನಿ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.

ಅಹಿಂದ ಕಾರ್ಯಾಧ್ಯಕ್ಷ ಸಿ.ಎಂ. ಕರಡಿಕೊಪ್ಪ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿರುವ ಸಭೆಯಲ್ಲಿ ರಾಜ್ಯಾಧ್ಯಂತ ಸಂಘಟನೆ ಬಲಪಡಿಸುವುದು ಹಾಗೂ ತೆರವಾದ ಸಂಘಟನೆಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಿರ್ಧಾರವನ್ನು ಅದೇ ದಿನ ಕೈಗೊಳ್ಳಲಾಗುತ್ತಿದೆ. ಇದರೊಂದಿಗೆ ಅಹಿಂದ ರಾಜ್ಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕೂಡ ನಡೆಯಲಿದೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತ ಚರ್ಚೆ ದಿನಕ್ಕೊಂದು ರೂಪ ಪಡೆಯುತ್ತಿರುವ ಸಂದರ್ಭದಲ್ಲಿ ಎರಡು ದಶಕದ ಹಿಂದೆ ಸಿದ್ದರಾಮಯ್ಯ ಅವರಿಗೆ ಮಹಾ ಶಕ್ತಿ ತುಂಬಿದ್ದ ಈ ಸಂಘಟನೆ ಬಲಪಡಿಸಲು ಅಹಿಂದ ಮತ್ತೆ ಮುನ್ನೆಲೆಗೆ ಬಂದಿದೆ.

ಸಭೆಯಲ್ಲಿ ಗಹನ ಚರ್ಚೆ ನಂತರ ಒಕ್ಕೂಟದ ಪದಾಧಿಕಾರಿಗಳ ನಿಯೋಗ ರಚನೆ ಮಾಡಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡುವುದು ಹಾಗೂ ಅವರ ಒಪ್ಪಿಗೆಯನ್ನು ಪಡೆದುಕೊಂಡು ಬೆಳಗಾವಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಅಧ್ಯಕ್ಷರ ಪೂರ್ವಭಾವಿ ಸಭೆ ಕರೆಯುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಕಾರ್ಯಾಧ್ಯಕ್ಷ ಸಿ.ಎಂ. ಕರಡಿಕೊಪ್ಪ ತಿಳಿಸಿದ್ದಾರೆ.

ಜಾರಕಿಹೊಳಿ ಅವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಹುಬ್ಬಳ್ಳಿಯಲ್ಲಿ ಮಹಾಸಮಾವೇಶ ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲದೇ ಕಾಂತರಾಜು ವರದಿ ಜಾರಿಗೆ ಒತ್ತಾಯಿಸಲಾಗುವುದು ಎಂದರು.

2005ರಲ್ಲಿ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಅಹಿಂದ ಸಮಾವೇಶ ಇದೀಗ 20 ವರ್ಷ ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ಅದರ ಸವಿನೆನಪಿಗಾಗಿ 2025ರ ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಅಹಿಂದ ಮಹಾಸಮಾವೇಶ ಏರ್ಪಡಿಸುವ ಉದ್ದೇಶ ಇದರ ಹಿಂದಿದೆ.

ಇದಕ್ಕಾಗಿ ಅಹಿಂದ ಮಠಾಧೀಶರನ್ನು ಭೇಟಿ ಮಾಡುವುದು, ಅಹಿಂದ ಸಚಿವರು, ಶಾಸಕರನ್ನು ಸಂಪರ್ಕ ಮಾಡುವುದು ಸೇರಿ ಅನೇಕ ಚಟುವಟಿಕೆಗಳನ್ನು ನಡೆಸುವ ಬಗ್ಗೆ ಗಂಭೀರ ಚರ್ಚೆಗಳು ನಡೆಯಲಿವೆ.
ಹುಬ್ಬಳ್ಳಿ ಬೃಹತ್ ಸಮಾವೇಶದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿ ಆಹ್ವಾನ ನೀಡಲಾಗುವುದು. ಅವರ ಒಪ್ಪಿಗೆ ಪಡೆದು ದಿನಾಂಕ ನಿಗದಿ ಮಾಡಲಾಗುವುದು. ಅಲ್ಲಿಯೂ ಕಾಂತರಾಜು ವರದಿ ಜಾರಿಗೆ ಆಗ್ರಹಿಸಲಾಗುವುದು ಎಂದು ಸಿ.ಎಂ. ಕರಡಿಕೊಪ್ಪ ಅವರು ತಿಳಿಸಿದ್ದಾರೆ.