ಜಿಲ್ಲೆ

ಆಗುಂಬೆ ಘಾಟಿ ಅಭಿವೃದ್ಧಿಗೆ 180 ಕೋಟಿ ರೂ.

Dakshina Kannada

- ಅರವಿಂದ ಅಕ್ಲಾಪುರ ಶಿವಮೊಗ್ಗ

ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳನ್ನು ಸಂಪರ್ಕಿಸುವ ಆಗುಂಬೆ ಘಾಟಿ ರಸ್ತೆಯ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 180 ಕೋಟಿ ರೂ.ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರದೇಶ ವನ್ಯಜೀವಿ ವ್ಯಾಪ್ತಿಗೆ ಸೇರುವುದರಿಂದ ಅರಣ್ಯ ಇಲಾಖೆ ಹಸಿರು ನಿಶಾನೆ ಸಿಗಬೇಕಿದೆ.

ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 169(ಎ)ಯಲ್ಲಿರುವ ಆಗುಂಬೆ ಘಾಟಿಯ 14 ತಿರುವುಗಳ ಪೈಕಿ ಕೆಲವೆಡೆ ರಸ್ತೆಗಳು ಕಿರಿದಾಗಿವೆ. ಇದನ್ನು 9.5 ಮೀಟರ್‌ಗೆ ವಿಸ್ತರಿಸುವ, ಆ ಮೂಲಕ ಘಾಟಿಯಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ಉದ್ದೇಶ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ್ದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಓರ್ವ ಇಂಜಿನಿಯರ್ ‘ವಿಜಯವಾಣಿ’ಗೆ ತಿಳಿಸಿರುವ ಪ್ರಕಾರ, ಆಗುಂಬೆ ಘಾಟಿ ರಸ್ತೆಯ ಕೆಲವೆಡೆ ಈಗಾಗಲೇ 9.5 ಮೀಟರ್ ಅಗಲದ ರಸ್ತೆಯಿದೆ. ಇನ್ನು ಕೆಲ ಕಡೆಗಳಲ್ಲಿ 3ರಿಂದ 4 ಮೀಟರ್ ಅಗಲವಿದೆ. ಇಲ್ಲಿ ಮರ ಕಡಿಯದೆ ರಸ್ತೆ ಅಗಲ ವಿಸ್ತರಣೆ ಸಾಧ್ಯವಿದೆ. ಹೀಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.

5 ಹೆಕ್ಟೇರ್ ಭೂಮಿ ಬೇಕು

ಅರಣ್ಯ ಇಲಾಖೆ ವ್ಯಾಪ್ತಿ ಪ್ರದೇಶದಲ್ಲಿ ಯಾವುದಾದರೂ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಇಲಾಖೆ ಅನುಮತಿ ಅವಶ್ಯ. ಆ ಪ್ರದೇಶದಲ್ಲಿ ಬಳಸುವ ಭೂಮಿಯ ಪ್ರಮಾಣದ ಎರಡರಷ್ಟು ಬದಲಿ ಭೂಮಿ ಹಾಗೂ ಅರಣ್ಯ ಬೆಳೆಸಲು ಪರಿಹಾರ ರೂಪದಲ್ಲಿ ಹಣವನ್ನು ಅರಣ್ಯ ಇಲಾಖೆಗೆ ನೀಡಬೇಕಾಗುತ್ತದೆ. ಪ್ರಸ್ತುತ ಆಗುಂಬೆ ಘಾಟಿ ರಸ್ತೆಯ ಅಭಿವೃದ್ಧಿಗೆ ರಾ.ಹೆ.ಪ್ರಾಧಿಕಾರದಿಂದ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಈ ಕಾಮಗಾರಿಯ ಘಾಟಿ ರಸ್ತೆಯ ಪಕ್ಕದ ಒಟ್ಟು 2.50 ಹೆಕ್ಟೇರ್ ಭೂಮಿ ಬೇಕೆಂದು ಅಂದಾಜಿಸಲಾಗಿದೆ. ಹೀಗಾಗಿ ಬಳಕೆಯ ಎರಡರಷ್ಟು ಎಂದರೆ 5 ಹೆಕ್ಟೇರ್ ಭೂಮಿಯನ್ನು ಜಿಲ್ಲಾಡಳಿತ ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು. ಆಗುಂಬೆ ಘಾಟಿ ಹಾಗೂ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯಲ್ಲಿ ಹಾದು ಹೋಗುವುದರಿಂದ ಮುಂದಿನ ದಿನಗಳಲ್ಲಿ ಯಾವ ಜಿಲ್ಲೆಯಲ್ಲಿ ಭೂಮಿ ನೀಡಬೇಕು ಎಂಬ ಗೊಂದಲ ಶುರುವಾದರೂ ಆಶ್ಚರ್ಯವಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಸ್ತುತ ಅರಣ್ಯ ಇಲಾಖೆ ಅನುಮತಿ ದೊರೆತರೆ ಬಳಿಕ ಭೂಮಿ ಗುರುತಿಸುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.

ಬೇರೆ ಕಡೆ ಕಾಮಗಾರಿ ಆರಂಭ

ತೀರ್ಥಹಳ್ಳಿ-ಮಲ್ಪೆ ನಡುವಿನ ರಾಷ್ಟ್ರೀಯ ಹೆದ್ದಾರಿ 169(ಎ)ಯಲ್ಲಿ ಉಡುಪಿ ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ ರಸ್ತೆ ಅಗಲ ಮಾಡುವ ಕಾಮಗಾರಿ ಆರಂಭವಾಗಿದೆ. ಹಾಲಿ ರಸ್ತೆಯನ್ನು 10 ಮೀಟರ್(2 ಲೇನ್)ಗೆ ವಿಸ್ತರಿಸುವ, ಅಪಾಯಕಾರಿ ತಿರುವುಗಳನ್ನು ನೇರಗೊಳಿಸುವ, ಕಿರಿದಾದ ಸೇತುವೆಗಳನ್ನು ಮರು ನಿರ್ಮಾಣ ಮಾಡುವ ಕಾಮಗಾರಿ ಭರದಿಂದ ನಡೆಯುತ್ತಿದೆ. ಈ ಕಾರಣದಿಂದ ಆಗುಂಬೆ ಘಾಟಿ ರಸ್ತೆ ಕಾಮಗಾರಿಗೂ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಸೋಮೇಶ್ವರ ವ್ಯಾಪ್ತಿ ಸಮಸ್ಯೆ

ತೀರ್ಥಹಳ್ಳಿ-ಮಲ್ಪೆ ನಡುವಿನ ರಸ್ತೆ ವಿಸ್ತರಣೆಗೆ ಆರಂಭದಲ್ಲಿ ಹಲವು ಅಡೆತಡೆಗಳಿದ್ದವು. ಇದು ಸ್ಥಳೀಯರು ಹಾಗೂ ಪರಿಸರವಾದಿಗಳ ನಡುವೆ ಜಟಾಪಟಿಗೂ ಕಾರಣವಾಗಿತ್ತು. ಜನವಸತಿ ಪ್ರದೇಶಗಳ ತೆರವು ಒಂದು ಕಡೆಯಾದರೆ ಮರ ತೆರವುಗೊಳಿಸುವ ಕೆಲಸವೂ ಸವಾಲಿನದಾಗಿತ್ತು. ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡ ರಾ.ಹೆ. ಪ್ರಾಧಿಕಾರ ಎರಡು ತುದಿಯಿಂದ ಕಾಮಗಾರಿ ಆರಂಭಿಸಿದೆ. ಈಗ ಸೋಮೇಶ್ವರ ಅಭಯಾರಣ್ಯದ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಳ್ಳಲು ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕಿದೆ. ಆಗುಂಬೆ ಘಾಟಿ ಸೇರಿದಂತೆ ಹೆಬ್ರಿವರೆಗಿನ ಮಾರ್ಗದಲ್ಲಿ ರಸ್ತೆ ವಿಸ್ತರಣೆಗೆ ಅರಣ್ಯ ಇಲಾಖೆ ಅನುಮತಿ ಸಿಗುವುದೇ ಎಂಬುದು ಪ್ರಶ್ನೆ.

ಘಾಟಿ ರಸ್ತೆ ಅಭಿವೃದ್ಧಿ ಅವಶ್ಯ ಆಗುಂಬೆ ಘಾಟಿ ರಸ್ತೆ ಅಭಿವೃದ್ಧಿಯಾಗಬೇಕು ಎಂಬುದರಲ್ಲಿ ತಕರಾರಿಲ್ಲ. ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದ ವೇಳೆ ಘಾಟಿಯಲ್ಲಿ ರಸ್ತೆ ಕುಸಿದಿರುವುದು, ಗುಡ್ಡ ಕುಸಿದ ಪರಿಣಮ ತಿಂಗಳಿಡೀ ವಾಹನ ಸಂಚಾರ ಸ್ಥಗಿತಗೊಂಡ ನಿದರ್ಶನಗಳಿವೆ. ಈ ಹಿನ್ನೆಲೆಯಲ್ಲಿ ಇಲ್ಲಿನ ರಸ್ತೆ ಅಭಿವೃದ್ಧಿ ಅವಶ್ಯ. ಆದರೆ, ಪರಿಸರ ಸೂಕ್ಷ್ಮಪ್ರದೇಶವಾದ್ದರಿಂದ ಇಲ್ಲಿ ಪರಿಸರಕ್ಕೆ ಧಕ್ಕೆಯಾಗದಂತೆ ರಸ್ತೆ ಅಗಲ ಮಾಡುವುದು ಸುಲಭದ ಮಾತಲ್ಲ. ಪಶ್ಚಿಮಘಟ್ಟದ ಸೂಕ್ಷ್ಮಪ್ರದೇಶವಾಗಿರುವುದರಿಂದ ಅರಣ್ಯ ಇಲಾಖೆ ಸುಲಭವಾಗಿ ಅನುಮತಿ ನೀಡುತ್ತದೆ ಎಂದು ಹೇಳುವಂತಿಲ್ಲ.

ಆಗುಂಬೆ ಘಾಟಿ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾ.ಹೆ.ಪ್ರಾಧಿಕಾರದಿಂದ ಪ್ರಸ್ತಾವನೆ ಸಲ್ಲಿಸಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಆದರೆ ಅವರು ನಮ್ಮ ಇಲಾಖೆಯ ವೆಬ್‌ಸೈಟ್‌ನಲ್ಲಿ ಅನುಮತಿ ಕೋರಿದ್ದರೆ ನಮಗೆ ತಿಳಿಯುವುದಿಲ್ಲ. ತೀರ್ಥಹಳ್ಳಿ ಶಾಸಕರು ಆಗುಂಬೆ ಘಾಟಿ ಅಭಿವೃದ್ಧಿ ಪ್ರಸ್ತಾವನೆ ಸಲ್ಲಿಸಿದ್ದ ಹೇಳಿಕೆಯನ್ನು ಗಮನಿಸಿದ್ದೇನೆ. ದೇವನ್, ಡಿಎಫ್‌ಒ(ವನ್ಯಜೀವಿ ವಿಭಾಗ), ಕಾರ್ಕಳ