ಜಿಲ್ಲೆ

ಸಮಗ್ರ ಕೃಷಿಯಿಂದ ಯಶಸ್ಸು

ಷಣ್ಮುಖ ಬಿ.ಈ. ನ್ಯಾಮತಿ

ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಯಶಸ್ಸು ಸಾಧ್ಯ ಎಂಬುದನ್ನು ನ್ಯಾಮತಿ ತಾಲೂಕಿನ ಕುಂಕುವ ಗ್ರಾಮದ ರೈತ ಶಶಿಧರ್ ಸಾಬೀತುಪಡಿಸಿದ್ದಾರೆ.

ಕೇವಲ 1 ಎಕರೆ 5 ಗುಂಟೆ ಜಮೀನಿನಲ್ಲಿ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ, ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಂಡು, ವೈವಿಧ್ಯಮಯ ಬೆಳೆಗಳನ್ನು ಬೆಳೆಯುವ ಮೂಲಕ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಕೃಷಿಯನ್ನೇ ಭವಿಷ್ಯದ ಜೀವನ ನಿರ್ವಹಣೆಯ ಮಾರ್ಗವನ್ನಾಗಿ ಮಾಡಿಕೊಂಡಿರುವ ಶಶಿಧರ್, ತಮ್ಮ ಹೊಸ ಪದ್ಧತಿಗಳ ಮೂಲಕ ಯಶಸ್ಸಿನ ಹಾದಿಯಲ್ಲಿದ್ದಾರೆ.

ಒಂದೇ ಬೆಳೆಗೆ ಸೀಮಿತವಾಗದೆ, ಜಮೀನಿನಲ್ಲಿ ಅರಿಶಿಣ, ಶುಂಠಿ, ಕಾಫಿ, ಕಾಳು ಮೆಣಸು, ಅಡಕೆ ಹೀಗೆ ಅಂತರ ಬೇಸಾಯ ಪದ್ಧತಿಯನ್ನು ಅನುಸರಿಸಿದ್ದಾರೆ. ಪ್ರಮುಖವಾಗಿ, ಬೆಳೆಗಳನ್ನು ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಬೆಳೆಗಳಾಗಿ ವಿಂಗಡಿಸಿ, ಮೂರು ಹಂತಗಳಲ್ಲಿ ಬೆಳೆ ಅಭಿವೃದ್ಧಿಪಡಿಸಿ ಬೆಳೆಯುತ್ತಿದ್ದಾರೆ.

ಅಲ್ಪಾವಧಿ ಬೆಳೆಯಾಗಿ ಬದನೆಕಾಯಿ, ಮೆಣಸಿನಕಾಯಿ, ಅರಿಶಿಣ, ಶುಂಠಿ ಇತರೆ ತರಕಾರಿಗಳು, ಮಧ್ಯಮ ಅವಧಿ ಬೆಳೆಯಾಗಿ ಪಪ್ಪಾಯಿ, ಡ್ರ್ಯಾಗನ್ ಪೂ›ಟ್, ನುಗ್ಗೆ, ಕರಿಬೇವು, ಬಾಳೆ ಮತ್ತು ದೀರ್ಘಾವಧಿ ಬೆಳೆಯಾಗಿ ಅಡಕೆ, ತೆಂಗು, ಕಾಫಿ, ಸೀತಾಫಲ, ಲಕ್ಷ್ಮಣ ಫಲ, ಚೆರಿ, ರಾಂಬೀಟಾನ್, ಮೆಕೊಡೊವಿಯಾ, ಸೀಬೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಚೀಲೂರು ಕೃಷಿ ಇಲಾಖೆ ಅಧಿಕಾರಿ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಅತಿಕ್ ಉಲ್ಲಾ ಮತ್ತು ಸಹಾಯಕ ತಾಂತ್ರಿಕ ವ್ಯವಸ್ಥಾಪಕ ರಿಹಾನ್ ಮಾರ್ಗದರ್ಶನ ಹಾಗೂ ಸಲಹೆ ಸೂಚನೆಗಳನ್ನು ಪಡೆದು ಯಶಸ್ಸು ಸಾಧಿಸುತ್ತಿರುವುದಾಗಿ ರೈತ ಶಶಿಧರ್ ತಿಳಿಸಿದ್ದಾರೆ.

ಅರಣ್ಯ ಕೃಷಿ ಪದ್ಧತಿಯಿಂದ ಆದಾಯ

ಅರಣ್ಯ ಕೃಷಿ ಪದ್ಧತಿ ಅಳವಡಿಸಿಕೊಂಡು 200 ಸಾಗುವಾನಿ, ನೆಲ್ಲಿಕಾಯಿ, ಸಿಲ್ವರ್, ಬೇವು, 10 ಹೊನ್ನೆ ಸೇರಿ ವಿವಿಧ ಜಾತಿಯ ಗಿಡ- ಮರಗಳನ್ನು ಬೆಳೆದಿರುವುದರಿಂದ ಭವಿಷ್ಯದಲ್ಲಿ ಹೆಚ್ಚು ಆದಾಯ ಬರುವುದಾಗಿ ನಿರೀಕ್ಷೆ ಇದೆ. ಜತೆಗೆ ಕೃಷಿ ಹೊಂಡ ನಿರ್ವಿುಸಿ ಅದರಲ್ಲಿ ಮೀನು ಸಾಕಣೆ ಮಾಡುವುದು ಮತ್ತು ಕೃಷಿ ಬೆಳೆಗಳಾದ ಅಲಸಂದೆ, ಹೆಸರು, ಮೆಕ್ಕೆಜೋಳ, ತೊಗರಿ ಬೆಳೆಯುವುದರಿಂದ ಆದಾಯ ವೃದ್ಧಿಸಿಕೊಳ್ಳುತ್ತದೆ ಎನ್ನುತ್ತಾರೆ ಶಶಿಧರ್.

ನೈಸರ್ಗಿಕ ಪದ್ಧತಿಗಳಿಗೆ ಆದ್ಯತೆ

ಜಮೀನಿನಲ್ಲಿ ಬೆಳೆದ ಕಳೆಗಳನ್ನು ತ್ಯಾಜ್ಯವಾಗಿ ಪರಿವರ್ತಿಸಿ, ಮಣ್ಣಿನಲ್ಲಿ ಇಂಗಾಲದ ಪ್ರಮಾಣ ಹೆಚ್ಚಿಸಿ, ಗಿಡಗಳಿಗೆ ಗೊಬ್ಬರವಾಗಿ ಬಳಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತಿದ್ದಾರೆ. ಭೂಮಿಗೆ ಜೀವಾಮೃತ ತಯಾರಿಸಿ ಗಿಡಗಳಿಗೆ ಸಿಂಪಡಿಸಿ ನಿರ್ವಹಣೆ ಮಾಡುತ್ತಿದ್ದು, ಈ ಬಗ್ಗೆ ನಿರಂತರ ಅಧ್ಯಯನವನ್ನು ನಡೆಸುತ್ತಿದ್ದಾರೆ. ಹವಾಮಾನ ಆಧಾರಿತ ಬೆಳೆಗಳ ಸಂಶೋಧನೆ ಜತೆಗೆ, ನಾಟಿ ಕೋಳಿ ಸಾಕಣೆ ಮತ್ತು ಪಶುಸಂಗೋಪನೆಯನ್ನೂ ಮಾಡುತ್ತಿದ್ದಾರೆ.