ಜಿಲ್ಲೆ

ಕೃಷಿಯಲ್ಲಿ ವಿಜ್ಞಾನ, ತಂತ್ರಜ್ಞಾನ ಬಳಕೆ ಅಗತ್ಯ

Mysuru

ಮೈಸೂರು: ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಂಡಾಗ ಮಾತ್ರ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಂ.ಮಹಾದೇವಪ್ಪ ಹೇಳಿದರು.
ಬೀಜವೇದಿಕೆ, ಕೃಷಿ ವಿವಿ, ಮೈಸೂರು ತೋಟಗಾರಿಕೆ ಮಹಾವಿದ್ಯಾಲಯದ ಸಹಯೋಗದಲ್ಲಿ ರೈತ ಮಿತ್ರ ಫಾರ್ಮರ್ಸ್‌ ಪ್ರೊಡ್ಯೂಸರ್ ಕಂ.ಲಿ. ರಾಜೇಂದ್ರ ಸಭಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ‘ಬೀಜ ಮಸೂದೆ 2019ರ ಸಾಧಕ-ಬಾಧಕ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ದೇಶದಲ್ಲಿ ಈವರೆಗೂ ಕೃಷಿ ಕ್ಷೇತ್ರದಲ್ಲಿ ಶೇ.20ರಷ್ಟು ಮಾತ್ರವೇ ವಿಜ್ಞಾನ-ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿಯೇ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕೃಷಿ ಕ್ಷೇತ್ರದಲ್ಲಿ ಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಹೀಗಾಗಿ ಬಹಳ ಹಿಂದೆ ಇದ್ದಂತಹ ಕೃಷಿ ಬೀಜ ಕಾಯ್ದೆ ಬಿಟ್ಟು ಹೊಸ ಕಾಯ್ದೆ ರೂಪಿಸಿರುವುದು ಒಳ್ಳೆಯ ಕೆಲಸವಾಗಿದೆ ಎಂದರು.
ರಾಜ್ಯದ ಹಲವು ಬಿತ್ತನೆ ಬೀಜ ಕೇಂದ್ರಗಳಲ್ಲಿ ಸಾವಿರಾರು ಸಾಂಪ್ರದಾಯಿಕ ಬೀಜಗಳನ್ನು ಸಂಗ್ರಹಿಸಿ ಸಂರಕ್ಷಿಸಿಡಲಾಗಿದೆ. ಆದರೆ ವಿವಿಗಳು, ಕೃಷಿ ಕೇಂದ್ರ, ಸರ್ಕಾರಗಳು ಮತ್ತು ರೈತರು ಅವುಗಳ ಪ್ರಯೋಜನ ಪಡೆದುಕೊಳ್ಳುತ್ತಿಲ್ಲ. ಉಳಿಸಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಿಲ್ಲ. ವಿಜ್ಞಾನಿಗಳು ಎಷ್ಟೇ ಆವಿಷ್ಕಾರ ಮಾಡಿದರೂ ಅದರ ಅನುಷ್ಠಾನಗೊಳಿಸುವುದು ಸಮಿತಿಯೇ ಆಗಿರುತ್ತದೆ. ದುರದೃಷ್ಟವಶಾತ್ ಸಮಿತಿಯಲ್ಲಿ ವಿಜ್ಞಾನಿಗಳಿಲ್ಲದಿರುವವರೇ ಸದಸ್ಯರಾಗಿರುತ್ತಾರೆ. ಹೀಗಾಗಿ ಒಬ್ಬ ವಿಜ್ಞಾನಿ ಸಂಶೋಧಿಸಿದ ತಂತ್ರಜ್ಞಾನ ಅನುಷ್ಠಾನ ಸಮಯದಲ್ಲಿ ತಡೆಹಿಡಿಯಲ್ಪಡುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಕೆಲವು ರೈತರು ಹೈಬ್ರಿಡ್ ಬಿತ್ತನೆ ಬೀಜವನ್ನು ವಿರೋಧಿಸುತ್ತಾರೆ. ಆದರೆ ಅದು ಅವೈಜ್ಞಾನಿಕವಾಗಿದೆ. ಖಾಸಗಿಯವರಿಗೆ ಹೈಬ್ರಿಡ್ ಬೀಜ ತಯಾರಿಕೆಗೆ ಅವಕಾಶ ಕಲ್ಪಿಸುವ ಬದಲು ರೈತರಿಗೆ ಹೈಬ್ರಿಡ್ ಬೀಜ ತಯಾರಿಕೆಗೆ ಸರ್ಕಾರಗಳು ಅವಕಾಶ ಮತ್ತು ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ ಎಂದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ರಾಜೇಂದ್ರ ಪ್ರಸಾದ್, ಕರ್ನಾಟಕ ಜೀವ ವೈವಿಧ್ಯತಾ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಮಾತನಾಡಿದರು. ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಬಾಗಲಕೋಟೆ ತೋಟಗಾರಿಕೆ ವಿವಿ ಕುಲಪತಿ ಡಾ.ಕೆ.ಎಂ.ಇಂದ್ರೇಶ್, ಧಾರವಾಡ ಕೃಷಿ ವಿವಿಯ ಬಸವೇಗೌಡ, ಆಂಧ್ರಪ್ರದೇಶದ ಬ್ರೆಸ್ಟ್ ವಿವಿಯ ಕುಲಪತಿ ಡಾ.ಅಶೋಕ ಅಲೂರ, ಬಾಗಲಕೋಟೆ ತೋಟಗಾಕೆ ವಿವಿ ವಿಶ್ರಾಂತ ಕುಲಪತಿ ಡಾ.ಎಸ್.ಬಿ.ದಂಡಿನ, ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು ಇತರರಿದ್ದರು.

ಬೀಜ ಮಸೂದೆಯ ಒಳ್ಳೆಯ ಅಂಶಗಳನ್ನು ತಿಳಿಸುವ ಕೆಲಸವನ್ನು ವಿಚಾರ ಸಂಕಿರಣ ಮಾಡುತ್ತಿರುವುದು ಶ್ಲಾಘನೀಯ. 1966 ಮಸೂದೆಯನ್ನೇ ಜಾರಿಗೊಳಿಸಿರುವುದು ಸ್ವಾಗತಾರ್ಹ. ಆದರೆ ಇಂದಿನ ಉದ್ಯಮಕ್ಕೆ ಅನುಗುಣವಾಗಿ ನಡೆಯುವ ಸಾಮರ್ಥ್ಯವಿಲ್ಲದ ಕಾರಣ ಕೆಲವೊಂದು ನ್ಯೂನತೆಗಳನ್ನು ಸರಿಪಡಿಸುವ ಕೆಲಸ ಆಗಬೇಕಿದೆ. ಈ ಬೀಜ ಕಾಯ್ದೆ ರೈತರ ಹಕ್ಕಿನ ಕುರಿತಾಗಿ ಈಗಾಗಲೇ ಇರುವ ಈ ಕಾನೂನು ಅಂಶಗಳನ್ನು ಪುರಸ್ಕರಿಸುವಂತಾಗಬೇಕಿದೆ.
ಅನಂತ ಹೆಗಡೆ ಆಶೀಸರ
ಕರ್ನಾಟಕ ಜೀವವೈವಿಧ್ಯತಾ ಮಂಡಳಿ ಅಧ್ಯಕ್ಷ.

ಮಳೆ ಆಧಾರಿತ ಕೃಷಿ ಮಾಡುವ ರಾಜ್ಯಗಳಲ್ಲಿ ಕರ್ನಾಟಕ ಇಡೀ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಆದರೆ ಬಿತ್ತನೆ ಬೀಜ, ತರಕಾರಿ ಬೆಳೆಯಲ್ಲಿ ಮೊದಲ ಸ್ಥಾನದಲ್ಲಿರುವುದು ಗಮನಾರ್ಹ. ಭಾರತ ಕೃಷಿ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದ್ದರೂ ಹವಾಮಾನ ಬದಲಾವಣೆ, ಬೆಲೆ ಸಮಸ್ಯೆಗಳಿಂದ ರೈತರು ಇಂದಿಗೂ ಸಂಕಷ್ಟದಲ್ಲಿದ್ದಾರೆ. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಪೂರೈಕೆ ಮಾಡುವತ್ತ ಹೆಚ್ಚು ಆದ್ಯತೆ ನೀಡಬೇಕಿದೆ.
ಡಾ.ರಾಜೇಂದ್ರಪ್ರಸಾದ್, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ