ಜಿಲ್ಲೆ

ತಾಂತ್ರಿಕ ಜ್ಞಾನ ಬಳಸಿ ಸಿರಿಧಾನ್ಯ ಬೆಳೆಯಿರಿ

ಧನಂಜಯ ಎಸ್.ಹಕಾರಿ.

ಹೊಸದುರ್ಗ: ತಾಲೂಕಿನ ರೈತರು ಕೃಷಿ ತಾಂತ್ರಿಕತೆಯ ನೆರವಿನಿಂದ ಸಿರಿಧಾನ್ಯಗಳನ್ನು ಬೆಳೆಯುವ ಮೂಲಕ ಹೆಚ್ಚಿನ ಇಳುವರಿ ಪಡೆಯುವತ್ತ ಗಂಭೀರವಾಗಿ ಚಿಂತಿಸಬೇಕು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಸಲಹೆ ನೀಡಿದರು.

ಕೃಷಿ ಇಲಾಖೆ ಸಣ್ಣಕಿಟ್ಟದಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಕೃಷಿ ಪರಿಕರ ವಿತರಣೆ

ಹಾಗೂ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿ ಯೋಜನೆಯ ಅನುಕೂಲ ಪಡೆದು ಸಿರಿಧಾನ್ಯಗಳನ್ನು ಬೆಳೆಯುವ ಮೂಲಕ ಆರ್ಥಿಕಾಭಿವೃದ್ಧಿ ಸಾಧಿಸಬೇಕು ಎಂದರು.

ಕೃಷಿ ವೆಚ್ಚವನ್ನು ತಗ್ಗಿಸಲು ಸುಧಾರಿತ ಬೇಸಾಯದ ಕ್ರಮಗಳ ಕುರಿತು ಅಧಿಕಾರಿಗಳಿಂದ ತಿಳಿದುಕೊಳ್ಳಬೇಕು.

ರಾಜ್ಯ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿದ್ದು, ರೈತಸ್ನೇಹಿ ಕಾರ್ಯಕ್ರಮಗಳನ್ನು ರೂಪಿಸಿದೆ. ರಾಗಿ ಮತ್ತು ಕೊಬ್ಬರಿಗೆ ಬೆಂಬಲ ಬೆಲೆ ಜತೆಗೆ ಸಹಾಯಧನ ನೀಡಿದೆ.

ರೈತರ ಬದುಕನ್ನು ಕಟ್ಟಿಕೊಡಲು ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ಹೇಳಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಸ್.ಈಶ ಮಾತನಾಡಿ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿಯಲ್ಲಿ ತಾಲೂಕಿನ ಕನಿಷ್ಠ 100 ಹೆಕ್ಟೇರ್ ಪ್ರದೇಶದಲ್ಲಿ ಗುಚ್ಛ ಗ್ರಾಮಗಳ ಪದ್ಧತಿಯಲ್ಲಿ ಬೆಳೆ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗುತ್ತಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶೇ.60/40 ಅನುದಾನದೊಂದಿಗೆ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಶಾಂತಮ್ಮ, ಸದಸ್ಯರಾದ ನಿಜಲಿಂಗಪ್ಪ, ರುದ್ರಪ್ಪ, ವಿಕಾಸ್, ಲೋಹಿತ್, ಸಂತೋಷ ಇತರರಿದ್ದರು.