ಜಿಲ್ಲೆ

ಕಾಡುಪ್ರಾಣಿಗಳ ಹಾವಳಿಗೆ ಭತ್ತ ಕೃಷಿ ಕುಂಠಿತ

ನಾಗೇಶ ಎಸ್

ಗೋಣಿಕೊಪ್ಪಲು: ಕೊಡಗು ಕೃಷಿ ಪ್ರಧಾನ ಜಿಲ್ಲೆ. ಶೇ.80 ರಷ್ಟು ಜನರು ಕೃಷಿಕರು. ಭತ್ತ, ಕಾಫಿ, ಕಾಳುಮೆಣಸು ಇಲ್ಲಿನ ಪ್ರಮುಖ ಬೆಳೆಗಳು. ಅದರಲ್ಲೂ ಮೊದಲೆಲ್ಲ ಕೊಡಗಿನ ಗದ್ದೆಗಳು ಭತ್ತದ ಪೈರಿನಿಂದ ಹಸಿರಾಗಿ ಕಂಗೊಳಿಸುತ್ತಿತ್ತು.

ಕೊಡಗಿನ ದಕ್ಷಿಣದ ಪೊನ್ನಂಪೇಟೆ ವ್ಯಾಪ್ತಿಯ ಬಾಳೆಲೆ, ಮಾಯಮುಡಿ, ನಿಟ್ಟೂರು ಸೇರಿದಂತೆ ಇತರ ಗ್ರಾಮಗಳು ಭತ್ತದ ಕಣಜ ಅಂತಲೇ ಹೆಸರುವಾಸಿಯಾಗಿದ್ದವು. ಪ್ರತಿಯೊಂದು ಮನೆಯವರು ಭತ್ತ ಬೆಳೆಯುತ್ತಿದ್ದರು. ಮಳೆಗಾಲ ಶುರುವಾಯಿತು ಎಂದರೆ ಎಲ್ಲ ಕಡೆಯಲ್ಲೂ ಕೃಷಿ ಚಟುವಟಿಕೆಗಳಲ್ಲಿ ನಿರತ ರೈತರೇ ಕಾಣಿಸುತ್ತಿದ್ದರು.

ಕಾಲಕ್ರಮೇಣ ಹವಾಮಾನ ವೈಪರೀತ್ಯ, ಕೂಲಿ ಆಳುಗಳ ಕೊರತೆ, ಬೆಲೆ ಕುಸಿತದಿಂದ ರೈತರು ಭತ್ತದ ಬೇಸಾಯದಿಂದ ವಿಮುಖರಾಗುತ್ತಾ ಬಂದರು. ಆದರೂ ಕೆಲವು ರೈತರು ಛಲ ಬಿಡದೆ ತಮ್ಮ ಗದ್ದೆಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಭತ್ತ ನಮ್ಮ ಸಂಸ್ಕೃತಿ, ಕಷ್ಟವಾದರೂ ಪ್ರತಿವರ್ಷ ಬೇಸಾಯ ಮಾಡುತ್ತಿದ್ದೇವೆ ಅಂತ ಕೆಲವು ರೈತರು ಹೇಳುತ್ತಾರೆ.

ಇತ್ತೀಚೆಗಿನ ದಿನಗಳಲ್ಲಿ ಭತ್ತದ ಕೃಷಿಯಲ್ಲಿ ಯಾಂತ್ರೀಕರಣದಿಂದ ಕೂಲಿ ಕೆಲಸದವರ ಬವಣೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ ಅದೆಲ್ಲವನ್ನೂ ಮೀರಿ ರೈತರಿಗೆ ತಲೆನೋವಾಗಿರುವುದು ಕಾಡುಪ್ರಾಣಿಗಳ ಉಟಪಟಳ. ಕಾಡುಹಂದಿ, ಆನೆ, ಕಾಡೆಮ್ಮೆ, ಜಿಂಕೆಗಳು ಭತ್ತದ ಕೃಷಿಗೆ ಕಂಟಕವಾಗಿದೆ.

ದಕ್ಷಿಣ ಕೊಡಗಿನ ಬಹುತೇಕ ಭಾಗಗಳು ನಾಗರಹೊಳೆ ಅಭಯಾರಣ್ಯಕ್ಕೆ ಹೊಂದಿಕೊಂಡಂತಿವೆ. ಹೀಗಾಗಿ ನಿತ್ಯ ಇಲ್ಲಿ ಕಾಡುಪ್ರಾಣಿಗಳು ಬೆಳೆಯನ್ನು ಹಾಳು ಮಾಡುತ್ತಿವೆ. ಮೊದಲೆಲ್ಲ ಇಷ್ಟೊಂದು ಪ್ರಮಾಣದಲ್ಲಿ ಆನೆಗಳ ಹಾವಳಿ ಇರಲಿಲ್ಲ. ಇತ್ತೀಚೆಗೆ ಕೆಲವು ವರ್ಷಗಳಿಂದ ಕಾಡಾನೆಗಳು ನಾಡಲ್ಲೇ ಉಳಿದುಕೊಂಡು ಸಂಕಷ್ಟ ಕೊಡುತ್ತಿವೆ. ನಾಟಿ ಮಾಡಲು ಇಟ್ಟ ಭತ್ತದ ಸಸಿಮಡಿಗಳಿಂದ ಹಿಡಿದು ಕೊಯ್ಲಿಗೆ ಬಂದ ಭತ್ತವನ್ನು ತಿಂದು ಹಾನಿ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಈ ಬಾರಿ ಅಂತು ಹೊಸೂರಿನ ಕೊಲ್ಲೀರ ಉಮೇಶ್ ಎಂಬುವವರು ಬಿತ್ತನೆ ಮಾಡಲು ನೆನೆಸಿಟ್ಟಿದ್ದ ಭತ್ತವನ್ನೇ ಕಾಡಾನೆಗಳು ತಿಂದಿವೆ.