ಚಾಮರಾಜನಗರ: ಅಪ್ಪ ಮಾಡುತ್ತಿದ್ದ ನೈಸರ್ಗಿಕ ಕೃಷಿಯನ್ನು ಮಕ್ಕಳು ಮುಂದುವರಿಸಿಕೊಂಡು ಬರುತ್ತಿದ್ದು, ಪದವೀಧರ ಸಹೋದರರು ವ್ಯವಸಾಯದಲ್ಲಿ ತೊಡಗಿಕೊಂಡಿದ್ದಾರೆ.
ತಾಲೂಕಿನ ಜ್ಯೋತಿಗೌಡನಪುರ ಗ್ರಾಮದ ಶಿವಶಂಕರ್ ಹಾಗೂ ಮಧುಮಾಲಿನಿ ಪುತ್ರರಾದ ಜಿ.ಎಸ್.ಯಶವಂತ್ ಮತ್ತು ಜಿ.ಎಸ್.ನಾಗಾರ್ಜುನ್ ಸಹೋದರರು 8 ಎಕರೆ ತೋಟದಲ್ಲಿ ಸಂಪೂರ್ಣ ಸಾವಯವ ಬೇಸಾಯ ಪದ್ಧತಿ ಅಳವಡಿಸಿಕೊಂಡು ತೆಂಗು, ಅಡಕೆ, ಮಾವು, ಹಲಸು, ಮೆಣಸು, ವಾಟರ್ ಆಲ್ ಹಾಗೂ ವಿವಿಧ ಬಗೆಯ ತರಕಾರಿ ಸೊಪ್ಪುಗಳನ್ನು ಬೆಳೆಯುತ್ತಿದ್ದಾರೆ. ತೋಟದ ಸುತ್ತಲೂ ತೇಗದ ಮರಗಳನ್ನು ಬೆಳೆಸಿದ್ದಾರೆ. ಸುಮಾರು 6 ಎಕರೆ ಜಮೀನನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡುತ್ತಿದ್ದು, ಅದರಲ್ಲಿ ಜೋಳ, ಬಾಳೆ, ಅರಿಶಿಣ, ಕಬ್ಬು, ಇರುಳ್ಳಿ ಹಾಗೂ ವಿವಿಧ ಬಗೆಯ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.
ನೈಸರ್ಗಿಕ ಹಾಗೂ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುವ ಸಹೋದರರು ಈ ವರೆಗೂ ತೋಟವನ್ನು ಉಳುಮೆ ಮಾಡಿಲ್ಲ. 5 ಹಸುಗಳನ್ನು ಸಾಕಿದ್ದು, ನಿತ್ಯವೂ 30-35 ಲೀ ಹಾಲನ್ನು ಶಾಲೆ ಹಾಗೂ ಡೈರಿಗೆ ಹಾಕುತ್ತಾರೆ. ದೇಶಿಯ ಹಸುಗಳ ಹಾಲಿನಿಂದ ಬೆಣ್ಣೆ, ತುಪ್ಪ ತಯಾರಿಕೆ ಮಾಡುತ್ತಲೂ ಯಶಸ್ಸು ಸಾಧಿಸಿದ್ದಾರೆ. ತರಕಾರಿ ಸೊಪ್ಪು ಬೆಳೆದು ನಿತ್ಯವೂ ಮಾರಾಟ ಮಾಡುತ್ತಿದ್ದಾರೆ. ಜೀವಾಮೃತ, ಹಸುವಿನ ಗಂಜಲ, ನೀರು ಮಜ್ಜಿಗೆ, ತೋಟದಲ್ಲಿ ಬೀಳುವ ಸೋಗು, ಮಟ್ಟೆಯನ್ನೇ ಗೊಬ್ಬರ ಮಾಡಿಕೊಂಡಿರುವ ಯಶವಂತ್ ಮತ್ತು ನಾಗಾರ್ಜುನ್ ಸಹೋದರರು ಜಮೀನಿನಲ್ಲಿ ಬೆಳೆಯುವ ಬಾಳೆ, ಅರಿಶಿಣ ಇನ್ನಿತರೆ ಬೆಳೆಗಳಿಂದ ಅಷ್ಟೊಂದು ಲಾಭ ಬರದಿದ್ದರು, ತೋಟದಲ್ಲಿ ವಾರ್ಷಿಕವಾಗಿ 15-20 ಲಕ್ಷ ಆದಾಯವನ್ನು ಗಳಿಸುತ್ತಾರೆ. ಬೆಣ್ಣೆ-ತುಪ್ಪ ಮಾರಾಟ, ಜೇನು ಕೃಷಿ, ಮೆಣಸು ಹಾಗೂ ತೋಟದ ಸುತ್ತಲೂ ಇರುವ ತೇಗದ ಮರಗಳಿಂದ ದುಪ್ಪಟ್ಟು ಲಾಭ ಪಡೆಯುವ ಹಸಿರು ಹಾದಿಯನ್ನು ಕಂಡುಕೊಂಡಿದ್ದಾರೆ.
ಜೀವಾಮೃತದ ಜತೆಗೆ ಗೊಬ್ಬರ:
ತೆಂಗಿನಮರದ ಕಾಲುಮಟ್ಟೆಯನ್ನು ಸಂಗ್ರಹಿಸಿ, ಅದಕ್ಕೆ ನೀರು ಮತ್ತು ಗಂಜಲವನ್ನು ಕೊಟ್ಟು
ಸುಮಾರು 3-4 ತಿಂಗಳು ಕೊಳೆಸುವ ಮೂಲಕ ಗೊಬ್ಬರ ತಯಾರು ಮಾಡುತ್ತಿದ್ದಾರೆ. ಇದರಿಂದ
ತೋಟದಲ್ಲಿ ಎಲ್ಲೇ ಮಣ್ಣು ಮುಟ್ಟಿದರೂ ಎರೆಹುಳು ಸಿಗುತ್ತದೆ. ತೆಂಗಿನಮರ ಹಾಗೂ ಇನ್ನಿತರೆ ಬೆಳೆಗಳಿಗೆ ಅದೇ ಗೊಬ್ಬರ, ಸಾವಯವ ಜೀವಾಮೃತ ಹಾಗೂ ಹಸುವಿನ ಗಂಜಲ ನೀಡುತ್ತಾರೆ.
ಮಜ್ಜಿಗೆಯನ್ನು ಚೆನ್ನಾಗಿ ಕೊಳೆಯಿಸಿ ತೋಟಕ್ಕೆ ಬಿಡುತ್ತಾರೆ. ಹುಳಿ ಮಜ್ಜಿಗೆಯನ್ನು ಗಂಜಲಕ್ಕೆ ಮಿಶ್ರಣಮಾಡಿ ಮರ ಹಾಗೂ ಬೆಳೆಗಳಿಗೆ ಸಿಂಪಡಣೆ ಮಾಡುವುದರಿಂದ ಯಾವುದೇ ರೋಗವಿದ್ದರು ನಿವಾರಣೆಯಾಗುತ್ತದೆ ಎಂದು ಹೇಳುತ್ತಾರೆ. ಕೃಷಿಯಲ್ಲಿ ಅನೇಕ ಪ್ರಯೋಗಗಳನ್ನು ಮಾಡುತ್ತಾ ಕೃಷಿ ಬದುಕಲ್ಲಿ ಭವಿಷ್ಯ ಕಂಡುಕೊಳ್ಳುತ್ತಿದ್ದಾರೆ.
ಬೆಣ್ಣೆ, ತುಪ್ಪ ತಯಾರಿಕೆ:
ಜ್ಯೋತಿಗೌಡನಪುರದ ಸಮೀಪವೇ ಇರುವ ಬೆಲ್ಲವತ್ತಾ, ಮುಂಟಿಪಾಳ್ಯ ಗ್ರಾಮಗಳಲ್ಲಿ ನಿತ್ಯವೂ 25 ರಿಂದ 30 ಲೀಟರ್ ದೇಶಿ ಆಕಳುಗಳ ಹಾಲು ಸಂಗ್ರಹಿಸಿ ಮೊಸರು ಮಾಡಿ ಅದನ್ನು ಕಡೆದು, ಬೆಣ್ಣೆ-ತುಪ್ಪ ತಯಾರಿಕೆ ಮಾಡುತ್ತಿದ್ದಾರೆ. ದೇಶಿಯ ತಳಿ ಮತ್ತು ಮಿಶ್ರತಳಿ ಹಸುಗಳ ಬೆಣ್ಣೆಗೂ ಇರುವ ವ್ಯತ್ಯಾಸ ಗೊತ್ತಾಗಲೆಂದು ಮಿಶ್ರತಳಿ ಬೆಣ್ಣೆಯನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಗ್ರಾಮದ ಹತ್ತಿರದಲ್ಲೇ ಇರುವ ಕಿತ್ತೂರು ರಾಣಿ ಬಾಲಕಿಯರ ಸರ್ಕಾರಿ ವಸತಿ ಶಾಲೆಗೆ, ಅತ್ಯಂತ ರಿಯಾಯಿತಿ ದರದಲ್ಲಿ ಸರಬರಾಜು ಮಾಡುತ್ತಿದ್ದಾರೆ. ನೈಸರ್ಗಿಕ ಹಾಗೂ ಸಾವಯವ ಪದ್ಧತಿಯಲ್ಲಿ ಬೆಳೆದಿರುವ ಈ ಆಹಾರ ಉತ್ಪನ್ನಗಳನ್ನು ಸ್ಥಳೀಯವಾಗಿಯೇ ಮಾರಾಟ ಮಾಡುವ ಮತ್ತು ಹೊರಗಿನಿಂದ ಬೇಡಿಕೆ ಬಂದರೆ ಅವರಿಗೂ ವ್ಯವಸ್ಥಿತವಾಗಿ ತಲುಪಿಸುವ ಕೆಲಸವನ್ನು ನಾಗಾರ್ಜುನ್ ಮಾಡುತ್ತಿದ್ದಾರೆ.
ಜೇನು ಸಾಕಾಣಿಕೆ ಪ್ರಯತ್ನ:
ಸಹೋದರ ಯಶವಂತ್ ಮತ್ತು ನಾಗಾರ್ಜುನ್ ಜೇನು ಸಾಕಾಣಿಕೆ ಮಾಡಲು ಮುಂದಾಗಿದ್ದು, ಪ್ರಯೋಗಿಕವಾಗಿ ಜೇನು ಸಾಕಾಣಿಕೆಯ ಪೆಟ್ಟಿಗೆಗಳನ್ನು ತೋಟದಲ್ಲಿ ತಂದಿರಿಸಿದ್ದಾರೆ. ಜೇನು ಸಾಕಾಣಿಕೆ ಮಾಡಿದರೆ ತೆಂಗು ಮತ್ತು ಅಡಕೆ ಇಳುವರಿ ಚೆನ್ನಾಗಿ ಬರುತ್ತದೆ ಎಂಬ ಉದ್ದೇಶದಿಂದ ಜೇನು ಸಾಕಾಣಿಕೆಗೆ ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ 100-150 ಜೇನು ಪೆಟ್ಟಿಗೆಗಳನ್ನು ತೋಟದಲ್ಲಿ ಇರಿಸುವ ಯೋಜನೆ ಹಾಕಿಕೊಂಡಿದ್ದಾರೆ. ಬೆಣ್ಣೆ, ತುಪ್ಪ ಮಾರಾಟ ಮಾಡುವ ಜತೆಗೆ
ಜೇನುತುಪ್ಪ ಮಾರಾಟ ಮಾಡುವ ಯೋಚನೆ ಮಾಡುತ್ತಿದ್ದಾರೆ. ಈ ಮೂಲಕ ಸಹೋದರರು ಕೃಷಿಯಲ್ಲಿ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಇಬ್ಬರೂ ಪದವೀಧರರು:
ಜ್ಯೋತಿಗೌಡನಪುರ ಗ್ರಾಮದ ಜಿ.ಎಸ್.ಯಶವಂತ್ ನಂಜನಗೂಡಿನ ಜೆಎಸ್‌ಎಸ್ ಬದಿವಿ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದುಕೊಂಡಿದ್ದಾರೆ. ಜಿ.ಎಸ್.ನಾಗಾರ್ಜುನ್ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಕಾಂ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಆದರೆ ಕೃಷಿಯಲ್ಲಿ ಬದುಕು ರೂಪಿಸಿಕೊಂಡಿದ್ದಾರೆ. ಅಣ್ಣಾ ಯಶವಂತ್ ಕರ್ನಾಟಕ ರಾಜ್ಯ ರೈತ ಸಂಘದಲ್ಲಿ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ನಿತ್ಯವೂ ಕೃಷಿಯಲ್ಲಿ ಅನೇಕ ಪ್ರಯೋಗಗಳನ್ನು ಮಾಡುತ್ತಾ ಅಣ್ಣನಿಗೆ ಬೆಂಬಲವಾಗಿ ನಿಂತಿದ್ದಾರೆ.