ಜಿಲ್ಲೆ

ಶೇ.78 ಬಿತ್ತನೆ ಕಾರ್ಯ ಪೂರ್ಣ ; ವರ್ಷಧಾರೆಗೆ ಬಿರುಸುಗೊಂಡು ಕೃಷಿ ಚಟುವಟಿಕೆ

Chikkaballapur

ಚಿಕ್ಕಬಳ್ಳಾಪುರ : ವರುಣನ ಕೃಪೆಯಿಂದ ಈ ಬಾರಿ ಜಿಲ್ಲೆಯಲ್ಲಿ ಉತ್ತಮ ವರ್ಷಧಾರೆಯಾಗುತ್ತಿದ್ದು ಕೃಷಿ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿವೆ. ಇಲ್ಲಿಯವರೆಗೂ ಶೇ.78 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.

ಪ್ರಸಕ್ತ ಸಾಲಿನಲ್ಲಿ 1,45,083 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈವರೆಗೂ 1,10,344 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಏಪ್ರಿಲ್, ಮೇನಲ್ಲಿ ಉತ್ತಮವಾಗಿ ಸುರಿದ ಮಳೆ ಜೂನ್‌ನಲ್ಲಿ ಮುನಿದಂತೆ ಕಂಡುಬಂದರೂ ಜುಲೈ ಮತ್ತು ಆಗಸ್ಟ್‌ನಲ್ಲಿ ವಾಡಿಕೆಗಿಂತಲೂ ಹೆಚ್ಚು ಸುರಿದಿದ್ದರಿಂದ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು ಮುಂಬರುವ ದಿನಗಳಲ್ಲಿ ಮತ್ತಷ್ಟು ಸಾಧನೆಯಾಗುವ ನಿರೀಕ್ಷೆ ಹೊಂದಲಾಗಿದೆ.

ಈಗಾಗಲೇ ನೆಲಗಡಲೆ, ತೊಗರಿ ಬಿತ್ತನೆ ಕಾರ್ಯ ಮುಗಿದಿದೆ. ರಾಗಿಗೆ ಸೆಪ್ಟೆಂಬರ್ 2ನೇ ವಾರಾಂತ್ಯದವರೆಗೂ ಅವಕಾಶ ಇದೆ. ಕಳೆದ 15 ದಿನಗಳಿಂದಲೂ ಸತತವಾಗಿ ಸುರಿಯುತ್ತಿದ್ದ ಮಳೆ ಈಗ ಕೊಂಚ ಬಿಡುವು ಕೊಟ್ಟಿದ್ದರಿಂದ ಬಿತ್ತನೆ ಕಾರ್ಯ ಮತ್ತಷ್ಟು ಚುರುಕಾಗಿದೆ. ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು ಸೇರಿ ಹಲವು ಭಾಗಗಳಲ್ಲಿ ರಾಗಿ, ನೆಲಗಡಲೆ ಬಿತ್ತನೆಯಾಗಿದ್ದು ಕಳೆ ಕೀಳುವ ಹಂತಕ್ಕೆ ಬೆಳೆಗಳು ಬೆಳೆದಿವೆ.

ಬಿತ್ತನೆ (ಹೆ.ಪ್ರದೇಶ): ರಾಗಿ-24,879 ಹೆಕ್ಟೇರ್, ಮುಸುಕಿನ ಜೋಳ-40,174 ಹೆಕ್ಟೇರ್, ತೊಗರಿ -11,210 ಹೆ.,ನೆಲಗಡಲೆ-28,129ಹೆ, ಅವರೆ-2,091 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಜಿಲ್ಲೆಯಲ್ಲಿ ಉತ್ತಮ ಮಳೆಯಿಂದ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಇಲ್ಲಿಯವರೆಗೂ ಶೇ.78 ರಷ್ಟು ಸಾಧನೆಯಾಗಿದೆ. ಎಲ್.ರೂಪಾ, ಜಂಟಿ ಕೃಷಿ ನಿರ್ದೇಶಕಿ, ಚಿಕ್ಕಬಳ್ಳಾಪುರ