ಹೂವಿನಹಡಗಲಿ: ಅಖಿಲ ಭಾರತ ನೀರಾವರಿ ಅಭಿವೃದ್ಧಿ ಯೋಜನೆಯಡಿ ತಾಲೂಕಿನ ಕೊಯಿಲಾರಗಟ್ಟಿ ಬಳಿ ಕೃಷಿ ಸಂಶೋಧನಾ ಕೇಂದ್ರ ಆರಂಭಿಸಲು ಸರ್ಕಾರಿ ಜಮೀನನ್ನು ರಾಯಚೂರು ಕೃಷಿ ವಿಜ್ಞಾನಗಳ ವಿವಿಗೆ ವರ್ಗಾಯಿಸಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಸೋಮವಾರ ಶಾಸಕ ಕೃಷ್ಣನಾಯ್ಕಗೆ ಮನವಿ ಸಲ್ಲಿಸಿತು.
ಪಟ್ಟಣದಲ್ಲಿ 1996 ರಿಂದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ವಿಜಯನಗರ ಜಿಲ್ಲೆಯ 6 ತಾಲೂಕುಗಳ ರೈತರಿಗೆ ಕೇಂದ್ರ ವಿಜ್ಞಾನಿಗಳು ಬೀಜೋತ್ಪಾದನೆ, ಕೃಷಿ ಶಿಕ್ಷಣ, ಕೃಷಿ ಪದ್ಧತಿ ಸೇರಿ ವಿವಿಧ ವಾಣಿಜ್ಯ ಬೆಳೆಗಳಾದ ಕಬ್ಬು ಹತ್ತಿ, ಮೆಣಸಿನಕಾಯಿ, ಮೆಕ್ಕೆಜೋಳ, ಸೂರ್ಯಕಾಂತಿ, ಭೌಗೋಳಿಕವಾಗಿ ಗುರುತಿಸಲ್ಪಟ್ಟಿರುವ ಮಲ್ಲಿಗೆ ಬೆಳೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದು, ಇವುಗಳ ಹೆಚ್ಚಿನ ಸಂಶೋಧನೆ ಕುರಿತು ಕೇಂದ್ರ ಆರಂಭಿಸುವ ಅಗತ್ಯವಿದೆ.
ಹೆಚ್ಚಿನ ಮಾಹಿತಿಗೆ ಈ ಭಾಗದ ರೈತರು ದೂರದ ರಾಯಚೂರಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಕೊಯಿಲಾರಗಟ್ಟಿ ಬಳಿ ಆರಂಭಿಸಲು ಉದ್ದೇಶಿಸಿರುವ ಕೃಷಿ ಸಂಶೋಧನಾ ಕೇಂದ್ರ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ವಿಶ್ವವಿದ್ಯಾಲಯವೂ ಕೇಂದ್ರ ಆರಂಭಿಸಲು ಯೋಜನೆ ರೂಪಿಸಿಕೊಂಡಿದ್ದು, ಭೂಮಿಯನ್ನು ವಿವಿ ಹೆಸರಿಗೆ ವರ್ಗಾಯಿಸಬೇಕು. ಈ ಕುರಿತು ಸರ್ಕಾರದ ಗಮನ ಸೆಳೆಯಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಹೊಸಮನಿ ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ ಎಂ, ಗಂಗಾಧರ ಎಂ, ಪ್ರಮುಖರಾದ ದುರುಗಪ್ಪ, ಶಿವನಗೌಡ, ದೇವಪ್ಪ ಇತರರಿದ್ದರು.