ಖಾನಾಪುರ: ಅಂತರ್ಜಲ ವೃದ್ಧಿಗೆ ಕೃಷಿ ಹೊಂಡ ಮತ್ತು ಬದುಗಳು ಸಹಕಾರಿಯಾಗಲಿವೆ ಎಂದು ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದ್ದಾರೆ.
ತಾಲೂಕಿನ ಮಂಗೇನಕೊಪ್ಪ ಗ್ರಾಮದಲ್ಲಿ ಗುರುವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಂಗೇನಕೊಪ್ಪ ಗ್ರಾಪಂ ಮತ್ತು ನರೇಗಾ ಯೋಜನೆ ಸಹಯೋಗದಲ್ಲಿ ಜರುಗಿದ ಬದುನಿರ್ಮಾಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಬದು ನಿರ್ಮಾಣ ಮಾಡಿದರೆ ಮಣ್ಣಿನ ಸವಕಳಿ ತಪ್ಪಿಸಬಹುದು. ತಗ್ಗು ಪ್ರದೇಶದಲ್ಲಿ ಕೃಷಿ ಹೊಂಡ ನಿರ್ಮಿಸಿ ನೀರು ಸಂಗ್ರಹಿಸಬಹುದು. ಹೀಗಾಗಿ ರೈತರು ಉದ್ಯೋಗ ಖಾತ್ರಿ ಯೋಜನೆಯಡಿ ಹೊಲಗಳಲ್ಲಿ ಬದು ನಿರ್ಮಿಸಿಕೊಳ್ಳಲು, ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಪಿಡಿಒ ಬಾಲರಾಜ ಭಜಂತ್ರಿ ಮಾತನಾಡಿ, ಮಂಗೇನಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ ಬದು ನಿರ್ಮಾಣಕ್ಕಾಗಿ 275 ರೈತರು ಮುಂದಾಗಿದ್ದಾರೆ. ಇತರೆ ಭಾಗಗಳ ರೈತರು ತಮ್ಮ ಜಮೀನಿನಲ್ಲಿ 100 ಮೀ. ಸುತ್ತಳತೆಯ ಬದು ನಿರ್ಮಾಣ ಮಾಡಿದರೆ ಉದ್ಯೋಗ ಖಾತ್ರಿ ಯೋಜನೆಯಡಿ 10 ಸಾವಿರ ರೂ. ಸಹಾಯಧನ ನೀಡಲಾಗುವುದು ಎಂದರು. ನಂತರು ಶಾಸಕರು ಮಂಗೇನಕೊಪ್ಪ ಗ್ರಾಪಂ ಆವರಣದಲ್ಲಿ ಬದು ನಿರ್ಮಾಣ ಮಾಸಾಚರಣೆಯ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಚಾರ ವಾಹನಕ್ಕೆ ಚಾಲನೆ ನೀಡಿದರು. ಬದು ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ ರೈತರಿಗೆ ಆದೇಶಪತ್ರ ವಿತರಿಸಿದರು. ತಾಪಂ ಇಒ ಬಿ.ವಿ.ಅಡವಿಮಠ, ಗ್ರಾಪಂ ಉಪಾಧ್ಯಕ್ಷೆ ಫಾತಿಮಾ ಬಿಚ್ಚುನವರ, ತಾಲೂಕು ಪಂಚಾಯಿತಿ ಸದಸ್ಯ ಶಿವಾನಂದ ಚಲವಾದಿ, ದಾಮೋದರ ಸಿ., ಎಂ.ಜಿ.ದೇವರಾಜ, ಬಸವರಾಜ ಅಡವಿಮಠ, ಹನುಮಂತ ಬಳಿಗಾರ ಇತರರು ಇದ್ದರು.