ಜಿಲ್ಲೆ

ಡಿಎಪಿ ಗೊಬ್ಬರದ ಕೊರತೆ, ಪರ್ಯಾಯ ವ್ಯವಸ್ಥೆ ವಿಚಾರವಾಗಿ ರೈತರಿಗೆ ಅಧಿಕಾರಿಗಳ ಸಲಹೆ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಡಿಎಪಿ ರಸಗೊಬ್ಬರ ಪೂರೈಕೆಯಲ್ಲಿನ ವ್ಯತ್ಯಯಕ್ಕೆ ರೈತರು ಆತಂಕ ಪಡುವ ಅಗತ್ಯವಿಲ್ಲ. ಇದಕ್ಕೆ ಬದಲಾಗಿ ನ್ಯಾನೋ ಡಿಎಪಿ ಹಾಗೂ ಕಾಂಪ್ಲೆಕ್ಸ್ ಗೊಬ್ಬರಗಳನ್ನು ಬಳಸಲು ಜಿಲ್ಲಾಡಳಿತ ಸಲಹೆ ನೀಡಿದೆ.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ನೇತೃತ್ವದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2025&-26ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಪೂರ್ವ ಸಿದ್ಧತಾ ಸಭೆಯಲ್ಲಿ ಕೃಷಿ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು.

ಈ ವರ್ಷ ಡಿಎಪಿ ರಸಗೊಬ್ಬರದ ಉತ್ಪಾದನೆಯ ಪ್ರಮಾಣ ಕಡಿಮೆ ಇದೆ. ಇದರ ಬದಲು ಬೆಳೆಗಳಿಗೆ ನ್ಯಾನೋ ಡಿಎಪಿ ಸಿಂಪಡಿಸಬಹುದು. ಒಂದು ಚೀಲ ಡಿಎಪಿಗೆ 1500 ರೂ.ವರೆಗೂ ದರ ಇದ್ದು ಇದಕ್ಕೆ ಪರ್ಯಾಯವಾಗಿ 1 ಲೀಟರ್ ನ್ಯಾನೋ ಡಿಎಪಿ ಬಳಸಬಹುದು. ಇದರ ದರ ಒಂದು ಲೀಟರ್ಗೆ ಕೇವಲ 600 ರೂ. ಇದೆ. ರೈತರಿಗೆ ಹಣ ಉಳಿತಾಯ ಹಾಗೂ ಬೆಳೆ ಸಂರಕ್ಷಣೆಯ ಲಾಭ ಇದೆ ಎಂದರು.

*ಬಿತ್ತನೆ, ರಸಗೊಬ್ಬರಗಳ ಬಳಕೆ
ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಕಾಂಪ್ಲೆಕ್ಸ್ (ಸಂಯುಕ್ತ)ರಸಗೊಬ್ಬರ ಬಳಸುವುದರ ಬಗ್ಗೆ ಜಂಟಿ ಕೃಷಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ ಸಲಹೆ ನೀಡಿದ್ದಾರೆ.
ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ 17 ಪೋಷಕಾಂಶಗಳ ಅಗತ್ಯವಿದ್ದು ಇವುಗಳಲ್ಲಿ ಇಂಗಾಲ, ಜಲಜನಕ ಮತ್ತು ಆಮ್ಲಜನಕವು ಸ್ವಾಭಾವಿಕವಾಗಿ ದೊರೆಯುತ್ತವೆ. ರೈತರು ಕೇವಲ ಒಂದು ಇಲ್ಲವೇ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿಎಪಿಯನ್ನು ರೂಢಿಗತವಾಗಿ ಬಳಸುತ್ತಿದ್ದು ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಅಂಶ ಮಾತ್ರ ಇದೆ. ಬೆಳೆಗಳಿಗೆ ಬರ ಮತ್ತು ರೋಗ ನಿರೋಧಕ ಶಕ್ತಿ ನೀಡಿ, ಕಾಳಿನ ತೂಕ ಹೆಚ್ಚಿಸಲು ಅವಶ್ಯಕವಾಗಿರುವ ಪೊಟ್ಯಾಷ್ ಲಭ್ಯವಿರುವುದಿಲ್ಲ. ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯ ಸಾರಜನಕ, ರಂಜಕ ಮತ್ತು ಪೊಟ್ಯಾಷ್ಯುಕ್ತ ಬಹಳಷ್ಟು ರಸಗೊಬ್ಬರಗಳು ಲಭ್ಯವಿದ್ದು ಇವುಗಳನ್ನು (4:2:1ರ ಅನುಪಾತದಲ್ಲಿ) ಶಿಫಾರಸಿನಂತೆ ವಿವಿಧ ರಸಗೊಬ್ಬರಗಳ ಸಂಯೋಜನೆಯೊಂದಿಗೆ ಬಳಸಬೇಕು. ಆದರೆ, ಇತ್ತೀಚಿನ ವರ್ಷಗಳಲ್ಲಿ 5:3:1 ಬಳಕೆ ಅನುಪಾತವು ಇದೆ. ಇದು ಅಧಿಕ ಎಂದು ತಿಳಿಸಿದ್ದಾರೆ.

*ದರ ಪಟ್ಟಿ ಪ್ರಕಟಿಸಲು ಸೂಚನೆ
ರಸಗೊಬ್ಬರ ಉತ್ಪಾದಕ ಕಂಪನಿಗಳ ಪ್ರತಿನಿಧಿಗಳು, ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟದ ಮಳಿಗೆಗಳ ಮುಖ್ಯಸ್ಥರು, ಮಾರಾಟಗಾರರು, ವ್ಯಾಪಾರಿಗಳು, ಜಿಲ್ಲಾ ಹಾಗೂ  ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಲಾಯಿತು. ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟದ ಮಳಿಗೆಗಳ ಮುಂಭಾಗ ದರಪಟ್ಟಿ ಪ್ರಕಟ, ನಿಗದಿತ ದರದಲ್ಲಿ ಮಾರಾಟ, ರೈತರು ಖರೀದಿಸಿದ್ದಕ್ಕೆ ಅಧಿಕೃತ ರಸೀದಿ ನೀಡುವುದು ಸೇರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಜಿಲ್ಲಾಡಳಿತ ಸೂಚಿಸಿದೆ. ನಿಯಮ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.