ಭರಮಸಾಗರ: ಮೆಕ್ಕೆಜೋಳ ಬೆಳೆಯುವ ರೈತರಿಗೆ ಕಂಟಕವಾಗಿರುವ ಮುಳ್ಳುಸಜ್ಜೆ (ಕಳೆ) ನಾಶಪಡಿಸುವ ಪ್ರಯೋಗಗಳು ನಡೆಯುತ್ತಿದ್ದು,
ಮುಂದಿನ ದಿನಗಳಲ್ಲಿ ಈ ಕಳೆಯಿಂದ ಮುಕ್ತಿ ದೊರೆಯುವ ಸಾಧ್ಯತೆಯಿದೆ ಎಂದು ಚಿತ್ರದುರ್ಗ ಕೃಷಿ ಇಲಾಖೆ ಉಪ ನಿರ್ದೇಶಕ ಪ್ರಭಾಕರ್ ಹೇಳಿದರು.
ಹೋಬಳಿಯ ಸುತ್ತಲಿನ ಹಲವು ಗ್ರಾಮಗಳ ಜಮೀನುಗಳಿಗೆ ತಜ್ಞರ ತಂಡ ಶನಿವಾರ ಭೇಟಿ ನೀಡಿದ ಸಂದರ್ಭ ಮಾತನಾಡಿದರು.
ಕೃಷಿ ಅಧಿಕಾರಿ ಚಂದ್ರಕುಮಾರ್ ಮಾತನಾಡಿ, ರೈತರು ಕಳೆನಾಶಕಗಳ ಅತಿ ಬಳಕೆಯನ್ನು ನಿಲ್ಲಿಸಬೇಕು. ಇದರಿಂದ ಭೂಮಿಯಲ್ಲಿನ ಸತ್ವ ನಾಶವಾಗುತ್ತದೆ.
ಕಳೆನಾಶಕದ ಬಳಕೆಯಿಂದ ರೈತರು ಕ್ಯಾನ್ಸರ್‌ನಂತಹ ರೋಗಗಳಿಗೆ ತುತ್ತಾಗುತ್ತಾರೆ. ನ್ಯಾನೊ ಯೂರಿಯಾ ಜತೆಗೆ ಯಾವುದೇ ರಾಸಾಯನಿಕ ಗೊಬ್ಬರ ಬೆರೆಸಬಾರದು ಎಂದು ತಿಳಿಸಿದರು.
ಭರಮಸಾಗರ ರೈತ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ವನಜಾಕ್ಷಿ ಮಾತನಾಡಿ, ಹೆಚ್ಚು ಪ್ರಮಾಣದ ರಾಸಾಯನಿಕಗಳನ್ನು ಮೆಕ್ಕೆಜೋಳ ಬೆಳೆಗೆ ಬಳಸುವುದರಿಂದ ಮಣ್ಣಿನ ಮೇಲೆ ದುಷ್ಪರಿಣಾಮ ಉಂಟಾಗಿ ಭೂಮಿ ಬರಡಾಗುತ್ತದೆ ಎಂದು ಎಚ್ಚರಿಸಿದರು.
ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ರುದ್ರಮುನಿ, ಕೃಷಿ ಇಲಾಖೆಯ ಪತ್ತಾರ್, ಸಿರಿಗೆರೆ ಪ್ರಾಥಮಿಕ ವ್ಯವಸಾಯ ಸಂಘದ ಸಿಇಒ ಎಚ್.ಬಿ.ಗಿರೀಶ್, ರಾಜಪ್ಪ, ಯಳಗೋಡು ಕೋಡಿರಂಗವ್ವನಹಳ್ಳಿ ಧನಂಜಯ, ಶಿವಮೂರ್ತಿ ಇದ್ದರು.