ದೇವಸಮುದ್ರ ಗ್ರಾಮದ ಕಂಟೇನ್ಮೆಂಟ್ ಜೋನ್‌ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಮನೆ ಮನೆಗೆ ತೆರಳಿ ಕರೊನಾ ಮುಂಜಾಗ್ರತಾ ಮಾಹಿತಿ ನೀಡಿದರು. 
ಜಿಲ್ಲೆ

ಹೊಲ ಗದ್ದೆಗಳಿಗೆ ತೆರಳುತ್ತಿರುವ ಕರೊನಾ ಸೋಂಕಿತರ ದ್ವಿತೀಯ ಸಂಪರ್ಕಿತರು

ಕಂಪ್ಲಿ: ತಾಲೂಕಿನ ದೇವಸಮುದ್ರ ಗ್ರಾಮದ ಕಂಟೇನ್ಮೆಂಟ್ ಜೋನ್‌ನಲ್ಲಿನ ಕರೊನಾ ಸೋಂಕಿತರ ದ್ವಿತೀಯ ಸಂಪರ್ಕಿತರು ಹೋಮ್ ಕ್ವಾರಂಟೈನ್ ಆಗದೆ, ಕೃಷಿ ಕೆಲಸಗಳಿಗೆ ತೆರಳುತ್ತಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಮೂಡಿದೆ.

ಗ್ರಾಮದಲ್ಲಿ ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಗೆ ಕಳೆದ ನಾಲ್ಕು ದಿನಗಳ ಹಿಂದೆ ಕರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರು ಸೋಂಕಿತರ ನಿವಾಸದ ಓಣಿಗಳನ್ನು ಸೀಲ್‌ಡೌನ್ ಮಾಡಿದೆ. ಇಬ್ಬರು ಸೋಂಕಿತರ ಜತೆ ಹನ್ನೊಂದು ಜನ ಪ್ರಾಥಮಿಕ ಸಂಪರ್ಕದಲ್ಲೂ, ಸೋಂಕಿತರ ಮನೆಯ ನೆರೆಹೊರೆಯ ಮನೆಯವರು ದ್ವಿತೀಯ ಸಂಪರ್ಕದಲ್ಲಿದ್ದು, ಇವರೆಲ್ಲ ಹೋಂ ಕ್ವಾರಂಟೈನ್‌ನಲ್ಲಿರಬೇಕು. ಆದರೆ, ದ್ವಿತೀಯ ಸಂಪರ್ಕದಲ್ಲಿರುವವರು ಕಂಟೇನ್ಮೆಂಟ್ ಜೋನ್ ದಾಟಿ ಹೊಲ ಗದ್ದೆಗಳ ಕೃಷಿ ಕೆಲಸಗಳಿಗೆ ತೆರಳುತ್ತಿದ್ದಾರೆ. ನಿತ್ಯ ದುಡಿಯದಿದ್ದರೆ ಮನೆ ಸಾಗಿಸುವುದು ಹೇಗೆ? ನಾವು ನಿತ್ಯ ದುಡಿದು ಉಣ್ಣಬೇಕು. ಭತ್ತದ ಸಸಿ ನಾಟಿ ಕೆಲಸ ಬಂದಿವೆ. ನಮಗೆ ಯಾವ ಕರೊನಾ ಬಂದಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಗ್ರಾಮದಲ್ಲಿ ಪರ, ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಲಹೆ ಸೂಚನೆ ನೀಡಿದರೂ ಕೇಳುತ್ತಿಲ್ಲ
ಕಂಟೇನ್ಮೆಂಟ್ ಜೋನಿನ ಎಲ್ಲ ಮನೆಗಳಿಗೂ ನಿತ್ಯ ಭೇಟಿ ನೀಡಿ ಜನರ ಆರೋಗ್ಯ ತಪಾಸಿಸಲಾಗುತ್ತಿದೆ. ಕರೊನಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಂಡಿದೆ. ಆದರೆ, ಜೋನ್‌ನಲ್ಲಿನ ನಿವಾಸಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಕೃಷಿ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದಾರೆ. ಹೊರಗಡೆ ಎಲ್ಲಿಯೂ ತಿರುಗಾಡಬಾರದು ಎಂದು ಸಾಕಷ್ಟು ತಿಳಿವಳಿಕೆ, ಸಲಹೆ ಸೂಚನೆ ನೀಡಲಾಗಿದೆ. ಆದರೂ, ಕೇಳುತ್ತಿಲ್ಲ ಎಂದು ದೇವಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ಜಿ.ಜಗನ್ನಾಥ ಅವರು ತಮ್ಮ ಅಸಹಾಯಕತೆಯನ್ನು ಸೋಮವಾರ ವ್ಯಕ್ತಪಡಿಸಿದರು. ವೈದ್ಯಾಧಿಕಾರಿ ಪೂಜಾ, ಆರೋಗ್ಯ ಸಹಾಯಕಿ ಚಾಂದ್‌ಬೀ, ಆಶಾ ಕಾರ್ಯಕರ್ತೆಯರದಾದ ನೇತ್ರಾ, ಗೌರಮ್ಮ, ಕಾಳಮ್ಮ, ಸಹನಾ ಸೇರಿ ಆರೋಗ್ಯ, ಪೊಲೀಸ್ ಸಿಬ್ಬಂದಿ ಸೇರಿ ಕಂಟೇನ್ಮೆಂಟ್ ಜೋನ್ ಮಾಡಲಾದ ಓಣಿಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದರು.