ನರಗುಂದ ತಾಲೂಕಿನ ಬೆಳ್ಳೇರಿ ಗ್ರಾಮದಲ್ಲಿರುವ ಕೃಷಿ ಡಿಪ್ಲೊಮಾ ಕಾಲೇಜ್.  
ಜಿಲ್ಲೆ

ಕೃಷಿ ಡಿಪ್ಲೊಮಾ ಕೋರ್ಸ್‌ಗೆ ಎಳ್ಳುನೀರು!

ರವಿ ಎಸ್. ಬಳೂಟಗಿ

ನರಗುಂದ: ರೈತರ ಮಕ್ಕಳ ಅನುಕೂಲಕ್ಕಾಗಿ ತಾಲೂಕಿನ ಕೊಣ್ಣೂರಿನ ಬೆಳ್ಳೇರಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ಪ್ರಾರಂಭಿಸಿದ್ದ ಕನ್ನಡ ಕೃಷಿ ಡಿಪ್ಲೊಮಾ ಕೋರ್ಸ್ 2023- 24ನೇ ಶೈಕ್ಷಣಿಕ ವರ್ಷದಿಂದ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿಂದ 79 ಎಕರೆ ವಿಸ್ತೀರ್ಣದ ಕೃಷಿ ಕೇಂದ್ರದಲ್ಲಿ 2015ರಲ್ಲಿ ಕೃಷಿ ಡಿಪ್ಲೊಮಾ ಕೋರ್ಸ್ ಪ್ರಾರಂಭಿಸಲಾಯಿತು. ಪ್ರತಿ ಬ್ಯಾಚ್‌ಗೆ 20 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿತ್ತು. ಎಸ್ಸೆಸ್ಸೆಲ್ಸಿ ಪೂರೈಸಿದವರು ನೇರವಾಗಿ ಈ ಕೋರ್ಸ್ ಸೇರಲು ಅವಕಾಶವಿತ್ತು. ಕಳೆದ ಆರೇಳು ವರ್ಷಗಳಿಂದ ಕೋರ್ಸ್‌ಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿತ್ತು. 2015ರಿಂದ ಇಲ್ಲಿಯವರೆಗೆ 100ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಧ್ಯಯನ ಮಾಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ 8ನೇ ಬ್ಯಾಚ್‌ನ 17 ವಿದ್ಯಾರ್ಥಿಗಳು ಈಗ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೀಗ ಸರ್ಕಾರದಿಂದ ಕೃಷಿ ಡಿಪ್ಲೊಮಾ ಕೋರ್ಸ್‌ಗಳಿಗೆ ಹೊರಡಿಸಿದ ಅಧಿಸೂಚನೆ ಹಿಂಪಡೆಯಲಾಗಿದೆ. ಹೀಗಾಗಿ ಆಗಸ್ಟ್ 11ರಂದು ದ್ವಿತೀಯ ವರ್ಷದ ವಿದ್ಯಾರ್ಥಿಗಳ ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ಮುಗಿದ ಬಳಿಕ ಈ ಕಾಲೇಜ್ ಬಂದ್ ಮಾಡುತ್ತಿರುವುದು. ಈ ನಿರ್ಧಾರ ಈ ಭಾಗದ ರೈತರು ಹಾಗೂ ಕೃಷಿ ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಕೋರ್ಸ್ ಆರಂಭಿಸಿ 8 ವರ್ಷ ಕಳೆದರೂ ಕಾಯಂ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಯ ಮಂಜೂರಾತಿ ಮಾಡಿಲ್ಲ. 4 ಪ್ರಯೋಗಾಲಯಗಳಿದ್ದರೂ ಸಂಶೋಧನೆಗೆ ಬೇಕಾದ ಪರಿಕರಗಳು ಇಲ್ಲ. ಅನುದಾನ ಇಲ್ಲದ್ದರಿಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ನಾನಗೃಹಗಳ ನಿರ್ಮಾಣ, ಕುಡಿಯುವ ನೀರು, ಹಾಸ್ಟೆಲ್ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳಿಂದ ಸಾಧ್ಯವಾಗಿಲ್ಲ. ಹೀಗಾಗಿ ಎರಡು ವರ್ಷದ ಕೃಷಿ ಡಿಪ್ಲೊಮಾ ಕೋರ್ಸ್‌ಗಳಿಗೆ ಹೊರಡಿಸಲಾದ ಅಧಿಸೂಚನೆಯನ್ನು 2023- 24ನೇ ಸಾಲಿನಿಂದ ಹಿಂಪಡೆಯಲಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆದೇಶದಲ್ಲಿ ತಿಳಿಸಿದೆ.

ಎರಡು ವರ್ಷದ ಈ ಕೋರ್ಸ್‌ನಿಂದ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಕೃಷಿ ಡಿಪ್ಲೊಮಾ ಕೋರ್ಸ್ ಸ್ಥಗಿತಕ್ಕೆ 2022ರಲ್ಲೇ ಆದೇಶ ಬಂದಿತ್ತು. ಅನುದಾನವಿಲ್ಲದಿದ್ದರೂ ಕೋರ್ಸ್‌ಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದಕ್ಕೆ ನೋಟಿಸ್ ನೀಡಲಾಗಿದೆ. ಹೀಗಾಗಿ ಸರ್ಕಾರದ ನಿರ್ದೇಶನದಂತೆ 2023- 24ನೇ ಸಾಲಿನಿಂದ ಡಿಪ್ಲೊಮಾ ಕೋರ್ಸ್ ಕೈಬಿಡಲಾಗಿದೆ.-ಆರ್.ಬಸವರಾಜಪ್ಪ ಸ್ನಾತಕೋತ್ತರ ಶಿಕ್ಷಣ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ ಧಾರವಾಡ
ಎರಡು ವರ್ಷದ ಕೃಷಿ ಡಿಪ್ಲೊಮಾ ಕೋರ್ಸ್‌ಗಳಿಗೆ ಹೊರಡಿಸಲಾದ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ. ಹೀಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ನಡೆಸುತ್ತಿಲ್ಲ.ಎಸ್.ಬಿ. ಪಾಟೀಲ, ಕೃಷಿ ಡಿಪ್ಲೊಮಾ ಕಾಲೇಜ್ ಪ್ರಾಚಾರ್ಯ