ಅವಿನಾಶ್ ಜೈನಹಳ್ಳಿ ಮೈಸೂರು
ಸಮಗ್ರ ಕೃಷಿ ಪದ್ಧತಿ ಯೋಜನೆಯಡಿ ಸಣ್ಣ ರೈತರು ಒಂದು ಎಕರೆ ಜಮೀನಿನಲ್ಲಿ ಯಾವೆಲ್ಲ ಬೆಳೆಗಳನ್ನು ಬೆಳೆಯಬಹುದೆಂಬ ಮಾರ್ಗದರ್ಶನ… ಮಣ್ಣು ಮತ್ತು ನೀರಿನ ಸಂರಕ್ಷಣೆ, ಮಳೆ ಆಶ್ರಿತ ಜಮೀನಿನಲ್ಲಿ ಏನೆಲ್ಲ ಬೆಳೆ ಬೆಳೆಯಬಹುದೆಂಬ ಮಾಹಿತಿ… ಗ್ರಾಮೀಣ ಪಾರಂಪರಿಕ ವಸ್ತುಗಳ ಪ್ರದರ್ಶನ…
ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಪ್ರಮುಖ ಜನಾಕರ್ಷಣೆಯ ಕೇಂದ್ರವಾಗಿರುವ ಕೃಷಿ ಇಲಾಖೆ ಮಳಿಗೆಯ ಚಿತ್ರಣವಿದು.
ಕೃಷಿ, ನೀರಾವರಿ, ರೈತರ ಬದುಕು, ವಿವಿಧ ಕೃಷಿ ವಿಧಾನಗಳನ್ನು ತಿಳಿಸಲಾಗಿದೆ. ರಾಗಿ, ಭತ್ತ ಸೇರಿದಂತೆ ನಾನಾ ಬೆಳೆಗಳ ವಿವಿಧ ತಳಿಗಳು, ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಕೃಷಿ, ನೀರಿನ ಸಂರಕ್ಷಣೆ, ಮಣ್ಣಿನ ಸಂರಕ್ಷಣೆಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕವೇ ಮಾಹಿತಿ ನೀಡಲಾಗಿದೆ.
ಕೃಷಿ ಪರಿಕರಗಳ ಪ್ರದರ್ಶನ:
ಗ್ರಾಮೀಣ ಪಾರಂಪರಿಕ ವಸ್ತುಗಳ ಪ್ರದರ್ಶನ ಹೆಚ್ಚು ಗಮನ ಸಳೆಯುತ್ತಿದೆ. ಗ್ರಾಮೀಣ ಜನರ ನಿತ್ಯ ಬದುಕನ್ನು ಅನಾವರಣ ಮಾಡಲಾಗಿದೆ. ರೈತ ಕುಟುಂಬಗಳು ಬಳಕೆ ಮಾಡುತ್ತಿರುವ ಹಾಗೂ 20-40 ವರ್ಷಗಳ ಹಿಂದೆ ಉಪಯೋಗಿಸುತ್ತಿದ್ದ ವಿವಿಧ ಕೃಷಿ ಪರಿಕರಗಳನ್ನು ಪ್ರದರ್ಶನ ಮಾಡಲಾಗಿದೆ. ರೈತ ಮಹಿಳೆಯರು ಅಡುಗೆಗೆ ಬಳಕೆ ಮಾಡುತ್ತಿದ್ದ ಹಳೆಯ ವಸ್ತುಗಳು ಗಮನ ಸೆಳೆಯುತ್ತಿವೆ.
ಮಜ್ಜಿಗೆ ಕಡೆಯುತ್ತಿದ್ದ ಮಡಕೆ, ಮಂತು, ಮಂತಿನ ದಾರ, ಎತ್ತರದ ಮರಗಳಿಂದ ಹಣ್ಣು ಕೊಯ್ಯುವ ಸಾಧನಗಳು, ಕತ್ತಿ, ಬುಟ್ಟಿ ಮತ್ತು ಹಲವು ಪರಿಕರಗಳು, ಹೊಸ ಆವಿಷ್ಕಾರದ ವಿವಿಧ ಕೃಷಿ ಬಳಕೆಯ ಸಾಧನಗಳು ಆಕರ್ಷಣೀಯವಾಗಿವೆ.
ಮುಖ್ಯವಾಗಿ ಕೋಳಿಪಂಜರ, ವಿವಿಧ ಮಾದರಿಯ ಕುಡುಗೋಲುಗಳು, ಪಂಜು, ಮುಸುಡಿಕುಕ್ಕೆ, ರೈತರ ಪಟಾಪಟಿ ಚಡ್ಡಿ, ವಿವಿಧ ಮಾದರಿಯ ನೇಗಿಲುಗಳು, ನೊಗಗಳು, ಹಲುಬೆ, ಹಲ್ಲಿನ ಕುಂಟೆ, ಎಡೆಕುಂಟೆ, ಕೋಲು ಗುದ್ದಲಿ, ಆಯಾಸ(ಆರಾಮ) ಖುರ್ಚಿ, ಹಳೇ ಕಾಲದ ಟಿವಿ, ನಾನಾ ಬಗೆಯ ಮಡಕೆಗಳು, ಸಾಲು ಮಡಕೆ, ಹಳೇ ಕ್ಯಾರಿಯರ್, ಹಳೆಯ ಮುದ್ದೆ ಕಟ್ಟುವ ತಟ್ಟೆಗಳು, ಕವೆಗೋಲು, ಕಡಾಯ, ಹಂಡೆ, ಸೀರಣಿಗೆ, ಮಣೆ-ತಣಿಗೆ-ಚೆಂಬು, ಹಿತ್ತಾಳೆ ಚೆಂಬು, ಹಿತ್ತಾಳೆ ಹಂಟೆ, ಹಿತ್ತಾಳೆ ಬಿಂದಿಗೆ, ಕಡಾಯ, ನಂಜನಗೂಡು ಹಲ್ಲಿನಪುಡಿ, ಗೇಗೇಕಾಯಿ, ವಾಗಲೆ ಒಲೆ, ಹಳೆಯ ಇಡ್ಲಿಪಾತ್ರೆ, ಮೊಟ್ಟೆಬುಟ್ಟಿ, ಹೂಬುಟ್ಟಿ, ವೈರ್‌ಬುಟ್ಟಿ, ರೈಲ್‌ಬುಟ್ಟಿ, ಶಾವಿಗೆ ಒತ್ತುವ ಸಾಧನ, ಕಾಯಿ ತುರಿಯುವ ಮಣೆ, ರೈಲ್ ಚೆಂಬು, ಮುದ್ದೆ ಕೋಲು, ಬೀಸುವ ಕಲ್ಲು, ಒಳಕಲ್ಲು ಸೇರಿದಂತೆ ನಾನಾ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಜತೆಗೆ ಬಿಳಿ ಜೋಳ, ಸಜ್ಜೆ, ಊದಲು, ಹಾರಕ, ಬರಗು, ನವಣೆ, ಕೊರಲೆ, ಸಾಮೆ ಹಾಗೂ ವಿವಿಧ ತಳಿಯ ಭತ್ತ ಹಾಗೂ ರಾಗಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಬೆಳೆಯುವ ಬಗೆ, ಬೆಳೆಯ ಅವಧಿ, ಅದರ ವಿಶೇಷತೆ, ಇಳುವರಿ ಹಾಗೂ ಮಹತ್ವಗಳನ್ನು ತಿಳಿಸುವ ಕೆಲಸ ಮಾಡಲಾಗಿದೆ.
ಬೆಳೆ ಬೆಳೆಯುವ ಪ್ರದೇಶದ ಮಾಹಿತಿ
ಮಳಿಗೆಯ ಹೊರಗೆ ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ಬೆಳೆ ಬೆಳೆಯುವ ಪ್ರದೇಶ ನಿರ್ಮಿಸಲಾಗಿದೆ. ಸದರಿ ಪ್ರದೇಶದಲ್ಲಿ ಪ್ರಾತ್ಯಕ್ಷಿಕೆ ಮೂಲಕ ವಿವಿಧ ಬೆಳೆಗಳ ಬಗ್ಗೆ ತಿಳಿಸಲಾಗಿದೆ. ಜತೆಗೆ, ಮಣ್ಣು ಮತ್ತು ನೀರು ಸಂರಕ್ಷಣೆಯ ವಿವಿಧ ಮಾದರಿ ರಚಿಸುವ ಮೂಲಕ ಮಣ್ಣು ಮತ್ತು ನೀರು ಸಂರಕ್ಷಣೆ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಚೆಕ್‌ಡ್ಯಾಮ್, ತೆರೆದ ಬಾವಿ, ಕೃಷಿ ಹೊಂಡ, ಕಟ್ಟೆಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ರಾಗಿ, ಭತ್ತ, ಜೋಳ, ಕಬ್ಬು ಸೇರಿದಂತೆ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಕೃಷಿಗೆ ಸಂಬಂಧಿಸಿದ ಅನೇಕ ಬೆಳೆಯ ತಳಿಗಳನ್ನು ಪ್ರಾತ್ಯಕ್ಷಿಕೆ ರೂಪದಲ್ಲಿ ಬಿತ್ತನೆ ಮಾಡಲಾಗಿದೆ. ಆ ತಳಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಗಿದೆ.
ಸಮಗ್ರ ಕೃಷಿ ಮಾಹಿತಿ ನೀಡುವ ಮಾದರಿ
ಮುಖ್ಯವಾಗಿ, ಸಮಗ್ರ ಕೃಷಿಯ ಬಗ್ಗೆ ಮಾಹಿತಿ ನೀಡುವ ಮಾದರಿ ಗಮನ ಸೆಳೆಯುತ್ತಿದೆ. ಆದರಿ ಮಾದರಿ ಮೂಲಕ ಸಣ್ಣ ರೈತರು ಒಂದು ಎಕರೆ ಜಮೀನಿನಲ್ಲಿ ಏನೆಲ್ಲ ಬೆಳೆಗಳನ್ನು ಬೆಳೆಯಬಹುದು ಎಂಬುದರ ಬಗ್ಗೆ ತಿಳಿಸಲಾಗಿದೆ. ಒಂದು ಎಕರೆ ಜಮೀನಿನಲ್ಲಿ ವಿವಿಧ ಬೆಳೆ, ಕೋಳಿ, ಮೀನು, ಜೇನು ಸಾಕಣೆ, ತರಕಾರಿ ಬೆಳೆ, ರೇಷ್ಮೆ, ಅರಣ್ಯ ಕೃಷಿ, ತೋಟಗಾರಿಕೆ ಬೆಳೆಗಳನ್ನು ಬೆಳೆದು ಹೇಗೆ ಅಭಿವೃದ್ಧಿ ಹೊಂದಬಹುದು ಎಂದು ತೋರಿಸಲಾಗಿದೆ.
ಜತೆಗೆ ಹಸಿರೆಲೆ ಗೊಬ್ಬರ, ಬಯೋಡೈಜಸ್ಟರ್ ಘಟಕ, ಮಾದರಿ ಎರೆಹುಳು ಗೊಬ್ಬರ ಘಟಕ, ಅಜೋಲ ಮಾದರಿಗಳನ್ನು ನಿರ್ಮಿಸಿ ಅವುಗಳ ರಚನೆ ಹಾಗೂ ಉಪಯೋಗದ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಅಲ್ಲೇ ಇ-ಕೆವೈಸಿ ನೋಂದಣಿ ಕೇಂದ್ರವನ್ನೂ ತೆರೆಯಲಾಗಿದ್ದು, ಮಳಿಗೆಗೆ ತೆರಳುವ ರೈತರು ತಮ್ಮ ಮೊಬೈಲ್ ಸಂಖ್ಯೆ, ಬ್ಯಾಂಕ್ ಮತ್ತು ಆಧಾರ್‌ನೊಂದಿಗೆ ಇ-ಕೆವೈಸಿ ನೋಂದಣಿ ಮಾಡಿಕೊಂಡು ಪಿ.ಎಂ. ಕಿಸಾನ್ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ.
ವಸ್ತುಪ್ರದರ್ಶನ ಆವರಣದಲ್ಲಿ ಕೃಷಿ ಇಲಾಖೆ ನಿರ್ಮಿಸಿರುವ ಮಳಿಗೆಯಲ್ಲಿ ಪಾರಂಪರಿಕ ವಸ್ತುಗಳ ಪ್ರದರ್ಶನವನ್ನು ವಿಶೇಷ ರೀತಿ ಆಯೋಜಿಸಲಾಗಿದೆ. ಜತೆಗೆ ಸಮಗ್ರ ಕೃಷಿ, ಮಣ್ಣು ಮತ್ತು ನೀರಿನ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಾಗಿದೆ. ಬಯೋಡೈಜಸ್ಟರ್ ಘಟಕ, ಮಾದರಿ ಎರೆಹುಳು ಗೊಬ್ಬರ ಘಟಕಗಳ ಬಗ್ಗೆ ಮಾಹಿತಿ ನೀಡಲಾಗಿದೆ.-ಡಾ.ಬಿ.ಎಸ್. ಚಂದ್ರಶೇಖರ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ