ಜಿಲ್ಲೆ

ಬಿತ್ತನೆ ಪರಿಕರ ವಿತರಿಸಲು ಕೃಷಿ ಇಲಾಖೆ ಸಜ್ಜು

ಬಿತ್ತನೆ ಬೀಜ, ರಸಗೊಬ್ಬರ, ಯಂತ್ರೋಪಕರಣ ರಿಯಾಯಿತಿ ದರದಲ್ಲಿ ಮಾರಾಟ

* ಚುರುಕು ಪಡೆದ ಜಮೀನು ಹದಗೊಳಿಸುವ ಕಾರ್ಯ

* ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಮುಂಗಾರು ಮಳೆ ಚುರುಕಾಗುತ್ತಿದ್ದಂತೆ ಕೃಷಿ ಇಲಾಖೆಯೂ ರೈತರಿಗೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಯಂತ್ರೋಪಕರಣಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲು ಸಿದ್ಧಗೊಂಡಿದೆ.

ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದು, ಕೃಷಿಕರು ಭೂಮಿ ಉಳುಮೆ ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ ವರ್ಷ ಮುಂಗಾರು ಕೈಕೊಟ್ಟ ಪರಿಣಾಮ ಉತ್ತಮ ಫಸಲು ಸಿಗದೆ ರೈತರು ನಿರಾಸೆ ಹೊಂದಿದ್ದರು.

ಪ್ರಸ್ತುತ ಮುಂಗಾರು ಚುರುಕುಗೊಂಡಿರುವುದರಿಂದ ರೈತರು ಖುಷಿಯಿಂದಲೇ ಕೃಷಿ ಚಟುವಟಿಕೆಯತ್ತ ಮುಖ ಮಾಡಿದ್ದಾರೆ. ಈಗಾಗಲೇ ಹಲವರು ಮುಂಗಾರು ಪೂರ್ವ ಬೆಳೆಯಾಗಿ ಹಲಸಂದೆ, ಜೋಳ ಬಿತ್ತನೆ ಮಾಡಿದ್ದಾರೆ.

ರೈತರು ಗುಣಮಟ್ಟದ ಬಿತ್ತನೆ ಬೀಜ ಬಿತ್ತನೆ ಮಾಡುವ ಮೂಲಕ ಹಾಗೂ ಆಧುನಿಕ ಬೇಸಾಯ ಪದ್ಧತಿ ಅನುಸರಿಸಿ ಹೆಚ್ಚಿನ ಲಾಭಗಳಿಸುವಂತೆ ಪ್ರೋತ್ಸಾಹಿಸಲು ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳ ಮೂಲಕ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ಔಷಧ, ಕೃಷಿ ಉಪಕರಣ ವಿತರಿಸಲು ಮುಂದಾಗಿದೆ.

ತಾಲೂಕಿನ ಕಸಬಾ, ಕೈಲಾಂಚ, ಬಿಡದಿ, ಕೂಟಗಲ್ ಸ್ಥಳೀಯ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ರಾಗಿ, ಜೋಳ, ತೊಗರಿ, ಹಲಸಂದೆ ಬಿತ್ತನೆ ಬೀಜ, ರಸ ಗೊಬ್ಬರ, ಕೃಷಿ ಉಪಕರಣ ದಾಸ್ತಾನು ಮಾಡಿದ್ದು, ಸರ್ಕಾರದ ಸಹಾಯಧನದಲ್ಲಿ ವಿತರಣೆ ಮಾಡುತ್ತಿದೆ. ಅಂತೆಯೇ, ರೈತರು ದೃಢೀಕೃತ ಬಿತ್ತನೆ ಬೀಜ ಮತ್ತು ಕೃಷಿ ಸಲಕರಣೆ  ಪಡೆಯಬೇಕು ಎಂದು ಕೃಷಿ ಅಧಿಕಾರಿಗಳು ಮನವಿ ಮಾಡಿದ್ದಾರೆ.

ದಾಸ್ತಾನು ಕೊರತೆ: ರೈತ ಸಂಪರ್ಕ ಕೇಂದ್ರಗಳಲ್ಲಿಬ್ಯಾಟರಿ ಚಾಲಿತ ಔಷಧ ಸಿಂಪಡಣೆ ಯಂತ್ರ, ಜಿಪ್ಷಂ ಗೊಬ್ಬರ, ಹಸಿರೆಲೆ ಗೊಬ್ಬರ ಬೀಜ, ಸಾವಯವ ಗೊಬ್ಬರ, ರಾಗಿ ಎಂ.ಆರ್. 1, ಭತ್ತ ದಾಸ್ತಾನು ಸಮರ್ಪಕ ಪ್ರಮಾಣದಲ್ಲಿ  ಇಲ್ಲವಾಗಿದ್ದು, ಇವುಗಳಿಗೆ ಬೇಡಿಕೆ ಹೆಚ್ಚಿದೆ.

ಮಳೆ ಪ್ರಮಾಣ: ಇಲ್ಲಿಯವರೆಗೆ ವಾಡಿಕೆ 207 ಮಿಲಿ ಮೀಟರ್, ಪ್ರಸ್ತುತ 227 ಮಿಮೀ ಮಳೆ ಆಗಿದೆ. ಶೇ.10 ಹೆಚ್ಚುವರಿ ಮಳೆಯಾಗಿದೆ.

ರಿಯಾಯಿತಿ ದರದಲ್ಲಿ ಮಾರಾಟ

ರಾಗಿ ಎಂ.ಆರ್. 6, 5 ಕೆಜಿ ಬ್ಯಾಗ್‌ಅನ್ನು ಸಾಮಾನ್ಯ ರೈತರಿಗೆ 235 ರೂ., ಎಸ್ಸಿ-ಎಸ್ಟಿ ರೈತರಿಗೆ 190 ರೂ.,

ಹಲಸಂದೆ 5 ಕೆ.ಜಿ. ಬ್ಯಾಗ್ ಸಾಮಾನ್ಯ ರೈತರಿಗೆ 550 ರೂ., ಎಸ್ಸಿ-ಎಸ್ಟಿ ರೈತರಿಗೆ 487.50 ರೂ., ತೊಗರಿ- ಬಿಆರ್‌ಜಿ -1, 5 ಕೆ.ಜಿ. ಬ್ಯಾಗ್ ಸಾಮಾನ್ಯ ರೈತರಿಗೆ 765 ರೂ, ಎಸ್ಸಿ-ಎಸ್ಟಿ ರೈತರಿಗೆ 702.50 ರೂ.,

ತೊಗರಿ- ಬಿಆರ್‌ಜಿ -5, 5 ಕೆ.ಜಿ. ಬ್ಯಾಗ್ ಸಾಮಾನ್ಯ ರೈತರಿಗೆ 770 ರೂ., ಎಸ್ಸಿ-ಎಸ್ಟಿ ರೈತರಿಗೆ 707.50 ರೂ.,

ಔಷಧಗಳು ಕ್ಲೋರೋಪೈರಿಪಾಸ್ 1 ಲೀ. 225, ಕಾರ್ಬಂಡೈಜಿಯಮ್ ಮತ್ತು ಮ್ಯಾಂಕೋಜೆಬ್ 370 ರೂ. ಜಿಂಕ್ 5 ಕೆ.ಜಿ ಬ್ಯಾಗ್ 135 ರೂ, ಬೋರಾಕ್ಸ್ 2 ಕೆ.ಜಿ. ಬ್ಯಾಗ್ 72 ರೂ.ನಲ್ಲಿ ವಿತರಿಸಲು ಲಭ್ಯವಿದೆ.

ಕೃಷಿ ಉಪಕರಣಗಳು

ಕೂಪರ್ ನೇಗಿಲು ಸಾಮಾನ್ಯ ಮತ್ತು ಎಸ್ಸಿ-ಎಸ್ಟಿ ರೈತರಿಗೆ ಸರ್ಕಾರದ ಸಹಾಯಧನದಲ್ಲಿ ದೊಡ್ಡ ನೇಗಿಲು -1,835 ರೂ., ಚಿಕ್ಕದು -1,375 ರೂ. ಎರಡು ರೆಕ್ಕೆ ನೇಗಿಲು 1,375 ರೂ. ಸೈಕಲ್ ವೀಡರ್ 2,050 ರೂ, ಹಲುಬೆ - 1,920 ರೂ.ನಲ್ಲಿ ಲಭ್ಯವಿದೆ.

ರೈತರಿಗೆ ಬೇಕಾದ ಕೃಷಿ ಉಪಕರಣಗಳು ಮತ್ತು ಬಿತ್ತನೆಗೆ ಬೇಕಾದ ರಾಗಿ, ಹಲಸಂದೆ, ತೊಗರಿ ಬಿತ್ತನೆ ಬೀಜ, ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ಶೇಖರಿಸಲಾಗಿದೆ. ಸರ್ಕಾರದ ರಿಯಾಯಿತಿ ದರದಲ್ಲಿ ದೃಢೀಕೃತ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಡಾ. ಬಿ.ಕೆ. ವನಿತಾ, ಸಹಾಯಕ ನಿರ್ದೇಶಕಿ, ಕೃಷಿ ಇಲಾಖೆ, ರಾಮನಗರ