ಸಿಂಗಟಾಲೂರು ಏತನೀರಾವರಿ ಯೋಜನೆಯ ಬ್ಯಾರೇಜ್‌ಗೆ ಶಾಸಕ ಕೃಷ್ಣಾನಾಯ್ಕ ಶನಿವಾರ ಬಾಗಿನ ಅರ್ಪಿಸಿದರು. ಮಂಡಲ ಅಧ್ಯಕ್ಷ ಸಂಜೀವರೆಡ್ಡಿ, ವಿಭಾಗೀಯ ಸಂ.ಕಾರ್ಯದರ್ಶಿ ಎಚ್.ಪೂಜಪ್ಪ, ಎಇಇಗಳಾದ ರಾಘವೇಂದ್ರ, ರಾಜು ಇತರರಿದ್ದರು. 
ಜಿಲ್ಲೆ

ಕೃಷಿಗಾಗಿ ಕಾಲುವೆಗೆ ನೀರು ಬಿಡುಗಡೆ, ಶಾಸಕ ಕೃಷ್ಣ ನಾಯ್ಕ ಹೇಳಿಕೆ

ಹೂವಿನಹಡಗಲಿ: ತಾಲೂಕಿನ ರೈತರ ಜೀವನಾಡಿಯಾಗಿರುವ ಸಿಂಗಟಾಲೂರು ಏತನೀರಾವರಿ ಯೋಜನೆಯಿಂದ ಕೃಷಿ ಉದ್ದೇಶಕ್ಕಾಗಿ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ಶಾಸಕ ಕೃಷ್ಣ ನಾಯ್ಕ ಹೇಳಿದರು.

ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‌ಗೆ ಶನಿವಾರ ಬಾಗಿನ ಅರ್ಪಿಸಿ ಮಾತನಾಡಿದರು. ಈ ವರ್ಷ ಮುಂಗಾರು ತಡವಾಗಿದ್ದರಿಂದ ರೈತರ ಬಿತ್ತನೆ ಪ್ರಮಾಣ ಕುಂಠಿತವಾಗುತ್ತಿರುವುದು ಕಂಡುಬಂದ ಕಾರಣ ಸಕಾಲದಲ್ಲಿ ಸಿಂಗಟಾಲೂರು ಬ್ಯಾರೇಜ್‌ನಿಂದ ಕಾಲುವೆ ಮೂಲಕ ರೈತರ ಜಮೀನು ಹಾಗೂ ಕೆರೆಗಳಿಗೆ ಹರಿಸುವ ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಈ ಯೋಜನೆಯಡಿ ರೈತರಿಗೆ ಪರಿಹಾರ ವಿತರಣೆ ವಿಳಂಬವಾಗಿರುವುದು ಕಂಡು ಬಂದಿದ್ದು, ನೀರಾವರಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸಲು ಸೂಚಿಸಲಾಗುವುದು.

ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಲಾಗುವುದು ಎಂದ ಅವರು, ಈ ಭಾಗದಲ್ಲಿ ಕಾರ್ಯನಿರ್ವಹಿಸಲು ಬರುವ ಅಧಿಕಾರಿಗಳು ಭಯದಿಂದ ಬೇರೆಡೆಗೆ ವರ್ಗ ಮಾಡಿಸಿಕೊಂಡು ಹೋಗಿದ್ದಾರೆ. ಇನ್ನು ಮುಂದೆ ಅಂಥ ವಾತಾವರಣ ಇರುವುದಿಲ್ಲ. ಇಲ್ಲೇ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಸದನದ ಗಮನ ಸೆಳೆಯಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೂ ಜು.21ರ ನಂತರ ಪ್ರಗತಿ ಪರಿಶೀಲನಾ ಸಭೆ ನಡೆಸುವಂತೆ ಮನವಿ ಮಾಡಿದ್ದೇನೆ. ತಾಲೂಕಿನ ತಳಕಲ್ಲು ಸರಣಿ ಚೆಕ್ ಡ್ಯಾಮ್, ನಿರ್ಮಾಣ, ಶಾಖಾರ ಮತ್ತು ಹಿರೇಹಡಗಲಿ, ಹಗರನೂರು ಹಾಗೂ ಕೋಟಿಹಾಳ್ ಭಾಗಗಳಲ್ಲಿ ನೀರಾವರಿಗೆ ಸಂಬಂಧಿಸಿದಂತೆ ಅಭಿವೃದ್ಧಿ ಕೆಲಸ ಕೈಗೊಳ್ಳಲು 89.97 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಹೂವಿನಹಡಗಲಿ ಪಟ್ಟಣದ ಪ್ರೀತಮ್ ಎಂಬ ಬಾಲಕನ ಚಿಕಿತ್ಸೆಗೆ 40 ಲಕ್ಷ ರೂ. ಹಾಗೂ ನವಲಿ ಗ್ರಾಮದ ವಿಸ್ಮಯ ಎಂಬ ಬಾಲಕಿಯ ಚಿಕಿತ್ಸೆಗೆ 20 ಲಕ್ಷ ರೂ. ಅನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಡಿ ಒದಗಿಸಲಾಗಿದೆ ಎಂದರು.

ಮಂಡಲ ಅಧ್ಯಕ್ಷ ಸಂಜೀವರೆಡ್ಡಿ, ವಿಭಾಗೀಯ ಸಂ.ಕಾರ್ಯದರ್ಶಿ ಎಚ್.ಪೂಜಪ್ಪ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಸುಭಾಸ್, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಸಿರಾಜ್ ಬಾವಿಹಳ್ಳಿ, ಮಹಿಳಾ ಮೋರ್ಚಾ ಅಧ್ಯಕ್ಷೆ ವಿಜಯಲಕ್ಷ್ಮೀ, ಸಿಂಗಟಾಲೂರು ಯೋಜನೆಯ ಎಇಇಗಳಾದ ರಾಘವೇಂದ್ರ, ರಾಜು, ಎಇಗಳಾದ ನಟರಾಜ್, ಪ್ರದೀಪ್, ಮಂಜುನಾಥ ಇತರರಿದ್ದರು.