ಜಿಲ್ಲೆ

ರೈತನ ಬದುಕಿಗೆ ಖುಷಿ ಕೊಟ್ಟ ಕೃಷಿ

* ಮ್ಯಾನೇಜರ್ ಉದ್ಯೋಗಕ್ಕೆ ಗುಡ್ ಬೈ ಹೇಳಿ ವ್ಯವಸಾಯದ ಕೈ ಹಿಡಿದ ಮುನಿರಾಜು

* ಕಡಿಮೆ ಜಮೀನಿನಲ್ಲಿ ಉತ್ತಮ ಆದಾಯ

* ಸ್ವಂತ ಮಾರುಕಟ್ಟೆ ಸೃಷ್ಟಿಯಿಂದ ಲಾಭ

ಚೇತನ್ ಚಕ್ಕೆರೆ ಬಿಡದಿ

ವ್ಯವಸಾಯ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ, ಇದಕ್ಕೆ ವಿರುದ್ಧ ಎಂಬಂತೆ ಇತ್ತೀಚಿನ ಸುಧಾರಿತ ಕೃಷಿ ಪದ್ಧತಿಗಳಿಂದ ವ್ಯವಸಾಯ ಮಾಡಿ ಬದುಕು ಕಟ್ಟಿಕೊಳ್ಳಬಹುದೆಂದು ಸಾಧಿಸಿ ತೋರಿಸಿದ್ದಾರೆ ರೈತ ಮುನಿರಾಜು.

ಹೌದು.., ಪರಸನಪಾಳ್ಯ ಗ್ರಾಮದ ರೈತ ಮುನಿರಾಜು ಕಡಿಮೆ ಕೃಷಿ ಭೂಮಿಯಲ್ಲಿ ವಿವಿಧ ಬೆಳೆ, ಹಲವು ಸೊಪ್ಪುಗಳನ್ನು ಬೆಳೆದು ಮಾರಾಟ ಮಾಡಿ ಸಮೃದ್ಧ ಜೀವನ ಕಂಡುಕೊAಡಿದ್ದಾರೆ. ಇವರ ಯಶೋಗಾಥೆ ಇತರರಿಗೆ ಪ್ರೇರಣೆಯಾಗಿದೆ.

ಮುನಿರಾಜು ಅವರು ಸೆಕ್ಯುರಿಟಿ ಏಜೆನ್ಸಿಯಲ್ಲಿ ಮ್ಯಾನೇಜರ್ ಆಗಿ ಕೈ ತುಂಬ ಸಂಬಳ ಪಡೆದುಕೊಂಡು ಬಿಡದಿ ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಸ್ವಂತ ದುಡಿಮೆ ಪ್ರಾರಂಭ ಮಾಡಬೇಕೆಂದು 2022ರಲ್ಲಿ ಕೆಲಸಕ್ಕೆ ಗುಡ್ ಬೈ ಹೇಳಿ ಹುಟ್ಟೂರಿಗೆ ಬಂದಿದ್ದರು. ಜಮೀನಿನಲ್ಲಿ ಬೋರ್‌ವೆಲï ಕೊರೆಸಿ ವ್ಯವಸಾಯ ಮಾಡಲು ಪ್ರಾರಂಭಿಸಿದರು.

ತರಕಾರಿ ಬೆಳೆಗೆ ಒತ್ತು

ಎರಡು ಎಕರೆ ಜಮೀನನಲ್ಲಿ ಮಿಶ್ರ ತಳಿಯ ಬೆಳೆ ಜತೆಗೆ ಬೆಂಡೆಕಾಯಿ, ಹೀರೇಕಾಯಿ, ಹಾಗಲಕಾಯಿ, ಸೌತೆಕಾಯಿ ಸೇರಿ ಇನ್ನಿತರ ತರಕಾರಿ ಬೆಳೆಯುತ್ತಾರೆ. ರಸಗೊಬ್ಬರ ಬಳಕೆ ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಿದ್ದಾರೆ. ಯಾವುದೇ ಬೆಳೆ ಬೆಳೆಯುವ ಮುನ್ನವೇ ಜಾನುವಾರುಗಳ ಕೊಟ್ಟಿಗೆ ಗೊಬ್ಬರ ಹಾಕುತ್ತಾರೆ. ನರ್ಸರಿಯಿಂದ ಗಿಡಗಳನ್ನು ತಂದು ನಾಟಿ ಮಾಡಿದ ಬಳಿಕ ಹಾಗೂ ಹೂವು ಬಿಟ್ಟು ಕಾಯಿ ಕಚ್ಚುವ ಸಮಯದಲ್ಲಿ ಗೊಬ್ಬರ ಹಾಕುತ್ತಾರೆ. ಕಾಯಿಗಳು ಬಂದ ನಂತರ ಮತ್ತೊಂದು ಬಾರಿ ಗೊಬ್ಬರ ಹಾಕುತ್ತಾರೆ. ಇದರಿಂದ ಉತ್ತಮ ಇಳುವರಿ ಜತೆಗೆ ರಾಸಾಯನಿಕ ಗೊಬ್ಬರ ಬಳಸದೆ ಬೆಳೆಯುವುದು ವಿಶೇಷ ಎನಿಸಿದೆ. ತರಕಾರಿಗಳನ್ನು ಮಾರುಕಟ್ಟೆಗೆ ಕೊಂಡೊಯ್ಯುವುದಿಲ್ಲ. ಬೆಳಗ್ಗೆ ಹಾಗೂ ಸಂಜೆ ಸ್ಕೂಟರ್‌ಗೆ ಪ್ಲಾಸ್ಟಿಕ್ ಕ್ರೇಟ್ ಕಟ್ಟಿಕೊಂಡು ಅಕ್ಕ ಪಕ್ಕದ ಗ್ರಾಮಗಳಲ್ಲಿ ಮಾರಾಟ ಮಾಡುತ್ತಾರೆ. ವ್ಯವಸಾಯದ ಜತೆಗೆ ಹೈನುಗಾರಿಕೆ ಮಾಡುತ್ತಿದ್ದಾರೆ.

ವಿವಿಧ ಸೊಪ್ಪುಗಳ ಮಾರಾಟ ತರಕಾರಿಗಳ ಜತೆಗೆ ವಿವಿಧ ಬಗೆಯ ಸೊಪ್ಪುಗಳನ್ನೂ ಬೆಳೆಯುತ್ತಾರೆ. ಕೊತ್ತಮಿರಿ, ಪಾಲಕ್, ಮೆಂತೆ, ಕೀರೆ ಸೊಪ್ಪು ಬೆಳೆದು ಮಾರಾಟ ಮಾಡುತ್ತಾರೆ.

ವ್ಯವಸಾಯ ಮಾಡಲು ಮೊದಲು ಶ್ರದ್ಧೆ ಇರಬೇಕು. ಜತೆಗೆ ಯಾವ ಸಮಯದಲ್ಲಿ ಯಾವ ಬೆಳೆ ಹಾಕಬೇಕೆಂಬ ಮಾಹಿತಿ ತಿಳಿದುಕೊಂಡು ಹಾಗೂ ಮಾರುಕಟ್ಟೆಯಲ್ಲಿ ಯಾವ ಬೆಳೆಗೆ ಮುಂದೆ ಹೆಚ್ಚಿನ ಬೇಡಿಕೆಯಿದೆ ಎಂದು ಅಂದಾಜಿಸಿ ಆ ಬೆಳೆಗಳನ್ನು ಹಾಕಿದರೆ ಖಂಡಿತವಾಗಿ ಲಾಭ ಕಾಣಬಹುದಾಗಿದೆ. ಕಡಿಮೆ ಜಮೀನಿನಲ್ಲಿ ವಿವಿಧ ತರಕಾರಿ ವಿವಿಧ ಸೊಪ್ಪುಗಳನ್ನು ಬೆಳೆದು ನಾನೇ ಮಾರ್ಕೆಟಿಂಗ್ ಮಾಡಿಕೊಂಡು ಸುಖಿ ಜೀವನ ನಡೆಸುತ್ತಿದ್ದೇನೆ. 

| ಮುನಿರಾಜು, ರೈತ