ಜಿಲ್ಲೆ

ಕಾಳನಾಯಕನಹಳ್ಳಿಯಲ್ಲಿ ಕೃಷಿ ಕಾರ್ಯಾನುಭವ ಶಿಬಿರ

ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ

ಕಾಲೇಜಿನ ವಿದ್ಯಾರ್ಥಿಗಳಿಗೆ ಓದು ಬರಹದ ಜತೆಗೆ ಗ್ರಾಮೀಣ ಭಾಗದ ರೈತರು, ಕೃಷಿಕರ ಬದುಕು ಹಾಗೂ ಕೃಷಿಯ ಸ್ವಯಂ ಅನುಭವ ಆಗಬೇಕೆಂಬ ಉದ್ದೇಶದಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ವಿದ್ಯಾರ್ಥಿಗಳಿಗೆ ಗ್ರಾಮಸ್ಥರ ಸಹಕಾರ ಮುಖ್ಯ ಎಂದು ಕೃಷಿ ವಿಶ್ವ ವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ.ಸಿ.ಎಂ.ಸವಿತಾ ಅಭಿಪ್ರಾಯಪಟ್ಟರು.

ತಾಲೂಕಿನ ಎಚ್.ಕ್ರಾಸ್ ಗ್ರಾಮ ಪಂಚಾಯಿತಿ ಕಾಳನಾಯಕನಹಳ್ಳಿಯಲ್ಲಿ ಜಿಕೆವಿಕೆ ಬಿಎಸ್ಸಿ ಆನರ್ಸ್ ಕೃಷಿ ಮತ್ತು ಕೃಷಿ ನಿರ್ವಹಣಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದಿಂದ ವಿದ್ಯಾರ್ಥಿಗಳಲ್ಲಿ ಕೃಷಿ ಕ್ಷೇತ್ರದ ಆಳವಾದ ಅರಿವು ಮೂಡಿಸಿ ಗ್ರಾಮೀಣ ಭಾಗದ ಕೃಷಿ ಮತ್ತು ಕೃಷಿಕರ ಪರಿಸ್ಥಿತಿಗಳನ್ನು ನೇರವಾಗಿ ಅನುಭವಿಸುವ ಮೂಲಕ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸಲು ನೆರವಾಗುತ್ತದೆ ಎಂದರು.

ಈ ಮೂಲಕ ವಿದ್ಯಾರ್ಥಿಗಳು ಉದ್ಯೋಗ ಹುಡುಕುವ ಬದಲಿಗೆ ಉದ್ಯೋಗ ನೀಡುವವರಾಗುವಂತೆ ಬದಲಾಗುವ ಶಕ್ತಿ, ಜ್ಞಾನ, ಅನುಭವವನ್ನು ಈ ಕಾರ್ಯಕ್ರಮವು ಅವರಿಗೆ ನೀಡಲಿದೆ ಎನ್ನುವ ಆಶಾ ಭಾವನೆ ವ್ಯಕ್ತಪಡಿಸಿದರು.

ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮದಡಿ ವಿದ್ಯಾರ್ಥಿಗಳು ರಾತ್ರಿ ಹಗಲು ಇಲ್ಲೇ ಉಳಿದುಕೊಳ್ಳಲಿದ್ದು, ಸಹಕಾರ ಅಗತ್ಯ ಎಂದು ಮನವಿ ಮಾಡಿದರು.