ಪುತ್ತೂರು ಗ್ರಾಮಾಂತರ: ಒಳಮೊಗ್ರು ಗ್ರಾಮದ ಕುಂಬ್ರದ ಮರ್ಕಝುಲ್ ಹುದಾ ಪದವಿ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯರಿಗಾಗಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ನರಿಮೊಗರು ಗ್ರಾಮದ ಕೈಪಂಗಳ ಗದ್ದೆಯಲ್ಲಿ ಪ್ರಾಯೋಗಿಕ ಕೃಷಿ ಅಧ್ಯಯನ ಕಾರ್ಯಕ್ರಮ ನಡೆಯಿತು.
‘ನೇಜಿ... ಅನ್ನದಾತನ ಹಾದಿಯತ್ತ ಒಂದು ಹೆಜ್ಜೆ, ಅಪೂರ್ವ ಅನುಭವ’ ಎಂಬ ಚಿಂತನೆಯೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿದ್ಯಾರ್ಥಿನಿಯರಿಗೆ ನೇಜಿ ನಾಟಿ ಮಾಡುವ ವಿಧಾನ, ಬೇಸಾಯ ಸಂಪ್ರದಾಯ ತಿಳಿಸಿಕೊಡಲಾಯಿತು. ಪರಿಸರ ಸಂರಕಣೆ ಬಗ್ಗೆ ಮಾಹಿತಿ ನೀಡಲಾಯಿತು. ವಿದ್ಯಾರ್ಥಿನಿಯರು ಗದ್ದೆಗಿಳಿದು ನೇಜಿ ನಾಟಿ ಮಾಡುವ ಮೂಲಕ ಸ್ವ ಅನುಭವ ಪಡೆದರು. ಓಟ-ಆಟ, ಪರಿಸರ ಸೊಬಗಿನ ವೀಕ್ಷಣೆ ಮೊದಲಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೃಷಿ ಅಧ್ಯಯನ ಕಾರ್ಯಕ್ರಮ ನಡೆಸಲು ಸಹಕಾರ ನೀಡುವ ಜತೆಗೆ ವಿದ್ಯಾರ್ಥಿನಿಯರಿಗೆ ನೇಜಿ ನಾಟಿ ಬೇಸಾಯ ಕೃಷಿಯ ಕುರಿತು ಮಾಹಿತಿ ನೀಡಿದ ಪ್ರಗತಿಪರ ಕಷಿಕ ಜಯರಾಮ್ ಜೈನ್ ಗುತ್ತು ಕೈಪಂಗಳ, ನರಿಮೊಗರು ಪ್ರಾಥಮಿಕ ಕಷಿಪತ್ತಿನ ಸಹಕಾರಿ ಸಂಘ ನಿರ್ದೇಶಕ ಜಯರಾಮ ಪೂಜಾರಿ, ಅವಿಭಜಿತ ದ.ಕ. ಜಿಲ್ಲಾ ಕಂಬಳ ಸಂರಕ್ಷಣೆ ನಿರ್ವಹಣಾ ತರಬೇತಿ ಅಕಾಡೆಮಿ ನಿರ್ದೇಶಕ ಉಮೇಶ್ ಕರ್ಕೇರೆ ಕೈಪಂಗಳ, ನರಿಮೊಗರು ಗ್ರಾಪಂ ಮಾಜಿ ಅಧ್ಯಕ್ಷ ಸುಭಾಶ್ ಶೆಣೈ ನರಿಮೊಗರು ಅವರನ್ನು ಗೌರವಿಸಲಾಯಿತು.
ಮರ್ಕಝುಲ್ ಹುದಾ ಕಾಲೇಜು ಅಧ್ಯಕ್ಷ ಅಬ್ದುಲ್ ರಹಿಮಾನ್, ಪದವಿ ವಿಭಾಗ ಪ್ರಾಂಶುಪಾಲ ಮುಹಮ್ಮದ್ ಮನ್ಸೂರ್, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಗಳಾದ ರೇಷ್ಮಾ, ಶಹನಾಜ್ ಮತ್ತಿತರರು ಉಪಸ್ಥಿತರಿದ್ದರು.