ಜಿಲ್ಲೆ

ಭತ್ತ ಬಿತ್ತನೆ ಕಾರ್ಯ ಆರಂಭ, ಕೋಟ ಹೋಬಳಿಯಲ್ಲಿ 545 ಕ್ವಿಂಟಾಲ್ ಬೀಜ ಮಾರಾಟ ಗುರಿ

Udupi

ಕೋಟ: ಲಾಕ್‌ಡೌನ್‌ನಿಂದ ಎಲ್ಲ ವ್ಯವಹಾರಗಳು ನಲುಗಿದ್ದರೂ ರೈತರು ಮಾತ್ರ ತಮ್ಮ ದೈನಂದಿನ ಕಾಯಕಕ್ಕೆ ಕುತ್ತು ಬಾರದ ರೀತಿಯಲ್ಲಿ ಕ್ರಿಯಾಶೀಲರಾಗಿದ್ದಾರೆ. ಜಿಲ್ಲೆಯಲ್ಲಿ ಮಳೆಗಾಲ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿರುವಾಗ ಭತ್ತದ ಬಿತ್ತನೆ ಕಾರ್ಯ ಚುರುಕು ಪಡೆದಿದೆ.

ಕೋಟ ಹೋಬಳಿಯಲ್ಲಿ ಸಾಮಾನ್ಯವಾಗಿ ಮೇ ತಿಂಗಳ ಮೊದಲ ವಾರದಿಂದಲೇ ಭತ್ತದ ಬಿತ್ತನೆ ಆರಂಭವಾಗುತ್ತದೆ. ಈ ಬಾರಿ ರೈತ ಸಂಪರ್ಕ ಕೇಂದ್ರದಲ್ಲಿ ಭತ್ತದ ಬೀಜ ಖರೀದಿಯೂ ಆರಂಭವಾಗಿದ್ದು, 245 ಕ್ವಿಂಟಾಲ್ ಎಂಒ4 ಭತ್ತದ ಬೀಜ ಮಾರಾಟವಾಗಿದೆ. ಇನ್ನೂ 300 ಕ್ವಿಂಟಾಲ್ ಬೀಜದ ಬೇಡಿಕೆಯಿದ್ದು ಅದರ ಸರಬರಾಜಿಗೂ ರೈತ ಸಂಪರ್ಕ ಕೇಂದ್ರ ಸಜ್ಜಾಗಿದೆ.

ಕೋಟ ರೈತ ಸಂಪರ್ಕ ಕೇಂದ್ರದಲ್ಲಿ ಸದ್ಯ ಎಂಒ4 ಭತ್ತದ ಬೀಜ ಲಭ್ಯವಿದೆ. ಜ್ಯೋತಿ ತಳಿಯ ಬೀಜಕ್ಕೂ ಬೇಡಿಕೆಯಿದ್ದು, ಅದರ ಪೂರೈಕೆಗೂ ಕ್ರಮ ಕೈಗೊಳ್ಳಲಾಗುತ್ತಿದೆ. ಕೃಷಿಕರು ಪಹಣಿ ಪತ್ರ (ಆರ್‌ಟಿಸಿ) ಮತ್ತು ಆಧಾರ್ ಸಂಖ್ಯೆಯೊಂದಿಗೆ ಬಂದಲ್ಲಿ ಬೀಜ ನೀಡಲಾಗುವುದು. ಪ್ರಸ್ತುತ ಕೆ.ಜಿ ಒಂದಕ್ಕೆ 32 ರೂ. ನಿಗದಿಯಾಗಿದ್ದರೂ, ಒಂದು ಎಕರೆ ಕೃಷಿ ಆರ್.ಟಿ.ಸಿಗೆ 25 ಕೆ.ಜಿ ಬ್ಯಾಗ್ ಖರೀದಿ ಮಾಡಿದಲ್ಲಿ ಬ್ಯಾಗ್ ಒಂದಕ್ಕೆ 200 ರೂಪಾಯಿವರೆಗೆ ಸಬ್ಸಿಡಿ ಕೂಡ ಸಿಗುತ್ತದೆ. ಕರಾವಳಿ ಭಾಗದಲ್ಲಿ ತುಂಡು ಭೂಮಿ ಹೊಂದಿರುವ ಕೃಷಿಕರ ಸಂಖ್ಯೆ ಹೆಚ್ಚಿದೆ. ಅಂತಹ ರೈತರು ಮತ್ತು ಐದು ಎಕರೆ ಕೃಷಿ ಭೂಮಿ ಹೊಂದಿರುವ ರೈತರೂ ಸಹ ಈ ಕೇಂದ್ರದಿಂದ ಬೀಜ ತೆಗೆದುಕೊಂಡು ಹೋಗಬಹುದಾಗಿದೆ.

ಕಳೆದ ವರ್ಷ ಕೋಟ ಹೋಬಳಿಯಲ್ಲಿ 410 ಕ್ವಿಂಟಾಲ್ ಬೀಜ ಮಾರಾಟವಾಗಿದ್ದು, ಈ ವರ್ಷ 545 ಕ್ವಿಂಟಾಲ್ ಬೀಜ ಮಾರಾಟದ ಗುರಿ ಹೊಂದಿದ್ದೇವೆ ಎಂದು ಕೃಷಿ ಅಧಿಕಾರಿ ಸುಪ್ರಭಾ ತಿಳಿಸಿದ್ದಾರೆ.

ಮಳೆ ಆರಂಭಕ್ಕೂ ಮುನ್ನ ಗದ್ದೆಗೆ ಸಾವಯವ ಹಟ್ಟಿಗೊಬ್ಬರ, ಗದ್ದೆಯ ಬದಿ ತೆಗೆಯುವ ಕಾರ್ಯದಲ್ಲಿ ರೈತರು ಈಗಾಗಲೇ ತೊಡಗಿಸಿಕೊಂಡಿದ್ದು, ಈ ತಿಂಗಳ ಎರಡು, ಮೂರನೇ ವಾರದಲ್ಲಿ ಬಿತ್ತನೆಯಾಗಿ ಜೂನ್ ಮೊದಲ ವಾರದಲ್ಲಿಯೇ ನಾಟಿ ಕಾರ್ಯ ಆರಂಭಿಸಲಾಗುತ್ತದೆ. ಈ ಎಲ್ಲ ಬೆಳವಣಿಗೆಯ ನಡುವೆ ಮಳೆಯನ್ನು ಅವಲಂಬಿಸಿ ಬಿತ್ತನೆ ಮಾಡುವವರೂ ಇದ್ದಾರೆ. ಇನ್ನು ಕೆಲವರು ಕೆರೆ, ಬಾವಿ ನೀರು ಅವಲಂಬಿಸಿ ಬಿತ್ತನೆ ಮಾಡುತ್ತಾರೆ. ರೈತರ ಅಂದುಕೊಂಡಂತೆ ಮಳೆ ಬಂದರೆ ಶೇ.70ರಷ್ಟು ಬಿತ್ತನೆ ಕಾರ್ಯ ಮುಗಿಸಬಹುದು ಎಂದು ಅಂದಾಜಿಸಲಾಗಿದೆ.

ಕೋಟ ರೈತ ಸಂಪರ್ಕ ಕೇಂದ್ರದಲ್ಲಿ ಈಗಾಗಲೇ ಭತ್ತದ ಬೀಜ ದಾಸ್ತಾನು ಇದ್ದು ಅಲ್ಲಿನ ಅಧಿಕಾರಿ ವರ್ಗ ವಿತರಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ರೈತಧ್ವನಿ ಸಂಘದ ಮೂಲಕ ರೈತರಿಗೆ ಕಾಲಕಾಲಕ್ಕೆ ಬೇಕಾಗುವ ಪರಿಕರ, ಇನ್ನಿತರ ಬೀಜೋತ್ಪನ್ನವನ್ನು ಒದಗಿಸುವಲ್ಲಿ ಜಿಲ್ಲಾ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಲು ಬದ್ಧರಾಗಿದ್ದೇವೆ.

ಜಯರಾಮ ಶೆಟ್ಟಿ, ಅಧ್ಯಕ್ಷರು ರೈತ ಧ್ವನಿ ಸಂಘ ಕೋಟ