ಜಿಲ್ಲೆ

ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆ, ಸ್ಥಳೀಯವಾಗಿ ಜೋರಾದ ಕಸರತ್ತು

ಚಿಕ್ಕಬಳ್ಳಾಪುರ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್) ಚುನಾವಣೆ ಘೋಷಣೆಯಾಗಿದ್ದು ಸ್ಥಳೀಯ ನಾಯಕರು ಹಿಡಿತವನ್ನು ಸಾಧಿಸಲು ಕಸರತ್ತು ಪ್ರಾರಂಭಿಸಿದ್ದಾರೆ.
ನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲೆಯಲ್ಲಿ ಏ.27 ರಂದು ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ರಾಜಕೀಯ ಪಕ್ಷದ ನಾಯಕರು, ಸಹಕಾರಿ ಕ್ಷೇತ್ರದಲ್ಲಿನ ಮುಖಂಡರು ಈಗಾಗಲೇ ಮತದಾರರನ್ನು ಒಲಿಸಿಕೊಳ್ಳುವ ಕೆಲಸದಲ್ಲಿ ತೊಡಗಿದ್ದು ಈ ನಿಟ್ಟಿನಲ್ಲಿ ನಗರದ ಗೃಹ ಕಚೇರಿಯಲ್ಲಿ ಸಂಸದ ಡಾ ಕೆ.ಸುಧಾಕರ್, ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುಕ್ತ ಮುನಿಯಪ್ಪ  ನೇತೃತ್ವದಲ್ಲಿ ಚುನಾವಣಾ ಸಿದ್ಧತಾ ಚರ್ಚೆ ಸಭೆ ನಡೆಯಿತು.
ಕ್ಷೇತ್ರದ ಬಹುತೇಕ ಸ್ಥಳಿಯ ಆಡಳಿತ ಸಂಸ್ಥೆಗಳು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಎನ್ ಡಿಎ ಹಿಡಿತದಲ್ಲಿವೆ. ಹಾಗೆಯೇ ಜನರಪರ ಆಡಳಿತದ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದು ಕೃಷಿಕರ ಹಿತವನ್ನು ಕಾಪಾಡಿ, ಸವಲತ್ತುಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲೂ ಬಣದ ಹೆಚ್ಚಿನ ನಿರ್ದೇಶಕರು ಆಯ್ಕೆಯಾಗಬೇಕಾಗಿದೆ. ಇದಕ್ಕೆ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಎಲ್ಲ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಸಂಸದ ಡಾ ಕೆ.ಸುಧಾಕರ್ ಸಲಹೆ ನೀಡಿದರು.
ಜಿ.ಪಂ.ಮಾಜಿ ಅಧ್ಯಕ್ಷರಾದ ಪಿ.ಎನ್.ಕೇಶವರೆಡ್ಡಿ, ಮುನೇಗೌಡ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಅನಿಲ್, ನಗರಸಭಾ ಅಧ್ಯಕ್ಷ ಎ.ಗಜೇಂದ್ರ, ಮುಖಂಡರಾದ ಮರಳುಕುಂಟೆ ಕೃಷ್ಣಮೂರ್ತಿ, ಎ.ವಿ.ಭೈರೇಗೌಡ ಮತ್ತಿತರರು ಇದ್ದರು.

*ಸಂಘಕ್ಕೆ 14 ನಿರ್ದೇಶಕರ ಆಯ್ಕೆ
ತಾಲೂಕು ಕೃಷಿ ವ್ಯವಸಾಯೋತ್ಪನ್ನ ಸಹಕಾರ ಸಂಘದ ಚುನಾವಣೆಗೆ ಎ ವರ್ಗದ 15 ಮತದಾರರು (ತಾಲೂಕು ವ್ಯಾಪ್ತಿಯಲ್ಲಿ 15 ವಿಸ್ಸೆಸ್ಸೆನ್ ಸಂಘಗಳಿಂದ ಬಂದ ತಲಾ ಒಬ್ಬರು), ಬಿ ವರ್ಗದಲ್ಲಿ 3558 ಮತದಾರರು( ಟಿಎಪಿಸಿಎಂಎಸ್ನಲ್ಲಿನ ಸದಸ್ಯರು) ಇದ್ದಾರೆ. 14 ನಿರ್ದೇಶಕರನ್ನು ಆಯ್ಕೆ ಮಾಡಬೇಕಾಗಿದೆ. ಈ ಪೈಕಿ ಎ ವರ್ಗದ ಮತದಾರರು 5 ನಿರ್ದೇಶಕರು ಹಾಗೂ ಬಿ ವರ್ಗದ ಮತದಾರರು 9 ನಿರ್ದೇಶಕರನ್ನು ಆಯ್ಕೆ ಮಾಡಬೇಕಾಗಿದೆ. 

*ಚುನಾವಣಾ ಪ್ರಕ್ರಿಯೆ
ಟಿಎಪಿಸಿಎಂಎಸ್ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ಏ.17 ರಿಂದ ಏ.19 ರವರೆಗೆ (ಮಧ್ಯಾಹ್ನ 3 ರವರೆಗೆ) ಉಮೇದುವಾರಿಕೆ ಸಲ್ಲಿಕೆ, ಏ.20 ಉಮೇದುವಾರಿಕೆ ಪರಿಶೀಲನೆ, ಏ.21 ಕ್ಕೆ ಉಮೇದುವಾರಿಕೆ ವಾಪಸ್ಸಾತಿಗೆ ಅವಕಾಶ, ಏ.27 ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು ಬಳಿಕ ಫಲಿತಾಂಶ ಘೋಷಿಸಲಾಗುತ್ತದೆ ಎಂದು ಸಂದ ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.