ಜಿಲ್ಲೆ

ಕೃಷಿಹೊಂಡ ಅಪಾಯ ವಲಯ!

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಬೇಸಿಗೆ ಪ್ರಾರಂಭವಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ೋಷಣೆಯಾಗುತ್ತಿದ್ದಂತೆ ಕೃಷಿ ಹೊಂಡದಲ್ಲಿ ಮಕ್ಕಳು ಈಜಲು ಹೋಗಿ ಪ್ರಾಣಕಳೆದುಕೊಳ್ಳುವಂತ ದುರ್ಘಟನೆಗಳು ಎದುರಾಗುವ ಹಿನ್ನೆಲೆಯಲ್ಲಿ ಕೃಷಿ ಹೊಂಡಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸುವಂತೆ ಕೃಷಿ ಇಲಾಖೆ ರೈತರಲ್ಲಿ ಮನವಿ ಮಾಡಿದೆ.

ಕೃಷಿಭಾಗ್ಯ ಯೋಜನೆಯಡಿ ಪ್ರಸ್ತುತ ಸಾಲಿನಲ್ಲಿ ಕೃಷಿಹೊಂಡ ನಿರ್ಮಿಸಲು ತಂತಿಬೇಲಿ ಕಡ್ಡಾಯಗೊಳಿಸಲಾಗಿದೆ, ಕೃಷಿಹೊಂಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ತಂತಿಬೇಲಿ ಅಥವಾ ಪರ್ಯಾಯವಾಗಿ ಸುರಕ್ಷತಾ ಕ್ರಮ ಕೈಗೊಳ್ಳಬೇಕೆಂದು ನಿಯಮಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಕೃಷಿಹೊಂಡ ಸಬ್ಸಿಡಿ ನೀಡುವ ಮೊದಲು ತಂತಿಬೇಲಿ ಅಳವಡಿಸಿರುವುದನ್ನು ಪರಶೀಲಿಸಲಾಗುತ್ತದೆ. ಇದಲ್ಲದೆ ಹೋದರೆ ಹಣ ಬಿಡುಗಡೆಯಾಗುವುದಿಲ್ಲ ಆದರೆ ಈ ಹಿಂದೆ ನಿರ್ಮಾಣ ಮಾಡಿರುವ ಕೃಷಿಹೊಂಡಗಳಿಗೆ ಈ ನಿಯಮ ಅನ್ವಯವಾಗದಿರುವುದು ಪ್ರಾಣಾಪಾಯಗಳಿಗೆ ಅವಕಾಶ ಮಾಡಿಕೊಡುತ್ತಿದೆ, ಕೃಷಿಹೊಂಡಗಳು ಅಪಾಯವಲಯ ಎಂದು ಗುರುತಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಈ ಹಿಂದೆ ನಿರ್ಮಿಸಿರುವ ಕೃಷಿಹೊಂಡಗಳಿಗೂ ರಕ್ಷಣಾ ಕ್ರಮಕೈಗೊಳ್ಳುವಂತೆ ರೈತರಲ್ಲಿ ಮನವಿ ಮಾಡಿದೆ.

ಈಜಲು ಹೋಗಿ ಬಾಲಕ ಸಾವು: ಜಿಲ್ಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಹಲವು ಕಡೆಗಳಲ್ಲಿ ಇಂಥ ದುರ್ಘಟನೆಗಳು ನಡೆದಿವೆ, ಇತ್ತೀಚಿಗೆ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಗ್ರಾಮದ 14 ವರ್ಷದ ಬಾಲಕ ನಾಗೇಶ್ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದ. ಶನಿವಾರ ಮಧ್ಯಾಹ್ನಕ್ಕೆ ಶಾಲೆ ಮುಗಿಸಿಕೊಂಡು ಬಿಸಿಲಿನ ಬೇಗೆ ನೀಗಿಸಿಕೊಳ್ಳಲು ಮೂರ ಜನ ಸ್ನೇಹಿತರೊಂದಿಗೆ ಕೃಷಿ ಹೊಂಡದಲ್ಲಿ ಈಜಾಡಲು ಹೋಗಿದ್ದ, ಕೃಷಿಹೊಂಡದಲ್ಲಿ ಮುಳುಗಿ ನಾಗೇಶ್ ಕೊನೆಯುಸಿರೆಳೆದಿದ್ದ. ಇದೇ ರೀತಿ ಈ ಹಿಂದೆಯೂ ಸಾಕಷ್ಟು ಘಟನೆಗಳು ನಡೆದಿವೆ.

ರ್ಟಾಾಲಿನ್ ಜಾರುತ್ತದೆ: ಸಾಮಾನ್ಯವಾಗಿ ಕೃಷಿಹೊಂಡದಲ್ಲಿ ಕಪ್ಪುಬಣ್ಣದ ರ್ಟಾಾಲಿನ್ ಅಳವಡಿಸಲಾಗಿರುತ್ತದೆ, ಸದಾಕಾಲ ನೀರು ನಿಲ್ಲುವುದರಿಂದ ಪಾಚಿ ಕಟ್ಟಿಕೊಂಡು ರ್ಟಾಾಲಿನ್ ಜಾರುತ್ತಿರುತ್ತದೆ, ಈಜಲು ಹೋದ ವೇಳೆ ಜಾರುವುದು ಸಾಮಾನ್ಯವಾಗಿರುವುದರಿಂದ ಕೃಷಿಹೊಂಡದಿಂದ ಮೇಲೆ ಬರಲು ಸಾಧ್ಯವಿಲ್ಲ. ಜಾನುವಾರುಗಳು ಸಹ ನೀರು ಕುಡಿಯಲು ಹೋಗಿ ಜಾರಿ ಕೃಷಿಹೊಂಡಕ್ಕೆ ಬೀಳುವುದು ಸಾಮಾನ್ಯವಾಗಿದೆ.

2014-15ರಲ್ಲಿ ಅನುಷ್ಠಾನ: ಕೃಷಿ ಇಲಾಖೆಯ ಬಹುಪಯೋಗಿ ಯೋಜನೆಯಾದ ಕೃಷಿ ಭಾಗ್ಯ ಯೋಜನೆಯನ್ನು 2014-15 ನೇ ಸಾಲಿನಿಂದ ಅನುಷ್ಟಾನ ಮಾಡಲಾಗಿದೆ, ಬೇಸಾಯ ಮಾಡುವ ರೈತರಿಗೆ ನೀರಿನ ಸಂಗ್ರಹಣೆಗಾಗಿ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳನ್ನು ನಿರ್ಮಿಸಿಲಾಗಿರುತ್ತದೆ. ತದನಂತರ ತೋಟಗಾರಿಕೆ ಹಾಗೂ ನರೇಗಾ ಯೋಜನೆಯಡಿ ಕೂಡ ಕೃಷಿ ಹೊಂಡಗಳ ನಿರ್ಮಾಣವಾಗಿರುತ್ತವೆ.

ಇಲಾಖೆಯಿಂದ ಅರಿವು ಕಾರ್ಯಕ್ರಮ: ಕೃಷಿ ಹೊಂಡಗಳಿಗೆ ಸೂಕ್ತವಾದ ರಕ್ಷಣಾ ಕ್ರಮಗಳನ್ನು ಅಳವಡಿಸದೆ ಇರುವುದರಿಂದ ಕೃಷಿ ಹೊಂಡಗಳಲ್ಲಿ ಜೀವ ಹಾನಿಯಾಗುತ್ತಿರುವ ಪ್ರಕರಣಗಳು ದಾಖಲಾಗುತ್ತಿವೆ. ಈ ಕುರಿತು ರೈತರಲ್ಲಿ ಅರಿವು ಮೂಡಿಸಲು ಕೃಷಿ ಇಲಾಖೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಕೃಷಿ ಹೊಂಡದ ಸುತ್ತಲು ತಂತಿ ಬೇಲಿ, ನೆರಳು ಪರದೆ ಅಥವಾ ತಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳಿಂದ ಬೇಲಿ ಆಳವಡಿಸುವುದು ಕಡ್ಡಾಯವಾಗಿರುತ್ತದೆ. ಕೃಷಿ ಹೊಂಡದ ಮುಂದೆ ಅಪಾಯ ಮತ್ತು ಈಜಬಾರದು ಎಂಬ ಸೂಚನಾ ಫಲಕವನ್ನು ಕಡ್ಡಾಯವಾಗಿ ಹಾಕುವಂತೆ ಇಲಾಖೆ ಸೂಚನೆ ನೀಡಿದೆ. ಕೃಷಿ ಹೊಂಡಗಳಲ್ಲಿ ಸುರಕ್ಷತಾ ಕ್ರಮವಾಗಿ ಹಗ್ಗದೊಂದಿಗೆ ಟ್ಯೂಬ್‌ಗಳನ್ನು ನಾಲ್ಕೂ ಮೂಲೆಗಳಲ್ಲಿ ಇಳಿ ಬಿಡಲು ತಿಳಿಸಿದೆ. ರೈತರು ತಮ್ಮ ಜಮೀನಿನಲ್ಲಿರುವ ಮುಖ್ಯವಾಗಿ ಮನೆಯ ಸಮೀಪವಿರುವ, ರಸ್ತೆ ಪಕ್ಕದಲ್ಲಿರುವ ಎಲ್ಲ ಕೃಷಿ ಹೊಂಡಗಳಿಗೆ ಸುರಕ್ಷಿತ ಕ್ರಮ ಕೈಗೊಳ್ಳಬೇಕು. ರೈತರು ತಮ್ಮ ಕೃಷಿ ಹೊಂಡಗಳಿಗೆ ಸೂಕ್ತವಾದ ರಕ್ಷಣಾ ಕ್ರಮಗಳನ್ನು ಆಳವಡಿಸಿ ಪ್ರಾಣ ಹಾನಿ ತಪ್ಪಿಸಲು ಸಹಕರಿಸಬೇಕೆಂದು ಜಂಟಿ ಕೃಷಿ ನಿರ್ದೆಶಕರು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಕೃಷಿಹೊಂಡ ಯೋಜನೆಯಡಿ ಕಡ್ಡಾಯವಾಗಿ ತಂತಿಬೇಲಿ ನಿರ್ಮಿಸುವಂತೆ ನಿಯಮಗಳನ್ನು ರೂಪಿಸಲಾಗಿದೆ. ಆದರೆ ಈ ಹಿಂದೆ ಈ ನಿಯಮ ಕಡ್ಡಾಯವಿರಲಿಲ್ಲ. ಆದ್ದರಿಂದ ಈ ಹಿಂದೆ ನಿರ್ಮಾಣ ಮಾಡಿರುವ ಕೃಷಿಹೊಂಡಗಳಿಗೆ ರಕ್ಷಣಾ ಕ್ರಮಕೈಗೊಳ್ಳುವಂತೆ ರೈತರಲ್ಲಿ ಮನವಿ ಮಾಡಲಾಗಿದೆ. ಜನ ಜಾನುವಾರುಗಳ ಪ್ರಾಣ ರಕ್ಷಣೆ ಬಗ್ಗೆ ರೈತರು ಮುಂಜಾಗ್ರತಾಕ್ರಮ ಕೈಗೊಳ್ಳಬೇಕು. ಈಜಬಾರದು ಎಂಬ ಸೂಚನಾ ಫಲಕ ಅಳವಡಿಸಿ ಕೃಷಿಹೊಂಡದತ್ತ ಯಾರೂ ಸುಳಿಯದಂತೆ ಎಚ್ಚರಿಕೆವಹಿಸಬೇಕು.

ಗಾಯತ್ರಿ, ಉಪನಿರ್ದೇಶಕಿ ಕೃಷಿ ಇಲಾಖೆ, ಬೆಂಗಳೂರು ಗ್ರಾಮಾಂತರ