ಚಿಕ್ಕಬಳ್ಳಾಪುರ: ಹಿಂಗಾರು ಅವಧಿಯಲ್ಲಿ ರೈತರು ಕೃಷಿ ಬೆಳೆಗಳಿಗಿಂತಲೂ ತೋಟಗಾರಿಕೆ, ರೇಷ್ಮೆ, ಹೈನೋದ್ಯಮದ ಕಡೆಗೆ ಹೆಚ್ಚಿನ ಗಮನ ಹರಿಸಿದ್ದಾರೆ.
ಈಗಾಗಲೇ ಹಿಂಗಾರು ಅವಧಿ ಪ್ರಾರಂಭವಾಗಿ ತಿಂಗಳೇ ಕಳೆದಿದ್ದು ಈ ಅವಧಿಯಲ್ಲಿ ಗುರಿ 820 ಹೆಕ್ಟೇರ್ ಪ್ರದೇಶ ಪೈಕಿ 215 ಪ್ರದೇಶದಲ್ಲಿ ಮಾತ್ರ ಕೃಷಿ ಬೆಳೆಗಳ ಬೀಜ ಬಿತ್ತನೆಯ ಸಾಧನೆಯಾಗಿದೆ. ಅದರಲ್ಲೂ ಹೆಚ್ಚಿನ ಗುರಿ ಹೊಂದಿದ್ದರೂ ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆಯಲ್ಲಿ ಶೂನ್ಯ ಪ್ರಗತಿ ಕಂಡು ಬಂದಿದೆ. ಉಳಿದ ತಾಲೂಕುಗಳಲ್ಲೂ ಸಾಧನೆಯೂ ಅಲ್ಪ ಪ್ರಮಾಣದಲ್ಲಿಯೇ ಇದೆ.
ಕಳೆದ ಮುಂಗಾರಿನಲ್ಲಿ 1.24 ಲಕ್ಷ ಹೆಕ್ಟೇರ್ ಗುರಿ ಪೈಕಿ 1.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಸಾಧನೆಯಾಗಿತ್ತು. ಹಿಂಗಾರಿನಲ್ಲಿ ಪ್ರತಿ ವರ್ಷದಂತೆ ಅಲ್ಪ ಪ್ರಮಾಣದ ಗುರಿಯ ನಿಗದಿಯ ನಡುವೆ ಅತಿ ಕಡಿಮೆ ಸಾಧನೆಯನ್ನು ಈ ಬಾರಿಯೂ ಕಾಣಲಾಗಿದೆ. ದಸರಾ, ದೀಪಾವಳಿ, ಸಂಕ್ರಾಂತಿ ಹಬ್ಬಗಳ ಲೆಕ್ಕಾಚಾರದಲ್ಲಿ ಬಹುತೇಕ ಕೃಷಿಕರು ಹೂವು, ಹಣ್ಣು, ತರಕಾರಿ ಬೆಳೆಯಲು ಹೆಚ್ಚಿನ ಒಲವು ವ್ಯಕ್ತಪಡಿಸುತ್ತಾರೆ. ಮುಂಗಾರು ಅವಧಿಯಲ್ಲಿ ಬಿತ್ತನೆ ಕುಂಠಿತ ಮತ್ತು ವಿಳಂಬ ಮಳೆಯಾದಲ್ಲಿ ಮಾತ್ರ ಹಿಂಗಾರಿನಲ್ಲಿ ಕೃಷಿ ಬೆಳೆಗಳನ್ನು ಬೆಳೆಯುವುದರ ಕಡೆಗೆ ಗಮನಹರಿಸಲಾಗುತ್ತದೆ ಎಂದೇಳಲಾಗುತ್ತದೆ. ಇನ್ನು ಮುಂಗಾರು ಮಳೆ ಪ್ರಾರಂಭದಲ್ಲಿ ಚೆನ್ನಾಗಿ ಸುರಿದು, ಅಂತ್ಯದಲ್ಲಿ ಕೈ ಕೊಟ್ಟಿದ್ದು ಬಳಿಕ ಹಿಂಗಾರಿನ ಪ್ರಾರಂಭದ ಅಕ್ಟೋಬರ್ ನಲ್ಲಿ ವರುಣರಾಯ ನಿರೀಕ್ಷೆಗೆ ಅನುಗುಣವಾಗಿ ಕೈ ಹಿಡಿದ್ದಾನೆ. ಇದರಿಂದ ಆಲೂಗಡ್ಡೆ ಬಿತ್ತನೆ, ದ್ರಾಕ್ಷಿ, ತರಕಾರಿ ಬೆಳೆ ಬೆಳೆಯುವ ಕೆಲಸವು ಪ್ರಗತಿಯಲ್ಲಿದೆ.
ಹೂವುಗಳ ದರ ಕುಸಿತ, ಹಣ್ಣು ತರಕಾರಿಗಳ ಬೆಲೆ ಹೆಚ್ಚಳ
ಕಳೆದ ವರಮಹಾಲಕ್ಷ್ಮೀ, ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಹೂವುಗಳಿಗೆ ಒಳ್ಳೆಯ ದರ ಸಿಗುತ್ತಿತ್ತು. ಆದರೆ, ದಸರಾ ಬಳಿಕ ಪಾತಾಳಕ್ಕೆ ಕುಸಿದಿದೆ. ಇದೀಗ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣುಗಳ ಬೆಲೆಯು ದುಬಾರಿಯಾಗಿದೆ.
ಬೇಕಾಗಿದ್ದು ಸಕಾಲಕ್ಕೆ ಸಿಗಲ್ಲ
ಕೃಷಿ ಇಲಾಖೆಯು ಮುಂಗಾರಿನ ಅವಧಿಯ ಮಾದರಿಯಲ್ಲಿ ಹಿಂಗಾರಿನಲ್ಲೂ ಅಗತ್ಯ ರಸಗೊಬ್ಬರ ದಾಸ್ತಾನಿಟ್ಟುಕೊಂಡಿದೆ. 37766 ಮೆಟ್ರಿಕ್ ಟನ್ ಅಗತ್ಯವಿದ್ದು ಈಗಾಗಲೇ 12569 ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ. ಮತ್ತೊಂದೆಡೆ ನಿಗದಿತ ಬೆಳೆಗೆ ಅಗತ್ಯವಿರುವ ಗೊಬ್ಬರವು ಸಕಾಲಕ್ಕೆ ಸಿಗಲ್ಲ. ಕಳೆದ ಎರಡು ವಾರದ ಹಿಂದೆ ಡಿಎಪಿ ಗೊಬ್ಬರಕ್ಕೆ ಎರಡ್ಮೂರು ಬಾರಿ ಅಲೆದರೂ ಸಿಗಲಿಲ್ಲ. ಮಾರಾಟಗಾರರು ನಾಲ್ಕೈದು ದಿನದ ಬಳಿಕ ತರಿಸಿಕೊಟ್ಟರು ಎಂದು ಜಾತವಾರದ ರೈತ ಮುನಿರಾಜು ತಿಳಿಸಿದ್ದಾರೆ.