ಜಿಲ್ಲೆ

ಕೃಷಿ ಭೂಮಿಗೆ ನುಗ್ಗಿದ ತ್ಯಾಜ್ಯ, ಮಣೂರು ಪಡುಕರೆ ಭಾಗದ ರೈತರಲ್ಲಿ ಆತಂಕ

Udupi

- ರವೀಂದ್ರ ಕೋಟ

ಕಳೆದ ವಾರ ಸುರಿದ ಭಾರಿ ಮಳೆಗೆ ಕೋಟ ಗ್ರಾಪಂ ವ್ಯಾಪ್ತಿಯ ಮಣೂರು ಪಡುಕರೆಯಲ್ಲಿ ಸಮಸ್ಯೆ ಎದುರಾಗಿದೆ. ಕೃಷಿ ಭೂಮಿ ಸಮೀಪ ಹರಿಯುವ ಉಪ್ಪು ನೀರಿನ ಹೊಳೆಯಲ್ಲಿ ನೀರು ಉಕ್ಕಿ ತ್ಯಾಜ್ಯ ರಾಶಿ ಕೃಷಿ ಭೂಮಿ ಸೇರಿದೆ.

ಇದು ಕೃಷಿಕರಿಗೆ ತೊಂದರೆ ಉಂಟು ಮಾಡಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ಕಂಗೆಟ್ಟಿದ್ದ ಕೃಷಿಕರು ಪ್ಲಾಸ್ಟಿಕ್ ತ್ಯಾಜ್ಯದಿಂದ ಮತ್ತೊಂದು ಸಂಕಷ್ಟ ಎದುರಿಸುವಂತಾಗಿದೆ.

ಹೆದ್ದಾರಿ ಬದಿ, ನದಿ, ಹೊಳೆ, ಸಮುದ್ರಕ್ಕೆ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುತ್ತಿರುವುದು ಆತಂಕಕಾರಿ. ಮದುವೆ, ಗೃಹಪ್ರವೇಶ ಮೊದಲಾದ ಕಡೆ ಉಪಯೋಗಿಸಿದ ಬಾಟಲಿ, ಪ್ಲಾಸ್ಟಿಕ್ ಪ್ಲೇಟ್, ಲೋಟ ಮೊದಲಾದವುಗಳನ್ನು ನೀರಿನಲ್ಲಿ ತೇಲಿ ಬಿಡುತ್ತಿದ್ದು ಇವುಗಳು ಲೋಡ್‌ಗಟ್ಟಲೆ ಭತ್ತದ ಬಯಲು ಪ್ರದೇಶದಲ್ಲಿ ಸೇರಿಕೊಂಡಿವೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಪಂಚಾಯಿತಿಗಳು ಸಮಗ್ರ ಯೋಜನೆ ರೂಪಿಸಬೇಕಿದೆ.

ಕೃಷಿ ಮಾಡುವುದೇ ಕಷ್ಟ. ಒಂದೆಡೆ ಪ್ರಕೃತಿ ವಿಕೋಪದಿಂದ ಹಾನಿ, ಇನ್ನೊಂದೆಡೆ ಕಾಡುಪ್ರಾಣಿಗಳ ಉಪಟಳ. ಇದಲ್ಲದೆ ಪ್ಲಾಸ್ಟಿಕ್, ತ್ಯಾಜ್ಯವಸ್ತುಗಳನ್ನು ಕಂಡಕಂಡಲ್ಲಿ ಎಸೆಯುವ ಚಾಳಿಗೆ ಸ್ಥಳೀಯಾಡಳಿತ ಅಗತ್ಯ ಕ್ರಮ ಕೈಗೊಂಡು ಕೃಷಿ ಭೂಮಿ ಪ್ರದೇಶಗಳಲ್ಲಿ ಹಾನಿಯಾಗದಂತೆ ನೋಡಿಕೊಳ್ಳಬೇಕು. - ಜಯರಾಮ ಶೆಟ್ಟಿ, ಕೋಟ ರೈತಧ್ವನಿ ಸಂಘ ಅಧ್ಯಕ್ಷ ಪ್ಲಾಸ್ಟಿಕ್ ಮುಕ್ತ ಪಂಚಾಯಿತಿ ಮಾಡಲು ಹಲವು ಕ್ರಮಗಳನ್ನು ಕೈಗೊಂಡಿದ್ದು ಅದರಲ್ಲಿ ಪೇಟೆಯಲ್ಲಿರುವ ಅಂಗಡಿಗಳ ಒಣ ಕಸ ಪಡೆದು ವಿಂಗಡಿಸಲಾಗುತ್ತಿದೆ. ಮನೆಗಳ ಒಣಕಸ ಪಡೆಯಲು ಕಾರ್ಯಪ್ರವೃತ್ತರಾಗಿದೆ. ನೆರೆಹಾವಳಿ ಪ್ರಕೃತಿ ವಿಕೋಪದಿಂದ ಆಗಿದ್ದರಿಂದ ಇದರ ಬಗ್ಗೆ ಮಾಹಿತಿ ಪಡೆದು ನಮ್ಮ ವ್ಯವಸ್ಥೆಯ ಮೂಲಕ ಆಗುವ ಪರಿಹಾರ ಕಂಡುಕೊಳ್ಳಲಾಗುವುದು. -ಸುರೇಶ್ ಬಂಗೇರ, ಕೋಟ ಗ್ರಾಪಂ ಅಭಿವೃದ್ಧಿ ಅಧಿಕಾರಿ

ಹಂದಿ ಉಪಟಳಕ್ಕೆ ಬೆಚ್ಚಿಬಿದ್ದ ಕೃಷಿಕರು ಕೋಟ ಗ್ರಾಪಂ ವ್ಯಾಪ್ತಿಯ ಮೂಡುಗಿಳಿಯಾರು ಭಾಗದಲ್ಲಿ ಹಂದಿ ಉಪಟಳ ಅತಿಯಾಗಿದ್ದು, ಮೂಡುಗಿಳಿಯಾರಿನ ಸುತ್ತಮುತ್ತ 300 ಎಕರೆ ಕೃಷಿ ಭೂಮಿಗೆ ಹಾನಿಯಾಗಿದೆ. ಹಂದಿಗಳು ಭತ್ತದ ಗದ್ದೆಯನ್ನು ರಾಡಿ ಎಬ್ಬಿಸಿದ್ದು ಕೃಷಿ ಕಾಯಕ ನಡೆಸುತ್ತಿದ್ದ ಸತೀಶ್ ಶೆಟ್ಟಿ ಎಂಬುವರನ್ನು ಗಾಯಗೊಳಿಸಿದೆ. ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಹಂದಿ, ಚಿರತೆ, ನವಿಲುಗಳು ಕಾಣಿಸುತ್ತಿದ್ದು ಜನರ ನಿದ್ದೆಗೆಡಿಸಿದೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಕೃಷಿಕರು ಆಗ್ರಹಿಸಿದ್ದಾರೆ.

ನಮ್ಮ ಭಾಗದಲ್ಲಿ ಹಂದಿ ಮೊದಲಾದ ಕಾಡುಪ್ರಾಣಿಗಳು ಅತಿಯಾಗಿ ಕಾಣಿಸಿಕೊಂಡು ಕೃಷಿ ಭೂಮಿಯನ್ನು ಹಾನಿಗೊಳಿಸಿವೆ. ಈ ಬಗ್ಗೆ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೇನೆ. ಪರಿಹಾರದ ಭರವಸೆ ನೀಡಿದ್ದಾರೆ. - ರಾಜಾರಾಮ ಶೆಟ್ಟಿ, ಸ್ಥಳೀಯ ಕೃಷಿಕರು ಹಂದಿ ಉಪಟಳ ಕಂಡುಬಂದ ಪ್ರದೇಶಕ್ಕೆ ಭೇಟಿ ನೀಡಿದ್ದೇವೆ. ಅಲ್ಲಿ ಓರ್ವ ರೈತರನ್ನು ಗಾಯಗೊಳಿಸದ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರದಿಂದ ಪರಿಹಾರ ಒದಗಿಸಲಾಗುತ್ತದೆ. ಕೃಷಿ ಭೂಮಿ ಹಾನಿ ಕುರಿತಂತೆ ಆ ಭಾಗದ ರೈತರು ಅರ್ಜಿ ನೀಡಿದರೆ ಕೃಷಿ ಇಲಾಖೆ ಮೂಲಕ ಸರ್ಕಾರದಿಂದ ಬೆಳೆಹಾನಿ ಪರಿಹಾರ ನೀಡಲು ಪ್ರಯತ್ನಿಸಲಾಗುವುದು. - ಹರೀಶ್ ಕೆ., ಉಪವಲಯ ಅರಣ್ಯಾಧಿಕಾರಿ ಬ್ರಹ್ಮಾವರ