ಮೈಸೂರು: ಜನಪರ ಮತ್ತು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಸದಾ ಮುಂದಿರುವ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ಸುದ್ದಿವಾಹಿನಿ ವತಿಯಿಂದ ಮೈಸೂರಿನಲ್ಲಿ ರಾಜ್ಯ ಮಟ್ಟದ ‘ಕೃಷಿ ಮೇಳ’ ಆಯೋಜಿಸಲಾಗಿದೆ. ಕೃಷಿ ಕ್ಷೇತ್ರದ ವೈವಿಧ್ಯಮಯ ಮುಖಗಳು ಇಲ್ಲಿ ಅನಾವರಣಗೊಳ್ಳಲಿದ್ದು, ಮೂರು ದಿನ ಕೃಷಿಲೋಕ ಮೈದಳೆಯಲಿದೆ. ಜ. 27, 28 ಮತ್ತು 29ರಂದು ಕೃಷಿ ಮೇಳ ನಡೆಯಲಿದ್ದು, ದೇಶದ ಪ್ರತಿಷ್ಠಿತ ವಿವಿಗಳಲ್ಲಿ ಒಂದಾಗಿರುವ ಮೈಸೂರು ವಿಶ್ವವಿದ್ಯಾಲಯ ಮೇಳಕ್ಕೆ ಸಹಯೋಗ ನೀಡಿದೆ. ಕೃಷಿ ಮೇಳದ ಮಳಿಗೆಗಳು ಹಾಗೂ ವೇದಿಕೆ ನಿರ್ಮಾಣ ಕಾರ್ಯಕ್ಕಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ಸೋಮವಾರ ಪೂಜಾ ವಿಧಿವಿಧಾನಗಳೊಂದಿಗೆ ಭೂಮಿಪೂಜೆ ನೆರವೇರಿಸಲಾಯಿತು.
ತಜ್ಞರಿಂದ ವಿಚಾರ ಮಂಡನೆ: ಕೃಷಿಲೋಕದ ಆಗುಹೋಗುಗಳ ಕುರಿತು ತಜ್ಞರು, ರೈತ ಮುಖಂಡರು ವಿಚಾರ ಮಂಡಿಸಲಿದ್ದಾರೆ. ಕೃಷಿರಂಗದಲ್ಲಿ ಆಗಿರುವ ಬದಲಾವಣೆ, ಬೆಳವಣಿಗೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಪರಿಚಯಿಸುವ ವಸ್ತುಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಕೃಷಿ ಸಂಶೋಧನೆ ಮಾದರಿಗಳು ನೋಡಲು ಸಿಗಲಿವೆ. ಕೃಷಿ ಮತ್ತು ರೈತರ ತವಕ-ತಲ್ಲಣಗಳ ಕುರಿತು ಮೂರು ದಿನಗಳಲ್ಲಿ ನಾಲ್ಕು ಗೋಷ್ಠಿಗಳನ್ನು ಆಯೋಜಿಸಲಾಗಿದೆ. ‘ಕೃಷಿ ಅಂದು, ಇಂದು, ಮುಂದು’, ‘ಹಣ್ಣು, ತರಕಾರಿ, ಹೂವು ಬೆಳೆಯಲ್ಲಿ ಲಾಭ ಗಳಿಕೆ ಹೇಗೆ?’, ‘ರಾಷ್ಟ್ರೀಯ ಪೇಯ’, ‘ಮೌಲ್ಯವರ್ಧಿತ ಕೃಷಿ ಮತ್ತು ಮಾರುಕಟ್ಟೆ’, ‘ಆರ್ಥಿಕ ಸಬಲತೆಗೆ ಹೈನೋದ್ಯಮ’ ವಿಷಯಗಳ ಕುರಿತು ತಜ್ಞರು, ರೈತ ಮುಖಂಡರು, ಪ್ರಗತಿಪರ ರೈತರು ಹಾಗೂ ಕೃಷಿ ವಿಜ್ಞಾನಿಗಳು ವಿಚಾರ ಮಂಡಿಸಲಿದ್ದಾರೆ.
ಜಾನಪದ ಕಲೆ ಮೆರುಗು: ರೈತರ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಕೃಷಿ ಸಂಸ್ಕೃತಿ ಕೂಡ ಅನಾವರಣಗೊಳ್ಳಲಿದೆ. ಕೃಷಿಗೆ ಸಂಬಂಧಿಸಿದ ಜಾನಪದ ಕಲೆ, ಸಾಂಸ್ಕೃತಿಕ ಚಟುವಟಿಕೆಗಳು ಮೇಳಕ್ಕೆ ಮೆರುಗು ನೀಡಲಿವೆ. ದೇಸಿ ಕ್ರೀಡೆಗಳ ಆಯೋಜನೆ ವಿಶೇಷ ಆಕರ್ಷಣೆಯಾಗಿದೆ. ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿವೆ.
ಜಾನುವಾರು ಪ್ರದರ್ಶನ: ಕೋಳಿ, ಬಾತುಕೋಳಿ, ಬಂಡೂರು ಕುರಿ ಸೇರಿ ವಿವಿಧ ತಳಿ ಪ್ರದರ್ಶನದ ಜತೆಗೆ, ಹೊಸ ತಳಿಯ ಜಾನುವಾರುಗಳ ಪ್ರದರ್ಶನವೂ ಇರಲಿದೆ.
ಮೆರವಣಿಗೆ: ಕೃಷಿ ಮೇಳದ ಅಂಗವಾಗಿ, ಜ. 27ರಂದು ಬೆಳಗ್ಗೆ 8.30ಕ್ಕೆ ನಗರದ ಸುಣ್ಣದಕೇರಿಯ ಮಹದೇಶ್ವರಸ್ವಾಮಿ ದೇವಸ್ಥಾನ ಮುಂಭಾಗದಿಂದ ಮೇಳ ನಡೆಯಲಿರುವ ಮಹಾರಾಜ ಕಾಲೇಜು ಮೈದಾನದವರೆಗೆ ಮೆರವಣಿಗೆ ನಡೆಯಲಿದೆ. ನಂದಿಕಂಬ, ವೀರಭದ್ರ ಕುಣಿತ, ಡೊಳ್ಳುಕುಣಿತ, ಪೂಜಾಕುಣಿತ, ಕಂಸಾಳೆ, ತಮಟೆ, ಕೀಲುಕುದುರೆ, ಕೋಲಾಟ ಮತ್ತು ನಗಾರಿ ಕಲಾ ತಂಡಗಳು ಭಾಗಿಯಾಗಿ ಮೆರವಣಿಗೆಗೆ ಮೆರುಗು ನೀಡಲಿವೆ.
ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದವರು, ವಿವಿಧ ಕ್ಷೇತ್ರದವರು ನೆರವು-ಸಹಕಾರ ನೀಡುವ ಮೂಲಕ ಮೇಳವನ್ನು ಯಶಸ್ವಿಗೊಳಿಸಲು ಹೆಗಲು ಕೊಟ್ಟಿದ್ದಾರೆ. ಸಾರ್ವಜನಿಕರು, ರೈತರು ಈ ಮೇಳದಲ್ಲಿ ಮುಕ್ತವಾಗಿ ಪಾಲ್ಗೊಂಡು ಕೃಷಿ, ಕಲೆ, ಗ್ರಾಮ ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಗ್ರಾಮೀಣ ಕ್ರೀಡೆಗಳ ಆಕರ್ಷಣೆ: ಮಾನಸಿಕ, ದೈಹಿಕ ಶಕ್ತಿಗೆ ಪೂರಕವಾಗಿದ್ದ ದೇಸಿ ಕ್ರೀಡೆಗಳನ್ನು ನೆನಪಿಸುವ ಹಾಗೂ ಅದರ ಸೊಬಗನ್ನು ಯುವಜನತೆಗೆ ಪರಿಚಯಿಸುವ ಸಲುವಾಗಿ ಗ್ರಾಮೀಣ ಕ್ರೀಡೆಗಳ ಸ್ಪರ್ಧೆ ಏರ್ಪಡಿಸಲಾಗಿದೆ. ಜ. 28 ಮತ್ತು 29 ರಂದು ಸ್ಪರ್ಧೆಗಳು ನಡೆಯಲಿವೆ. ಜ. 28ರಂದು ಬೆಳಗ್ಗೆ 10 ಗಂಟೆಗೆ ದೇಸಿ ಕ್ರೀಡೆಗಳಿಗೆ ಚಾಲನೆ ಸಿಗಲಿದೆ. ಪುರುಷರಿಗೆ ಬಾಳೆಹಣ್ಣು ತಿನ್ನುವ ಸ್ಪರ್ಧೆ, ಒಂಟಿಕಾಲಿನ ಓಟ, ಗೊಬ್ಬರಮೂಟೆ ಹೊತ್ತು ಓಡುವ ಸ್ಪರ್ಧೆ ಆಯೋಜಿಸಲಾಗಿದೆ. ಮಹಿಳೆಯರಿಗೆ ಬಾಳೆಹಣ್ಣು ತಿನ್ನುವ ಸ್ಪರ್ಧೆ, ಲೆಮನ್ ಆಂಡ್ ಸ್ಪೂನ್, ರಂಗೋಲಿ ಬಿಡಿಸುವುದು ಹಾಗೂ ಮಕ್ಕಳಿಗೆ ಸ್ಕಿಪ್ಪಿಂಗ್ ಸ್ಪರ್ಧೆ ನಡೆಯಲಿವೆ.
ನಗದು ಬಹುಮಾನ: ವಿಜೇತರಿಗೆ ಪ್ರಥಮ 3000 ರೂ., ದ್ವಿತೀಯ 2000 ರೂ. ಹಾಗೂ ತೃತೀಯ ಬಹುಮಾನ 1000 ರೂ. ನಗದು ಮತ್ತು ಟ್ರೋಫಿ ನೀಡಲಾಗುವುದು. ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಗುತ್ತದೆ.
ರಾಜ್ಯದ ಯಾವುದೇ ಜಿಲ್ಲೆಯ ಜನರು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬಹುದು. ರೈತರು ಮತ್ತು ಸಾರ್ವಜನಿಕರು ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡುವುದರ ಜತೆಗೆ ಪ್ರಶಸ್ತಿ ಗೆಲ್ಲಬಹುದು. ಆಸಕ್ತರು ಜ. 27ರ ಒಳಗೆ ಮೊ. 8310928134/9738886003ಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು. ಪ್ರವೇಶ ಶುಲ್ಕವಿರುವುದಿಲ್ಲ.
ಮುಖ್ಯಮಂತ್ರಿ ಉದ್ಘಾಟನೆ: ಕೃಷಿ ಮೇಳವನ್ನು ಜ.27ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸೇರಿ ಹಲವು ಸಚಿವರು, ಶಾಸಕರು, ಸಂಸದರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.