| ಭರತ್ ಶೆಟ್ಟಿಗಾರ್ ಮಂಗಳೂರು
ಸಹಕಾರ ಸಂಘಗಳ ಮೂಲಕ ಕೃಷಿ ಅಭಿವೃದ್ಧಿ ಸಾಲ ಪಡೆಯಲು ಮುಂದಾಗಿದ್ದ ರಾಜ್ಯದ ರೈತರಿಗೆ ನಿರಾಸೆ ಎದುರಾಗಿದೆ. ಸಾಲ ಪಡೆಯಲು ಸಲ್ಲಿಸಬೇಕಾಗಿರುವ ಘೊಷಣಾ ಪ್ರಮಾಣ ಪತ್ರದ (ನಮೂನೆ-3) ಆನ್ಲೈನ್ ಸೇವೆಯ ಗೊಂದಲದಿಂದಾಗಿ ಸಾವಿರಾರು ರೈತರು ಸಾಲ ಪಡೆಯಲಾಗದೆ ಸಂಕಷ್ಟ ಎದುರಿಸುವಂತಾಗಿದೆ. ರಾಜ್ಯದಲ್ಲಿ ಕೃಷಿ ಸಾಲ ನೀಡುವ ಬಹುತೇಕ ಎಲ್ಲ ಸಹಕಾರ ಸಂಘಗಳಲ್ಲೂ ಕನಿಷ್ಠ 5-10 ಇಂತಹ ಅರ್ಜಿಗಳು ಬಾಕಿ ಉಳಿದಿವೆ. ಸಾಲ ಮಂಜೂರುಗೊಂಡ ಬಳಿಕ ಅರ್ಜಿಗಳು ತಿಂಗಳುಗಟ್ಟಲೆ ಬಾಕಿಯಾಗುವುದರಿಂದ ಕೃಷಿ ಚಟುವಟಿಕೆ ಕುಂಠಿತ ವಾಗುತ್ತಿವೆ.
ಈ ಮೊದಲು ಕೃಷಿ ಅಭಿವೃದ್ಧಿ ಸಾಲ ಪಡೆಯಲು ರೈತರು ಘೊಷಣಾ ಪ್ರಮಾಣಪತ್ರವನ್ನು ಉಪನೋಂದಣಾಧಿಕಾರಿಗಳ ಕಚೇರಿಗೆ ಖುದ್ದು ಸಲ್ಲಿಸಿ ನೋಂದಣಿ ಮಾಡಿಸಬೇಕಿತ್ತು. ಈ ಸೇವೆ ಸರಳಗೊಳಿಸುವ ಉದ್ದೇಶದಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ತಂತ್ರಾಂಶ ಮತ್ತು ರೈತರ ಸಾಲ ಪ್ರಕ್ರಿಯೆ ನಡೆಸುವ ಫೂ›ಟ್ಸ್ (ಫಾರ್ಮರ್ ರಿಜಿಸ್ಟ್ರೇಶನ್ ಆಂಡ್ ಯುನಿಫೈಡ್ ಬೆನಿಫಿಶಿಯರಿ ಇನ್ಫಾಮೇಶನ್ ಸಿಸ್ಟಮ್ ತಂತ್ರಾಂಶ ಸಂಯೋಜನೆಗೊಳಿಸಲಾಗಿತ್ತು. ಸಹಕಾರ ಸಂಘಗಳು ರೈತರ ಸಾಲ ಮಂಜೂರು ಮಾಡಿದ ಬಳಿಕ ಡಿಜಿಟಲ್ ಸಹಿಯುಳ್ಳ ಘೊಷಣಾ ಪತ್ರವನ್ನು ಫೂ›ಟ್ಸ್ ತಂತ್ರಾಂಶದ ಮೂಲಕ ಉಪನೋಂದಣಿ ಕಚೇರಿಯ ಕಾವೇರಿ ತಂತ್ರಾಂಶಕ್ಕೆ ಫೈಲಿಂಗ್ ಮಾಡಬೇಕು. ಉಪನೋಂದಣಾಧಿಕಾರಿಗಳು ಇದನ್ನು ನೋಂದಣಿ ಮಾಡಿ ಪಹಣಿಯಲ್ಲಿ ಸಾಲ ಇರುವುದನ್ನು ನಮೂದು ಮಾಡಬೇಕು. ಸಹಕಾರಿ ಸಂಸ್ಥೆ ಸಿಬ್ಬಂದಿಗೆ ಈ ಕುರಿತು ತರಬೇತಿ ನೀಡದಿರುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಗಿತ್ತು. ಸದ್ಯ ತರಬೇತಿ ನೀಡಲಾಗಿದೆಯಾದರೂ, ಆನ್ಲೈನ್ ತಂತ್ರಾಂಶದ ಸಮಸ್ಯೆಯಿಂದಾಗಿ ಆನ್ಲೈನ್ನಲ್ಲಿ ನೋಂದಣಿ ಮಾಡುವ ಪ್ರಕ್ರಿಯೆ ಮಾಡಲು ಆಗುತ್ತಿಲ್ಲ.
ಇನ್ನೊಂದೆಡೆ ಹಿಂದಿನಂತೆ ನೇರವಾಗಿ ನೋಂದಣಾಧಿಕಾರಿ ಕಚೇರಿಗೆ ಸಲ್ಲಿಸಿ ನೋಂದಣಿ ಮಾಡಿಸುವ ಪ್ರಕ್ರಿಯೆಯೂ ಸಿಬ್ಬಂದಿ ಕೊರತೆ ನೆಪದಲ್ಲಿ ವಿಳಂಬವಾಗುತ್ತಿದೆ. ಆದರೆ ಕಳೆದೆರಡು ತಿಂಗಳಿಂದ ಈ ಪ್ರಕ್ರಿಯೆ ನಡೆಯದೆ ಸಾಲ ರೈತರ ಕೈಸೇರುತ್ತಿಲ್ಲ. ಸಹಕಾರಿ ಸಂಘಗಳು ಈ ಕುರಿತು ಸರ್ಕಾರದತ್ತ ಬೆಟ್ಟು ಮಾಡಿ ತೋರಿಸುತ್ತಿವೆ. ಹಳೇ ಪದ್ಧತಿಯನ್ನೇ ಮುಂದುವರಿಸಲು ಆದೇಶವಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರಾದರೂ, ಈ ಬಗ್ಗೆ ಸಹಕಾರಿ ಸಂಘಗಳಿಗೆ ಯಾವುದೇ ಮಾಹಿತಿ ಇಲ್ಲ.
ಸ್ವಂತ ನಿಧಿ ಇದ್ದಲ್ಲಿ ಸಮಸ್ಯೆ ಇಲ್ಲ: ಸ್ವಂತ ನಿಧಿ ಇರುವ ಸಹಕಾರ ಸಂಘಗಳಲ್ಲಿ ಈ ಸಮಸ್ಯೆ ಇಲ್ಲ. ಗ್ರಾಮ ಲೆಕ್ಕಾಧಿಕಾರಿಯಿಂದ ರೈತರು ಬೆಳೆಯುವ ಬೆಳೆ ಕುರಿತಂತೆ ಪತ್ರ ತೆಗೆದುಕೊಂಡು ಅದರ ಆಧಾರದಲ್ಲಿ ಸಾಲ ವಿತರಿಸಲಾಗುತ್ತಿದೆ. ಆದರೆ ಹೆಚ್ಚಿನ ಸಹಕಾರ ಸಂಘಗಳು ಡಿಸಿಸಿ ಬ್ಯಾಂಕ್ನಿಂದ ಸಾಲ ಪಡೆದು ಅದನ್ನು ರೈತರಿಗೆ ವಿತರಿಸುತ್ತವೆ. ಡಿಸಿಸಿ ಬ್ಯಾಂಕ್ಗಳಲ್ಲಿ ನಮೂನೆ-3 ನೊಂದಣಿಯಾಗದೆ ಸಾಲ ದೊರೆಯುವುದಿಲ್ಲ.
ಮಾರ್ಚ್ವರೆಗೆ ಹಿಂದಿನಂತೆಯೇ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿಯೇ ನಮೂನೆ-3 ಸಲ್ಲಿಸಿ ನೋಂದಣಿ ಮಾಡಿಸಲು ಅವಕಾಶ ಕೊಡುತ್ತೇವೆ ಎಂದು ಸರ್ಕಾರ ಹೇಳಿತ್ತು. ಆದರೆ ಈ ಕುರಿತು ಸುತ್ತೋಲೆ ನಮಗೆ ಇನ್ನೂ ಬಂದಿಲ್ಲ ಎನ್ನುತ್ತಾರೆ ಉಪನೋಂದಣಾಧಿಕಾರಿಗಳು. ಇದರಿಂದ ತಳಮಟ್ಟದಲ್ಲಿ ರೈತರು ಸಮಸ್ಯೆ ಅನುಭವಿಸುವಂತಾಗಿದೆ. | ಹೆಸರು ಹೇಳಲು ಇಚ್ಛಿಸಿದ ಸಹಕಾರ ಸಂಘವೊಂದರ ಸಿಇಒ ಸರ್ಕಾರ ಒಳ್ಳೆಯ ಉದ್ದೇಶದಿಂದ ಯೋಜನೆ ಜಾರಿಗೆ ತಂದಿದೆ. ಕೆಲವರು ಕೃಷಿ ಮಾಡದ ಜಮೀನಿಗೂ ಕೃಷಿ ಅಭಿವೃದ್ಧಿ ಹೆಸರಿನಲ್ಲಿ ಸಾಲ ಪಡೆಯುತ್ತಿದ್ದರು. ಸದ್ಯ ಹಿಂದಿನಂತೆ ಸಬ್ರಿಜಿಸ್ಟ್ರಾರ್ ಕಚೇರಿಗೆ ತೆರಳಿ ಅಲ್ಲಿ ನೋಂದಣಿ ಮಾಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಸಿಬ್ಬಂದಿ ಕೊರತೆಯಿಂದ ವಿಳಂಬವಾಗುತ್ತಿದೆ. ಮಾರ್ಚ್ ವೇಳೆಗೆ ಎಲ್ಲ ಸರಿಯಾಗುವ ನಿರೀಕ್ಷೆಯಿದೆ. | ಪ್ರವೀಣ್ ಬಿ. ನಾಯಕ್ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ, ದಕ್ಷಿಣ ಕನ್ನಡ ತಂತ್ರಾಂಶದಲ್ಲಿರುವ ಗೊಂದಲ ನಿವಾರಿಸಲು ಒಂದು ಹಂತದ ತರಬೇತಿ ನೀಡಲಾಗುತ್ತಿದೆ. ಸಹಕಾರ ಇಲಾಖೆ ಕಡೆಯಿಂದ ಯಾವುದೇ ಸಮಸ್ಯೆ ಇಲ್ಲ. ಮಾ.8ರವರೆಗೆ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ಮ್ಯಾನುವಲ್ ಆಗಿ ನೋಂದಣಿ ಪ್ರಕ್ರಿಯೆ ನಡೆಸುವಂತೆ ಎಲ್ಲ ಜಿಲ್ಲೆಗಳಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ. ಈ ಬಗ್ಗೆ ಇಲಾಖೆ ಮುಖ್ಯಸ್ಥರ ಜತೆ ಮತ್ತೊಮ್ಮೆ ರ್ಚಚಿಸಲಾಗುವುದು. | ಎ.ಸಿ. ದಿವಾಕರ್ ಸಹಕಾರ ಸಂಘಗಳ ಅಪರ ನಿಬಂಧಕರು, ಬೆಂಗಳೂರು
ಸಮೀಕ್ಷೆ ಮಾಡದಿದ್ದರೂ ಇಲ್ಲ!: ಬೆಳೆ ಸಮೀಕ್ಷೆ ಮಾಡದಿದ್ದರೆ ರೈತರ ಮಾಹಿತಿ ಫ್ರೂಟ್ಸ್ ಐಡಿಯಲ್ಲಿ ಸ್ವೀಕೃತವಾಗುವುದಿಲ್ಲ. ಇದರಿಂದಾಗಿ ಸಾಲ ಪಡೆಯಲು ಸಾಧ್ಯವಾಗುವುದಿಲ್ಲ. ಒಬ್ಬ ರೈತನಲ್ಲಿ 4 ಆರ್ಟಿಸಿ ಇದ್ದರೆ, ಎಲ್ಲ ಆರ್ಟಿಸಿಯಲ್ಲೂ ಬೆಳೆ ಸಮೀಕ್ಷೆ ನಡೆಸಿ, ಯಾವ ಆರ್ಟಿಸಿಯಲ್ಲಿ ಏನು ಬೆಳೆ ಇದೆ ಎಂದು ನಮೂದಿಸಬೇಕು. ಒಂದು ಆರ್ಟಿಸಿ ಬಾಕಿ ಇದ್ದರೂ, ಸಾಲ ಪಡೆಯುವಲ್ಲಿ ಸಮಸ್ಯೆಯಾಗುತ್ತದೆ.