ಜಿಲ್ಲೆ

ಕೃಷಿಕರ ಆರ್ಥಿಕ ಭದ್ರತೆಗೆ ಸರ್ಕಾರ ಮನ್ನಣೆ: ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿಕೆ

ಹರ್ಷ ನ.ಪುರೋಹಿತ

ಹೊಸದುರ್ಗ: ರಾಜ್ಯ ಸರ್ಕಾರವು ಕೃಷಿ ಕ್ಷೇತ್ರ ಬಲವರ್ಧನೆಗೆ ಹೆಚ್ಚು ಮನ್ನಣೆ ನೀಡುವ ಉದ್ದೇಶ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ಮೂಲಕ ರೈತರಿಗೆ ಸಾಲ ಸೌಲಭ್ಯ ಒದಗಿಸುತ್ತಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.

ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ಶನಿವಾರ ಜಿಲ್ಲಾ ಸಹಕಾರ ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಕೃಷಿಕರಿಗೆ ಹೆಚ್ಚು ಅನುಕೂಲ ಕಲ್ಪಿಸುವ ಉದ್ದೇಶದಿಂದ ಹಳ್ಳಿಗಳಲ್ಲಿ ಬ್ಯಾಂಕ್ ಶಾಖೆಗಳನ್ನು ತೆರೆದು ರೈತರ ಮನೆ ಬಾಗಿಲಿಗೆ ಸೌಲಭ್ಯ ನೀಡುವುದೇ ಮುಖ್ಯ ಧ್ಯೇಯವಾಗಿದೆ ಎಂದರು.

ಮಲ್ಲಪ್ಪನಹಳ್ಳಿಯಲ್ಲಿ ಆರಂಭಗೊಂಡಿರುವ ಬ್ಯಾಂಕ್ ಶಾಖೆಯಲ್ಲಿ ಪ್ರತಿಯೊಂದು ರೈತ ಕುಟುಂಬವು ಖಾತೆ ತೆರೆಯುವ ಮೂಲಕ ಬ್ಯಾಂಕಿನ ವ್ಯವಹಾರವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಸಹಕಾರ ಬ್ಯಾಂಕ್ ಕೂಡ ಇನ್ನಿತರ ವಾಣಿಜ್ಯ ಬ್ಯಾಂಕ್‌ಗಳು ನೀಡುವ ಎಲ್ಲ ಸೇವೆಗಳನ್ನು ಜನರಿಗೆ ಒದಗಿಸುತ್ತದೆ. ಕೃಷಿಕರ ಆರ್ಥಿಕ ವ್ಯವಹಾರವನ್ನು ಉತ್ತಮವಾಗಿ ನಿರ್ವಹಿಸಲು ಡಿಸಿಸಿ ಬ್ಯಾಂಕ್ ಸಹಕಾರಿಯಾಗಿದೆ. ರೈತರು ಬ್ಯಾಂಕಿನಿಂದ ಪಡೆದ ಸಾಲವನ್ನ್ನು ಮೂಲ ಉದ್ದೇಶಕ್ಕೆ ಬಳಸುವ ಜತೆಗೆ ಅವಧಿಯೊಳಗೆ ಮರುಪಾವತಿ ಮಾಡುವ ಮೂಲಕ ಉಳಿದ ಕೃಷಿಕರಿಗೆ ಆರ್ಥಿಕ ಸಹಕಾರ ನೀಡಲು ಅವಕಾಶ ಕಲ್ಪಿಸಬೇಕು ಎಂದರು.

ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ ಉಲ್ಲಾ ಶರೀಫ್ ಮಾತನಾಡಿ, 1955 ರಲ್ಲಿ ಆರಂಭಗೊಂಡ ಚಿತ್ರದುರ್ಗ ಜಿಲ್ಲಾ ಸಹಕಾರ ಬ್ಯಾಂಕ್ ಜಿಲ್ಲೆಯಲ್ಲಿ 22 ಶಾಖೆಗಳನ್ನು ಹೊಂದಿದೆ. ಈ ವರ್ಷದಲ್ಲಿ ಜಿಲ್ಲೆಯಲ್ಲಿರುವ 158 ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 57921 ರೈತರಿಗೆ 510 ಕೋಟಿ ರೂ. ಬೆಳೆ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ನೀಡಿದೆ ಎಂದರು.

ಉಪಾಧ್ಯಕ್ಷ ಮಂಜುನಾಥ್, ಗ್ರಾಪಂ ಅಧ್ಯಕ್ಷೆ ಪುಷ್ಪಾ, ಪಿಎಸಿಸಿ ಅಧ್ಯಕ್ಷರಾದ ವೀರಭದ್ರಯ್ಯ, ಶಿವಕುಮಾರ್, ಮೋಹನ್, ನವೀನ್, ಮಹೇಶ್ವರಪ್ಪ, ವ್ಯವಸ್ಥಾಪಕಿ ನಿರ್ಮಲಾ ಇತರರಿದ್ದರು.