ಗುರುಪುರ : ವಾಮಂಜೂರು ತಿರುವೈಲು ಅಮೃತೇಶ್ವರ ದೇವಸ್ಥಾನದ ಎದುರು ಮಂಗಳವಾರ ತಿರುವೈಲು ದ.ಕ.ಜಿ.ಪಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೂಡುಶೆಡ್ಡೆಯ ಶಾರದಾ ಶುಭೋದಯ ಆಂಗ್ಲ ಮಾಧ್ಯಮ ಶಾಲೆ ಮತ್ತು ತಿರುವೈಲಿನ ಶ್ರೀ ಅಮೃತೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ದೇವಸ್ಥಾನದ ಎದುರು ಗದ್ದೆಯಲ್ಲಿ ಸಂಘಟಕ ರಾಜ್‌ಕುಮಾರ್ ಶೆಟ್ಟಿ ತಿರುವೈಲುಗುತ್ತು ಅವರ ಮುಂದಾಳತ್ವದಲ್ಲಿ ಭತ್ತದ ನೇಜಿ ನಾಟಿ ಕಾರ್ಯಕ್ರಮ ನಡೆಯಿತು.
ಈ ಹಿಂದೆ ವಾಮಂಜೂರಿನ ತಿರುವೈಲು ದೇವಸ್ಥಾನದಲ್ಲಿ ನಡೆದಿದ್ದ ಕೃಷಿ ಮೇಳದಲ್ಲಿ ಸಂಘಟಕರು ಪ್ರಕಟಿಸಿರುವಂತೆ, ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಓಂಪ್ರಕಾಶ್ ಶೆಟ್ಟಿ ಅವರ ಸಹಕಾರದಲ್ಲಿ ದೇವಸ್ಥಾನದ ಗದ್ದೆಯಲ್ಲಿ ‘ನೇಜಿ ನಾಟಿ’ ಕಾರ್ಯಕ್ರಮ ನಡೆಯಿತು. ಮೂರೂ ಶಾಲೆಗಳಿಂದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಅತ್ಯುತ್ಸಾಹದಿಂದ ನೇಜಿ ನಾಟಿ ಮಾಡಿದರು. ಕೃಷಿ ಕಾರ್ಮಿಕ ರಘು ಆರಿಗ ಮತ್ತು ಕೃಷಿ ಕೂಲಿ ಮಹಿಳೆಯರು ಶಾಲಾ ಮಕ್ಕಳಿಗೆ ನೇಜಿ ನೆಡುವ ರೀತಿ ಮನದಟ್ಟು ಮಾಡಿದರು. ತಿರುವೈಲು ಶಾಲೆಯ ಶಿಕ್ಷಕಿಯರಾದ ವಿದ್ಯಾ, ದೀಪಿಕಾ, ಶುಭಾ ಮೂಡುಶೆಡ್ಡೆ ಶಾಲೆಯ ಶೋಭಾ, ನಿವೇದಿತಾ, ರಶ್ಮಿ, ಶಿಕ್ಷಕ ಲೋಹಿತ್ ಮತ್ತು ಅಮೃತೇಶ್ವರ ಶಾಲೆಯ ಪೂರ್ಣಿಮಾ, ವಿನೋದಾ ಸಹಕರಿಸಿದರು.
ಮನಪಾ ತಿರುವೈಲ್ ವಾರ್ಡ್‌ನ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್, ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಓಂಪ್ರಕಾಶ್ ಶೆಟ್ಟಿ, ಉಪಾಧ್ಯಕ್ಷ ಶೀನ ಕೋಟ್ಯಾನ್, ನಿರ್ದೇಶಕರಾದ ಸಚಿನ್ ಅಡಪ, ಜಿ. ಎಂ. ಉದಯ ಭಟ್, ಶ್ರೀನಿವಾಸ ಸುವರ್ಣ ಮಲ್ಲೂರು, ಸಂಘದ ಮಾಜಿ ಅಧ್ಯಕ್ಷ ವಿನೋದ್ ಮಾಡ, ಶ್ರೀಕರ ವಿ. ಶೆಟ್ಟಿ, ಶಾರದಾ ವಿದ್ಯಾಲಯದ ಅಧ್ಯಕ್ಷ ಎಂ. ಬಿ. ಪುರಾಣಿಕ್ ಅವರ ಪುತ್ರ ಶಮೀರ ಪುರಾಣಿಕ್, ದೇವಸ್ಥಾನದ ಅರ್ಚಕ ಟಿ. ಬಾಲಕೃಷ್ಣ ಭಟ್, ಉದ್ಯಮಿ ರಘು ಸಾಲ್ಯಾನ್, ಪ್ರಶಾಂತ್ ಶೆಟ್ಟಿ ವಾಮಂಜೂರು, ಅಶೋಕ್ ರೈ ತಿರುವೈಲು, ಶಾರದಾ ಶುಭೋದಯ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಶ್ಯಾಮಲಾ ವೈ, ಉಪಪ್ರಾಂಶುಪಾಲ ಗೋಪಾಲಕೃಷ್ಣ ಭಟ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
ದೇವಸ್ಥಾನದ ಎದುರು ಶಾಲಾ ಮಕ್ಕಳಿಗೆ ಆಯೋಜಿಸಲಾದ ಕೃಷಿ ಪ್ರಾತ್ಯಕ್ಷಿಕೆಯಲ್ಲಿ ಭತ್ತದ ಬೀಜದಿಂದ ನೇಜಿ ಆಗುವವರೆಗಿನ ಮಾಹಿತಿ ನೀಡಿದ ಕಾರ್ಯಕ್ರಮ ಸಂಘಟಕ ರಾಜ್‌ಕುಮಾರ್ ಶೆಟ್ಟಿ ತಿರುವೈಲುಗುತ್ತು, ಭತ್ತ ಕಟಾವಾದ ಬಳಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಲಾ ಮಕ್ಕಳಿಗಾಗಿ ನೇಜಿ ನಾಟಿಯ ಬಗ್ಗೆ ಲಿಖಿತ ಸ್ಪರ್ಧೆ ನಡೆಸಲಾಗುವುದು, ಸ್ಪರ್ಧೆಯಲ್ಲಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಬಹುಮಾನ ನೀಡಲಾಗುವುದು, ಎಲ್ಲಾ ಮಕ್ಕಳು ನೇಜಿ ನೆಡುವ ಕೆಲಸದ ಸೂಕ್ಷ್ಮಗಳನ್ನು ನೆನಪಿಟ್ಟುಕೊಳ್ಳುವಂತೆ ಸೂಚಿಸಿದ್ದರು.