ಜಿಲ್ಲೆ

ಮೇ 7ರಂದು ಕೆ.ಗೌಡಗೆರೆಯಲ್ಲಿ ಜಾಗೃತಿ ಅಭಿಯಾನ: ಟ್ರಸ್ಟ್‌ನ ಅಧ್ಯಕ್ಷ ಜೋಗಿಗೌಡ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಸಮಗ್ರ ಸಾವಯವ ಸುಸ್ಥರ ಕೃಷಿ ಟ್ರಸ್ಟ್‌ನಿಂದ ತಾಲೂಕಿನ ಕೆ.ಗೌಡಗೆರೆ ಗ್ರಾಮದಲ್ಲಿ ಮೇ 7ರಂದು ಬೆಳಗ್ಗೆ 10.30ಕ್ಕೆ ಕೃಷಿ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಜೋಗಿಗೌಡ ತಿಳಿಸಿದರು.

ಅಭಿಯಾನದಲ್ಲಿ ಬೆಳೆಗೆ ಸರಿಯಾದ ಬೆಲೆ, ಪರಿಸರ ವೈಫಲ್ಯ, ಇಳುವರಿ ಕುಂಠಿತ ಸೇರಿದಂತೆ ರೈತರು ಎದುರಿಸುವ ಸಮಸ್ಯೆಗಳಿಗೆ ಕಾರಣ ಹಾಗೂ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೃಷಿ ಮಾರುಕಟ್ಟೆ ವ್ಯವಸ್ಥೆ, ಸಮಗ್ರಕೃಷಿ, ಸರ್ಕಾರದ ಸೌಲಭ್ಯಗಳ ಬಳಕೆ ಸೇರಿದಂತೆ ಹಲವು ವಿಚಾರಗಳನ್ನು ರೈತರೊಂದಿಗೆ ಚರ್ಚಿಸುವುದು. ಹಂತ ಹಂತವಾಗಿ ಕೃಷಿಯ ಬಗ್ಗೆ ಜ್ಞಾನ, ಸಮಗ್ರ ಕೃಷಿ ಸಂಬಂಧಿತ ಮಾಹಿತಿ ಹಂಚಿಕೊಳ್ಳುವುದರೊಂದಿಗೆ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೇಸಿಗೆ ಶಿಬಿರ ಪ್ರೋತ್ಸಾಹಿಸಿದ ಜಿ.ಪಂ ಸಿಇಒ ಕೆ.ಆರ್.ನಂದಿನಿ ಅವರನ್ನು ಅಭಿನಂದಿಸಲಾಗುವುದು ಎಂದು ಹೇಳಿದರು.

ಈ ಅಭಿಯಾನ ಕಾರ್ಯಕ್ರಮ ಕೆರಗೋಡು ಹೋಬಳಿ ರೈತರಿಗೆ ಮಾತ್ರ ಸೀಮಿತವಾಗಿದ್ದು, 50 ರಿಂದ 100 ರೈತರು ಭಾಗವಹಿಸುವ ನಿರೀಕ್ಷೆಯಿದೆ. ಮೈಷುಗರ್‌ನಲ್ಲಿ ಕಬ್ಬು ನುರಿಸುವ ಕಾರ್ಯವನ್ನು ಜೂನ್ ಅಂತ್ಯದಿಂದ ಮಾಡುವುದಾಗಿ ಹೇಳಿದ್ದು, ಮೇ ತಿಂಗಳ ಮಧ್ಯದಿಂದಲೇ ಕಬ್ಬು ನುರಿಯಲು ಆರಂಭಿಸಬೇಕು ಎಂದು ಮನವಿ ಮಾಡಿದರು.

ಟ್ರಸ್ಟ್ ಸದಸ್ಯರಾದ ತಮ್ಮಣ್ಣ ಶೆಟ್ಟಿ, ಕಾಂತರಾಜು, ರಾಜು ಇದ್ದರು.