ಕೊಪ್ಪಳದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಿರಿ

ಕೊಪ್ಪಳ: ಸರ್ಕಾರ ಕರೊನಾ ಸೋಂಕಿನ ಕಾರಣ ಮುಂದಿಟ್ಟುಕೊಂಡು ರೈತರಿಗೆ ಮಾರಕವಾಗುವ ತಿದ್ದುಪಡಿ ಕಾಯ್ದೆಗಳನ್ನು ಜಾರಿ ಮಾಡಿದ್ದು, ಕೂಡಲೇ ಅವುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಲಾಕ್‌ಡೌನ್ ಜಾರಿ ಮಾಡಿ ಜನರ ಓಡಾಟ ನಿಷೇಧಿಸಲಾಯಿತು. ಅಲ್ಲದೆ, ರೈತ ಮುಖಂಡರು, ಚಿಂತಕರೊಡನೆ ಚರ್ಚಿಸದೆ ಎಪಿಎಂಸಿ, ಭೂಸುಧಾರಣೆ, ವಿದ್ಯುತ್ ಕಾಯ್ದೆಗಳಿಗೆ ತಿದ್ದುಪಡಿ ಮಾಡಲಾಗಿದೆ. ಅಲ್ಲದೆ, ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿ ರೈತರಿಗೆ ದ್ರೋಹ ಮಾಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದುಡವ ವರ್ಗಕ್ಕೆ ಅನ್ಯಾಯ ಎಸಗುತ್ತಿವೆ. ರೈತರನ್ನು ಶಾಶ್ವತವಾಗಿ ಕೃಷಿಯಿಂದ ಹೊರಗುಳಿಸುವ ಉದ್ದೇಶದಿಂದ ಕಾಯ್ದೆಗಳಿಗೆ ತಿದ್ದುಪಡಿ ಮಾಡಲಾಗಿದೆ ಎಂದು ಆರೋಪಿಸಿದರು.

ಕೇಂದ್ರದ ದಾಸ್ತಾನು ಸಂಗ್ರಹಿಸುವ ಸ್ವತಂತ್ರ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಗುತ್ತಿಗೆ ಕೃಷಿಕಾಯ್ದೆ ಮತ್ತು ಎಪಿಎಂಸಿ ಬೈಪಾಸ್ ಕಾಯ್ದೆಗಳನ್ನು ಪಂಜಾಬ್ ಜಾರಿಗೊಳಿಸಿಲ್ಲ. ಕೃಷಿ ಉತ್ಪನ್ನಗಳಿಗೆ ಘೋಷಿಸಿದ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಬೆಳೆಗಳ ಮಾರಾಟ ಹಾಗೂ ಖರೀದಿ ಮಾಡುವುದು ಶಿಕ್ಷಾರ್ಹ ಅಪರಾಧವೆಂದು ಕಾನೂನು ಮಾಡಿದೆ. ಅದರಂತೆ ರಾಜ್ಯವೂ ಕಾನೂನು ರೂಪಿಸಬೇಕು. ಕೇಂದ್ರದ ತಿದ್ದುಪಡಿ ಕಾಯ್ದೆಗಳನ್ನು ರಾಜ್ಯದಲ್ಲಿ ಜಾರಿ ಮಾಡಬಾರದು. ಕೇರಳ ಸರ್ಕಾರ ತರಕಾರಿ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದ್ದು, ರಾಜ್ಯ ಸರ್ಕಾರವೂ ತರಕಾರಿಗಳಿಗೆ ಬೆಂಬಲ ಬೆಲೆ ಘೋಷಿಸಬೇಕೆಂದು ಒತ್ತಾಯಿಸಿದರು. ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಜೀರ್‌ಸಾಬ್ ಮೂಲಿಮನಿ, ದೊಡ್ಡನಗೌಡ ಪಾಟೀಲ್, ಜಿ.ನಾಗರಾಜ, ಬಸವರಾಜ ಮರಕುಂಬಿ, ಹನುಮಂತಪ್ಪ ಹೊಳೆಯಾಚೆ, ಇಸ್ಮಾಯಿಲ್ ನಾಲಬಂದ ಸೇರಿ ಇತರರಿದ್ದರು.