ಜಿಲ್ಲೆ

ರೈತರಿಗೆ ತಲೆ ನೋವಾದ ಕೇಬಲ್ ಸಂರಕ್ಷಣೆ

Chikkaballapur

ಚಿಕ್ಕಬಳ್ಳಾಪುರ: ಜಿಲ್ಲೆಯ ರೈತರಿಗೆ ಬೆಳೆ ಉಳಿಸಿಕೊಳ್ಳುವುದರ ಜತೆಗೆ ಪಂಪ್ ಮೋಟಾರ್ ಮತ್ತು ಕೇಬಲ್ ವೈರ್ ಸಂರಕ್ಷಣೆಯು ದೊಡ್ಡ ತಲೆನೋವಾಗಿದೆ.

ಹೌದು! ರಾತ್ರೋರಾತ್ರಿ ಕಿಡಿಗೇಡಿಗಳು ಕೇಬಲ್ ವೈರ್‌ಗಳನ್ನು ಕದ್ದು ಪರಾರಿಯಾಗುತ್ತಿದ್ದಾರೆ. ಇದರಿಂದ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಜತೆಗೆ ಕಿತ್ತು ಹೋಗಿರುವುದನ್ನು ಸರಿಪಡಿಸಿ, ಹೊಸ ಉಪಕರಣ ಖರೀದಿಗೆ ಆರ್ಥಿಕ ಹೊರೆ ಬೀಳುತ್ತಿದೆ.

ಜಿಲ್ಲೆಯು ಹೂವು, ಹಣ್ಣು, ತರಕಾರಿ ಬೆಳೆಯುವುದರಲ್ಲಿ ಮುಂಚೂಣಿಯಲ್ಲಿದೆ. ಇದರ ನಡುವೆ ಸಾವಿರ ಅಡಿ ಕೊರೆಸಿದರೂ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಒಂದು ವೇಳೆ ಲಭ್ಯವಾದರೂ ನಿರಂತರವಾಗಿ ಮೋಟಾರ್‌ಗಳು ಸುಟ್ಟು ಹೋಗುವಿಕೆ, ಕೇಬಲ್ ವೈರುಗಳ ಕಳ್ಳತನ ತಲೆನೋವಾಗಿದೆ.

ಅಲ್ಲಲ್ಲಿ ಕಳ್ಳತನ ಪ್ರಕರಣಗಳು: ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್ ಬಳಿ ಇರುವ ಮೆಗಾ ಡೇರಿಯಲ್ಲಿ ಶುಕ್ರವಾರ ರಾತ್ರಿ 20 ಮೀಟರ್ ಉದ್ದದ ಕೇಬಲ್ ವೈರ್ ಕಳವಾಗಿದೆ. ಡೇರಿಗೆ ನೀರು ಪೂರೈಸಲು ದೊಡ್ಡಮರಳಿ ಕೆರೆಯ ಉತ್ತರದ ಕಡೆ ಕೊರೆಸಿರುವ ಕೊಳವೆ ಬಾವಿಗೆ ಅಳವಡಿಸಿದ್ದ ಕೇಬಲ್ ಇದಾಗಿದೆ ಎಂದು ಡೇರಿಯ ಪ್ರಧಾನ ವ್ಯವಸ್ಥಾಪಕಿ ಜಿ.ಬಿ. ವಿಜಯಲಕ್ಷ್ಮೀ ರೈ ನಂದಿ ಗಿರಿಧಾಮ ಠಾಣೆಗೆ ದೂರು ನೀಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಕಾಡದಿಬ್ಬೂರಿನ ಪಿ.ವಿಜಯ್ ಕೃಷ್ಣ ಎಂಬುವವರ ಜಮೀನಿನಲ್ಲಿ ಕೊಳವೆ ಬಾವಿಯಿಂದ ಹೊರಕ್ಕೆ ತೆಗೆದಿದ್ದ 700 ಅಡಿಗಳ ವೈರನ್ನು ಯಾರೋ ಕಳವು ವಾಡಿಕೊಂಡು ಹೋಗಿದ್ದಾರೆ. ವಾಹನಕ್ಕೆ ಕಟ್ಟಿ ಎಳೆದುಕೊಂಡು ಹೋಗಿರುವ ಗುರುತುಗಳು ಪತ್ತೆಯಾಗಿವೆ. ಗ್ರಾವಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಂತಾಮಣಿ ತಾಲೂಕಿನ ಚಿಕ್ಕಕಟ್ಟಿಗೇನಹಳ್ಳಿಯ ವೆಂಕಟರೆಡ್ಡಿ ಅವರು ತೋಟದಲ್ಲಿ ಮೆಣಸಿನ ಗಿಡಗಳಿಗೆ ನೀರು ಹರಿಸಲು ಸಂಪ್‌ನಿಂದ 10 ಸಾವಿರ ರೂಪಾಯಿ ಮೌಲ್ಯದ ಮೋಟಾರ್ ಮತ್ತು ಪಂಪ್, ಕೇಬಲ್ ಅಳವಡಿಸಿದ್ದರು. ಇದನ್ನು ಕಳ್ಳರು ಕದ್ದು ಪರಾರಿಯಾಗಿದ್ದು ಗ್ರಾವಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ನಡುವೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೇಬಲ್ ವೈರ್ ಕಳ್ಳತನಗಳು ನಡೆದಿದ್ದು, ಹಲವರು ಅನವಶ್ಯಕ ಅಲೆದಾಟ, ದೂರಿನ ವಿಚಾರಣೆ ಸೇರಿ ನಾನಾ ಲೆಕ್ಕಾಚಾರದಲ್ಲಿ ಠಾಣೆಯ ಮೆಟ್ಟಿಲೇರಿಲ್ಲ. ಹೊಸದಾಗಿ ವೈರು ಅಳವಡಿಸಿಕೊಂಡು ಕಾವಲುಗಾರರನ್ನು ನಿಯೋಜನೆಯ ಮೂಲಕ ಸಂರಕ್ಷಣೆಗೆ ಮುಂದಾಗಿದ್ದಾರೆ.

ಆಂಧ್ರ ಕಿಡಿಗೇಡಿಗಳ ಕೃತ್ಯ? ಪಂಪ್ ಮೋಟಾರ್ ಮತ್ತು ಕೇಬಲ್ ವೈರ್‌ಗಳ ಕಳ್ಳತನ ಪ್ರಕರಣಗಳು ಆಗಾಗ ನಿರ್ದಿಷ್ಟ ವಾರ್ಗದಲ್ಲಿ ವರದಿಯಾಗುತ್ತಿವೆ. ಒಂದೆಡೆ ಆಂಧ್ರದ ಕಿಡಿಗೇಡಿಗಳು ಕಳ್ಳತನ ವಾಡಿ ಪರಾರಿಯಾಗುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ ಸ್ಥಳೀಯವಾಗಿ ಕೆಲವರು ಕಳವು ವಾಡಿ ಸುಮ್ಮನಾಗುತ್ತಿದ್ದಾರೆ. ಇಂತಹ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿಲ್ಲ. ಒಂದೇ ಬಾರಿಗೆ ಹಲವೆಡೆ ಕಳ್ಳತನವಾದರೆ ದೊಡ್ಡ ದಂಧೆಕೋರರ ಕೈವಾಡವಿರುವುದಕ್ಕೆ ಪುಷ್ಟಿ ನೀಡುತ್ತದೆ.

ಹಿಂದೆ ಜಮೀನಿನಲ್ಲಿ ಎರಡ್ಮೂರು ಬಾರಿ ಕೇಬಲ್ ವೈರ್‌ಗಳ ಕಳ್ಳತನವಾಗಿದೆ. ಇದರ ಸಂರಕ್ಷಣೆಗೆ ಕಾವಲುಗಾರನನ್ನು ನಿಯೋಜಿಸಲಾಗಿದೆ. ಶೆಡ್ ಬಳಿ ಸಿಸಿ ಕ್ಯಾಮೆರಾ ಅಳವಡಿಸುವ ಚಿಂತನೆ ಇದೆ. ಮುನಿರಾಜು, ದಾಳಿಂಬೆ ಬೆಳೆಗಾರ, ಚಿಕ್ಕಬಳ್ಳಾಪುರ