ಜಿಲ್ಲೆ

ಕೃಷಿ ಪ್ರವಾಸೋದ್ಯಮದಲ್ಲಿ ಅವಕಾಶಗಳ ಆಗರ

ಮಡಿಕೇರಿ
ಪ್ರಾಕೃತಿಕ ಸಂಪತ್ತಿನಿಂದ ಶ್ರೀಮಂತವಾಗಿರುವ ಕೊಡಗು ಈಗಾಗಲೇ ಪ್ರವಾಸಿತಾಣವಾಗಿ ವಿಶ್ವಪ್ರಸಿದ್ಧಿ ಪಡೆದುಕೊಂಡಿದೆ. ದೇಶ ವಿದೇಶದ ಪ್ರವಾಸಿಗರು ಇಲ್ಲಿಯ ಸೌಂದರ್ಯ ಆಸ್ವಾದಿಸಲು ಬರುತ್ತಿದ್ದಾರೆ. ಕಾಫಿ ಪ್ರಮುಖ ಬೆಳೆಯಾಗಿರುವ ಜಿಲ್ಲೆಯಲ್ಲಿ ಹಲವು ರೀತಿಯ ಕೃಷಿ ಚಟುವಟಿಕೆಗಳೂ ನಡೆಯುತ್ತಿರುವುದರಿಂದ, ಕೃಷಿ ಪ್ರವಾಸೋದ್ಯಮಕ್ಕೂ ದೊಡ್ಡ ಮಟ್ಟದ ಅವಕಾಶಗಳಿದೆ. ರಾಜ್ಯ ಸರ್ಕಾರದ ಪೂರಕ ಬಜೆಟ್‌ನಲ್ಲಿ ಇಕೋ ಟೂರಿಸಂಗೆ ಒತ್ತು ಕೊಟ್ಟಿರುವುದು ಕೂಡ ಇದಕ್ಕೆ ಪೂರಕ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೊಡಗಿನಲ್ಲಿ ಪ್ರವಾಸೋದ್ಯಮವನ್ನು ಜಿಲ್ಲೆಯ ಪ್ರಮುಖ ಆರ್ಥಿಕ ಮೂಲವಾಗಿ ಗುರುತಿಸಲಾಗುತ್ತಿದ್ದು ಪ್ರಾಕೃತಿಕ ವಿಕೋಪ ಮತ್ತು ಕೊರೋನಾ ಸಂಕಷ್ಟದ ನಂತರ ಚೇತರಿಕೆಯ ಹಾದಿಯಲ್ಲಿದೆ. ಆದರೆ ಇಲ್ಲಿಯ ಬಹುತೇಕ ಪ್ರವಾಸೋದ್ಯಮ ಚಟುವಟಿಕೆಗಳು ಪರಿಸರಕ್ಕೆ ವಿರುದ್ಧವಾಗಿ ನಡೆಯುತ್ತಿದೆ ಎನ್ನುವ ಆರೋಪಗಳು ಸಾಮಾನ್ಯವಾಗಿದೆ. ೨೦೧೮,೧೯,೨೦ರಲ್ಲಿ ನಡೆದ ಪ್ರಾಕೃತಿಕ ವಿಕೋಪಗಳಿಗೆ ಇಂತಹ ಅನಿಯಂತ್ರಿತ ಪರಿಸರಕ್ಕೆ ಪೂರಕವಲ್ಲದ ಚಟುವಟಿಕೆಗಳೇ ಕಾರಣ ಎನ್ನುವುದು ಪರಿಸರವಾದಿಗಳ ವಾದ.
ಪರಿಸರ ಸ್ನೇಹಿ ಚಟುವಟಿಕೆಗಳಿಗೆ ಒತ್ತು ಕೊಟ್ಟು ಪ್ರವಾಸೋದ್ಯಮ ನಡೆಸುತ್ತಾ ಈ ಮೂಲಕವೂ ಪ್ರವಾಸಿಗರನ್ನು ಸೆಳೆಯಬಹುದು ಎನ್ನುವವರಿಗೆ ಕೃಷಿ ಪ್ರವಾಸೋದ್ಯಮ ಪರ್ಯಾಯ ಮಾರ್ಗವಾಗಿದೆ ಎನ್ನುವ ಸಲಹೆಗಳು ಕೇಳಿಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ರೈತರ ಆದಾಯ ದ್ವಿಗುಣಗೊಳಿಸುವಲ್ಲೂ ಈ ಮಾದರಿಯ ಪ್ರವಾಸೋದ್ಯಮ ಸಹಕಾರಿ ಆಗಬಲ್ಲದು. ಸಮಗ್ರ ಕರ್ನಾಟಕ ಕೃಷಿ ವಾಣಿಜ್ಯ ನೀತಿ ೨೦೨೧ ರಲ್ಲೂ ಈ ಬಗ್ಗೆ ಪ್ರಸ್ತಾಪ ಇದೆ.
ಕಾರ್ಯಾಚರಣೆಯಲ್ಲಿ ಇರುವ ಕೃಷಿ ಪ್ರದೇಶ ಅಥವಾ ಇನ್ಯಾವುದೇ ಕೃಷಿ, ತೋಟಗಾರಿಕೆ ಅಥವಾ ಕೃಷಿ ವಾಣಿಜ್ಯ ಉದ್ದೇಶಿತ ಕಾರ್ಯಾಚರಣೆಗಳನ್ನು ಮಾಹಿತಿ, ಮನರಂಜನೆ, ಶಿಕ್ಷಣಕ್ಕಾಗಿ ಅಥವಾ ಕೃಷಿ ಚಟುವಟಿಕೆ ಅಥವಾ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಳ್ಳಲು ಭೇಟಿ ನೀಡುವ ರಜೆಯ ಕಲ್ಪನೆ.. ಇದು ಕೃಷಿ ಪ್ರವಾಸೋದ್ಯಮದ ಬಗ್ಗೆ ಸರ್ಕಾರದ ವ್ಯಾಖ್ಯಾನ. ಸಮಗ್ರ ಕರ್ನಾಟಕ ಕೃಷಿ ವಾಣಿಜ್ಯ ನೀತಿ ೨೦೨೧ರಲ್ಲಿ ಈ ಬಗ್ಗೆ ವಿವರ ಮಾಹಿತಿ ನೀಡಲಾಗಿದೆ.
ಕೊಡಗಿನಲ್ಲಿ ಪ್ರವಾಸೋದ್ಯಮ ಎಂದರೆ ಹಸಿರು ಹೊದ್ದ ಬೆಟ್ಟ-ಗುಡ್ಡ, ಜಲಪಾತ, ನದಿ-ತೊರೆಯಿಂದ ಆಚೆಗೂ ಯೋಚಿಸುವ ಅವಕಾಶಗಳನ್ನು ಕೃಷಿ ಪ್ರವಾಸೋದ್ಯಮ ಒದಗಿಸಿಕೊಡುತ್ತದೆ. ಈ ಮೂಲಕ ಪರಿಸರ ಸ್ನೇಹಿ ಉದ್ಯಮ ನಡೆಸುವ ದಾರಿಯೂ ಸಿಕ್ಕಂತಾಗುತ್ತದೆ. ಈ ಬಗೆಯ ಪ್ರವಾಸೋದ್ಯಮ ಸದ್ಯದ ಮಟ್ಟಿಗೆ ಕೊಡಗಿನಲ್ಲಿ ಕೇಂದ್ರಿಕೃತವಾಗಿ ನಡೆಯುತ್ತಿಲ್ಲ. ಕೆಲವೊಂದು ರೆಸಾರ್ಟ್, ಹೋಮ್‌ಸ್ಟೇಗಳಲ್ಲಿ ಪ್ಯಾಕೆಜ್‌ನ ಒಂದು ಭಾಗವಾಗಿ ಮಾತ್ರ ಇದನ್ನು ಪರಿಗಣಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ೨೦೨೩-೨೪ನೇ ಸಾಲಿನ ಪೂರಕ ಬಜೆಟ್‌ನಲ್ಲಿ ಕೊಡಗು ಸೇರಿದಂತೆ ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಕಾಫಿ ಬ್ರಾಂಡಿಂಗ್ ಮತ್ತು ಇಕೋ ಟೂರಿಸಂ ಪ್ರಸ್ತಾಪ ಇದೆ. ಇದನ್ನೇ ಸ್ವಲ್ಪ ವಿಸ್ತರಿಸಿದರೆ ಕೃಷಿ ಪ್ರವಾಸೋದ್ಯಮಕ್ಕೂ ನೆರವು ಸಿಕ್ಕಿದಂತಾಗುತ್ತದೆ ಎನ್ನುವುದು ಜಿಲ್ಲೆಯ ಪ್ರವಾಸೋದ್ಯಮಿಗಳ ಅಭಿಪ್ರಾಯ. ಈಗಾಲೇ ಕೊಡಗಿನಲ್ಲಿ ಕಾಫಿ ತೋಟಗಳಲ್ಲಿ ಟ್ರಕ್ಕಿಂಗ್, ಕಾಫಿ ತೋಟಗಳ ದರ್ಶನ ಮತ್ತಿತರ ಚಟುವಟಿಕೆಗಳನ್ನು ಪ್ರವಾಸಿಗರಿಗಾಗಿ ನಡೆಸುತ್ತಿದ್ದರೂ ಪೂರ್ಣ ಪ್ರಮಾಣದ ಕೃಷಿ ಪ್ರವಾಸೋದ್ಯಮ ಎಲ್ಲೂ ಕಂಡುಬರುತ್ತಿಲ್ಲ.
ಸರ್ಕಾರದ ನೀತಿ ಪ್ರಕಾರ ಆಯಾಯ ಸ್ಥಳದಲ್ಲೇ ಮಾರಾಟ ಮಾಡುವ ಕೃಷಿ ಉತ್ಪನ್ನಗಳ ಸಂಸ್ಕರಿತ ಆಹಾರ, ಸಾವಯವ ಆಹಾರ, ನಗರ ಪ್ರದೇಶದ ಪ್ರವಾಸಿಗರನ್ನು ಆಕರ್ಷಿಸಬಹುದು. ಆದರೆ ಹಳ್ಳಿಗಳು ಮನರಂಜನೆಯ ಅವಕಾಶಗಳನ್ನು ಮಕ್ಕಳು, ಮಧ್ಯವಯಸ್ಕರು ಹಾಗೂ ಹಿರಿಯರಿಗೆ ಗಂಡು-ಹೆಣ್ಣು ಬೇಧವಿಲ್ಲದೆ ಇಡೀ ಕುಟುಂಬಕ್ಕೆ ನ್ಯಾಯಯುತ ಬೆಲೆಯಲ್ಲಿ ಒದಗಿಸುತ್ತದೆ. ಈ ಮಾರ್ಗವನ್ನು ಪ್ರವಾಸೋದ್ಯಮಿಗಳು ಕಂಡುಕೊಳ್ಳಬೇಕಿದ್ದು, ಸರ್ಕಾರದ ಅಗತ್ಯ ಸಹಾಯ ಬೇಕಾಗುತ್ತದೆ.
ಗ್ರಾಮೀಣ ಆಟಗಳು, ಹಬ್ಬಾಚರಣೆ, ಆಹಾರ, ಬಟ್ಟೆ, ಪ್ರಕೃತಿ, ಸ್ಥಳೀಯ ಮನರಂಜನೆಯನ್ನು ಒಳಗೊಂಡು ಕೃಷಿ ಪ್ರವಾಸೋದ್ಯಮದ ಪರಿಕಲ್ಪನೆ ರೂಪಿಸಬಹುದಾಗಿದೆ. ರೈತರು ಅಥವಾ ಗ್ರಾಮೀಣ ಜನತೆ ನಗರ ಪ್ರದೇಶದ ಪ್ರವಾಸಿಗರನ್ನು ಆಕರ್ಷಿಸಲು ಸೇವೆ ಮತ್ತು ಸೌಕರ್ಯಗಳನ್ನು ಒದಗಿಸುವ ಮೂಲಕ ನಗರದ ಜನರಿಗೆ ತಮ್ಮ ಬೇರುಗಳಿಗೆ ಮರಳಲು ಒಂದು ಅವಕಾಶ ಕೊಡಬಹುದಾಗಿದೆ.
ಜಿಲ್ಲೆಯಲ್ಲಿ ಕಾಫಿ ದೊಡ್ಡ ಪ್ರಮಾಣದಲ್ಲಿ ಬೆಳೆದರೂ ಜತೆಯಲ್ಲಿ ಇತರ ಕೃಷಿ ಮಾಡುವವರೂ ಇದ್ದಾರೆ. ಕಿತ್ತಳೆ, ಜೇನು, ???ಂಥೋರಿಯಂ, ಬಟರ್‌ಫ್ರೂಟ್, ಮೀನುಗಾರಿಕೆ ಮಾತ್ರವಲ್ಲದೆ ದೇಶ, ವಿದೇಶದ ಹೂವು ಹಣ್ಣುಗಳನ್ನು ಕೃಷಿ ಮಾಡುವ ಬೆಳೆಗಾರರನ್ನು ಇಲ್ಲಿ ಕಾಣಬಹುದು. ಸಾಂಬಾರ ಬೆಳೆಗಳ ಸಂಶೋಧನಾ ಕೇಂದ್ರ, ತೋಟಗಾರಿಕೆ ಬೆಳೆಗಳ ಪ್ರಾಯೋಗಿಕ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಕಾಫಿ ಸಂಶೋಧನಾ ಕೇಂದ್ರ, ಕಿತ್ತಳೆ ಬೆಳೆಗಾರರ ಸಹಕಾರ ಸಂಘ, ಜೇನು ಉತ್ಪಾದಕರ ಸಹಕಾರ ಸಂಘ, ಹಾಲಿನ ಡೇರಿಗಳೂ ಜಿಲ್ಲೆಯಲ್ಲಿ ಇದೆ.
ಇವೆಲ್ಲಾ ಮಾಹಿತಿಯ ಆಗರವಾಗಿದ್ದು, ಇಂತಹ ಕೃಷಿ ಬಗ್ಗೆ ವ್ಯವಸ್ಥಿತವಾಗಿ ಪ್ರವಾಸಿಗರಿಗೆ ತಿಳಿಸುವ ಕೆಲಸ ಮಾಡುವ ಮೂಲಕ ಕೃಷಿ ಪ್ರವಾಸೋದ್ಯಮ ರೂಪಿಸಿ ಬೆಳೆಸುವ ವ್ಯಾಪಕ ಅವಕಾಶ ಕೊಡಗಿನಲ್ಲಿದ್ದು. ಇದನ್ನು ಬಳಸಿಕೊಳ್ಳುವ ಮನಸ್ಸು ಮಾಡಬೇಕಷ್ಟೇ…

ಕೃಷಿ ಪ್ರವಾಸೋದ್ಯಮದಲ್ಲಿ ವಿಷಯಗಳು ಅಗಾಧವಾಗಿದೆ. ಕೃಷಿಕರಿಗೂ ಉದ್ಯಮಿಗಳಾಗುವ ಅವಕಾಶ ಸಿಗುತ್ತದೆ. ಕೃಷಿ ಆದಾಯದ ಜತೆಗೆ ಪ್ರವಾಸೋದ್ಯಮ ಚಟುವಟಿಕೆಯಿಂದಲೂ ಆದಾಯ ಗಳಿಸಬಹುದಾಗಿದೆ. ಪರಿಸರಕ್ಕೆ ಪೂರಕ ಚಟುವಟಿಕೆಗಳನ್ನು ನಡೆಸುವ ಮೂಲಕ ಪರಿಸರ ಪ್ರೇಮಿ ಪ್ರವಾಸೋದ್ಯಮಿಯೂ ಆಗಬಹುದು. ಕಾಂಕ್ರಿಟ್ ಕಾಡಿನ ಏಕತಾನತೆ ಕಳೆಯಲು ಬಂದವರಿಗೆ ಮತ್ತದೇ ಕಾಂಕ್ರಿಟ್ ಕಾಡಿನ ದರ್ಶನ ಮಾಡಿಸುವ ಬದಲು ಹಸಿರು ಸಿರಿ ತೋರಿಸುವ ಮೂಲಕ ವಿಭಿನ್ನತೆ ಮೆರೆಯಬಹುದು ಈ ಮೂಲಕ ಆರ್ಥಿಕವಾಗಿ ಲಾಭವನ್ನೂ ಗಳಿಸಬಹುದು.

ಕೃಷಿ ಪ್ರವಾಸೋದ್ಯಮದಲ್ಲಿ ಸಾಕಷ್ಟು ಅವಕಾಶಗಳಿವೆ. ಸರ್ಕಾರದ ಮಾರ್ಗಸೂಚಿ ಅಭ್ಯಸಿಸಿ ಇದನ್ನು ಅಳವಡಿಸಿಕೊಳ್ಳಬಹುದು. ಇದು ಈಗ ಹೋಮ್‌ಸ್ಟೇಗಳು ನಡೆಯುತ್ತಿರುವಂತೆ ಮಾಲೀಕರು ಯಾರೋ, ನಿರ್ವಹಣೆ ಮಾಡುವವರು ಯಾರೋ ಅನ್ನುವಂತೆ ಇರಬಾರದು. ಆಸಕ್ತಿ ಇರುವ ಮಾಲೀಕರೇ ಖುದ್ದು ನಿರ್ವಹಿಸಬೇಕು. ಹೊರ ರಾಜ್ಯಗಳ ಯಶಸ್ವಿ ಮಾದರಿಗಳನ್ನು ಅನುಸರಿಸಬಹುದು. ಸುಸ್ಥಿರ ಪ್ರವಾಸೋದ್ಯಮ ಇದರಿಂದ ಸಾಧ್ಯ. ಈ ಬಾರಿಯ ಬಜೆಟ್‌ನಲ್ಲೂ ಇಕೋ ಟೂರಿಸಂಗೆ ಆದ್ಯತೆ ಕೊಟ್ಟಿದ್ದಾರೆ.
ಪ್ರೊ. ಸಿ.ಜಿ. ಕುಶಾಲಪ್ಪ, ನಿವೃತ್ತ ಡೀನ್, ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆ