ಜಿಲ್ಲೆ

ಹಸಿರು ಮೇವಿನಲ್ಲಿ ಜಿಲ್ಲೆ ಸ್ವಾವಲಂಬಿ; ಮಿನಿ ಕಿಟ್ ವಿತರಣೆಯಲ್ಲಿ ದಾಖಲೆ

ಬೆಂಗಳೂರು ಗ್ರಾಮಾಂತರ: ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಈ ಬಾರಿ ಗ್ರಾಮಾಂತರ ಜಿಲ್ಲೆಯಲ್ಲಿ ವಿತರಿಸಿದ ಮೇವಿನ ಮಿನಿ ಕಿಟ್ ದಾಖಲೆ ಎನಿಸಿದೆ. ಒಂದು ಲಕ್ಷಕ್ಕೂ ಹೆಚ್ಚು ಕಿಟ್​ಗಳನ್ನು ವಿತರಿಸುವ ಮೂಲಕ ಜಿಲ್ಲಾ ಪಶುಪಾಲನಾ ಇಲಾಖೆ ಮೇವಿನಲ್ಲಿ ಸ್ವಾವಲಂಬಿ ಜಿಲ್ಲೆಯಾಗಿಸುವಲ್ಲಿ ಬಹಳಷ್ಟು ಶ್ರಮಿಸಿದೆ. ಜಾನುವಾರುಗಳ ಮೇವಿಗೆ ಬರ ಎದುರಾಗದಂತೆ ಮುಂಜಾಗ್ರತೆ ವಹಿಸಿದ್ದ ಸರ್ಕಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಮೇವಿನ ಮಿನಿಕಿಟ್​ಗಳನ್ನು ವಿತರಿಸಿತ್ತು. ಅದರಂತೆ ಗ್ರಾಮಾಂತರ ಜಿಲ್ಲೆಗೂ ಮೇವಿನ ಮಿನಿ ಕಿಟ್​ಗಳನ್ನು ವಿತರಿಸಿತ್ತು. ಜಿಲ್ಲೆಯ ಹೈನುಗಾರರ ಬೇಡಿಕೆಯನ್ನು ಸರ್ಕಾರಕ್ಕೆ ಮನದಟ್ಟು ಮಾಡಿಸುವಲ್ಲಿ ಹೆಚ್ಚು ಶ್ರಮಿಸಿದ ಪಶುಪಾಲನಾ ಇಲಾಖೆ ಹೆಚ್ಚಿನ ಸಂಖ್ಯೆಯಲ್ಲಿ ಮಿನಿಕಿಟ್​ಗಳನ್ನು ತರಿಸಿಕೊಳ್ಳುವುದರಲ್ಲಿ ಯಶ ಕಂಡಿತ್ತು. ಇದರ ಫಲವಾಗಿ ಈ ಬಾರಿ ಕಾಡಬಹುದಾಗಿದ್ದ ಮೇವಿನ ಬರದ ಆತಂಕ ದೂರವಾಗಿದೆ.

ಪಶುಪಾಲನೆ ಇಲಾಖೆಯಿಂದ 58126 ಮೇವಿನ ಕಿರು ಪೊಟ್ಟಣ ಹಾಗೂ ಕೆಎಂಎಫ್ ನಿಂದ 40011 ಮೇವಿನ ಕಿರು ಪೊಟ್ಟಣ ಸೇರಿ 98137 ಮೇವಿನ ಕಿರು ಪೊಟ್ಟಣಗಳನ್ನು ನೀರಾವರಿ ಹೊಂದಿರುವ ಜಿಲ್ಲೆಯ ನಾಲ್ಕೂ ತಾಲೂಕುಗಳ ರೈತರಿಗೆ ಉಚಿತವಾಗಿ ವಿತರಿಸಲಾಗಿತ್ತು. ನಂತರದಲ್ಲಿಯೂ 2 ಸಾವಿರಕ್ಕೂ ಹೆಚ್ಚು ಕಿಟ್​ಗಳನ್ನು ತರಿಸಿಕೊಳ್ಳುವ ಮೂಲಕ ಲಕ್ಷಕ್ಕೂ ಹೆಚ್ಚು ಮಿನಿಕಿಟ್​ಗಳನ್ನು ರೈತಾಪಿ ಜನರಿಗೆ ವಿತರಿಸಿದೆ. ಇದರ ಫಲವಾಗಿ ಹಸಿರು ಹುಲ್ಲಿನ ಕೊರತೆ ಕಾಡಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಾನುವಾರು ಮೇವಿನ ಕೊರತೆ ಹೈನೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಕಾರಣಕ್ಕೆ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಮೇವಿನ ದಾಸ್ತಾನು ವಸ್ತುಸ್ಥಿತಿ ಪರಿಶೀಲಿಸಲಾಗಿತ್ತು. ಅಲ್ಲದೆ ಪ್ರತಿ ಗ್ರಾಮಗಳಲ್ಲಿ ಪಶುಪಾಲಕರಿಂದ ಮೇವಿನ ಬೇಡಿಕೆ ಬಗ್ಗೆ ಡೇಟಾ ಸಂಗ್ರಹಿಸಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರ ಗಮನಕ್ಕೆ ತಂದು ಹೆಚ್ಚಿನ ಪ್ರಮಾಣದಲ್ಲಿ ಮಿನಿಕಿಟ್​ಗಳನ್ನು ತರಿಸಿಕೊಳ್ಳುವಲ್ಲಿ ಇಲಾಖೆ ಶ್ರಮಿಸಿತ್ತು.

ಒಣ ಮೇವಿಗೂ ಕೊರತೆಯಾಗಲಿಲ್ಲ

ಕೃಷಿ ಇಲಾಖೆ ಮಾಹಿತಿಯಂತೆ ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 56513 ಹೆಕ್ಟೇರ್ ರಾಗಿ, 6756 ಹೆಕ್ಟೇರ್ ಮುಸುಕಿನ ಜೋಳ ಹಾಗೂ 61 ಹೆಕ್ಟೇರ್ ಭತ್ತ ಬಿತ್ತನೆಯಾಗಿದ್ದು, ರಾಗಿ ಬೆಳೆಯಿಂದಲೇ 1,90,274 ಟನ್ ಒಣ ಮೇವು ಲಭ್ಯವಿರುವ ಬಗ್ಗೆ ಅಂದಾಜು ಮಾಡಲಾಗಿತ್ತು. ಜೂನ್ ಅಂತ್ಯದವರೆಗೆ ಒಣಮೇವಿನ ಕೊರತೆ ಎದುರಾಗುವುದರಿಲ್ಲ ಎಂಬ ಭರವಸೆ ವ್ಯಕ್ತಪಡಿಸಿತ್ತು. ಇದರ ಜತೆಗೆ ಮೇ ತಿಂಗಳಲ್ಲೇ ಮಳೆ ಆರಂಭವಾಗಿದ್ದರಿಂದ ಅದಾಗಲೆ ಮೇವಿನ ಮಿನಿಕಿಟ್​ಗಳ ಬಿತ್ತನೆ ಕಾರ್ಯ ನಡೆದಿದ್ದರಿಂದ ಒಣ ಹುಲ್ಲಿನ ಜತೆಗೆ ಹಸಿರು ಹುಲ್ಲಿನ ಪ್ರಮಾಣ ಹೆಚ್ಚಾಗಿದ್ದರಿಂದ ಜಾನುವಾರುಗಳ ಮೇವಿಗೆ ಯಾವುದೇ ಕೊರತೆ ಎದುರಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಜಾಗ್ರತೆ ಕಾರಣ

ಕಳೆದ ಸಾಲಿನಲ್ಲಿ ಮಳೆ ಕೈಕೊಟ್ಟು ಬರಗಾಲದ ಛಾಯೆ ಆವರಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಪಶುಪಾಲನಾ ಇಲಾಖೆ ಜಾನುವಾರುಗಳ ಮೇವಿನ ಸಮಸ್ಯೆ ಪರಿಹಾರಕ್ಕೆ ಪೂರ್ವ ಸಿದ್ದತೆ ಆರಂಭಿಸಿತ್ತು. ಮೊದಲಿಗೆ ಜಿಲ್ಲೆಯಲ್ಲಿನ ಒಣ ಮೇವಿನ ಲಭ್ಯತೆ ಬಗ್ಗೆ ಮಾಹಿತಿ ಕಲೆ ಹಾಕಿತ್ತು. ಮುಂದಿನ ದಿನಗಳಲ್ಲಿ ಕೊರತೆ ತೀವ್ರಗೊಂಡರೆ ಇತರ ಜಿಲ್ಲೆಗಳಿಂದ ಮೇವು ಖರೀದಿಸಲು ಟೆಂಡರ್ ಕರೆಯುವ ಪ್ರಕ್ರಿಯೆಗೆ ಮುಂದಾಗಿತ್ತು. ಇದರ ಜತೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪಶುಪಾಲನ ಇಲಾಖೆಯಿಂದ ಮೇವು ಉತ್ಪಾದನೆ ಪ್ರಮಾಣ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮೇವಿನ ಮಿನಿ ಕಿಟ್​ಗಳನ್ನು ವಿತರಿಸಲಾಗಿತ್ತು. ಕೊಳೆವೆಬಾವಿ, ಕೃಷಿಹೊಂಡ ಸೇರಿ ಇನ್ನಿತರ ನೀರಿನ ಸೌಲಭ್ಯವಿರುವ ರೈತರಿಗೆ ಕಿಟ್​ಗಳನ್ನು ವಿತರಿಸಿ ಮೇವು ಬೆಳೆಯಲು ಹೆಚ್ಚಿನ ಪ್ರೋತ್ಸಾಹ ನೀಡಲಾಗಿತ್ತು. ಇದರಿಂದಾಗಿ ಜಾನುವಾರುಗಳ ಮೇವಿನ ಕೊರತೆ ನೀಗಿಸುವಲ್ಲಿ ಇದು ಗಣನೀಯ ಪಾತ್ರವಹಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆ ಕೊರತೆಯಿಂದ ಎದುರಾಗಬಹುದಾಗಿದ್ದ ಮೇವಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಇಲಾಖೆ ಪೂರ್ವ ಸಿದ್ದತೆ ನಡೆಸಿತ್ತು, ರೈತಾಪಿ ಜನರಿಗೆ ಮೇವಿನ ಮಿನಿಕಿಟ್ ವಿತರಿಸಿ ಮೇವು ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗಿತ್ತು. ಉಸ್ತುವಾರಿ ಸಚಿವರ ಸಹಕಾರದಿಂದ ಕೆಎಂಎಫ್ ಹಾಗೂ ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಲಕ್ಷಕ್ಕೂ ಹೆಚ್ಚು ಮೇವಿನ ಕಿಟ್​ಗಳನ್ನು ವಿತರಿಸಲಾಗಿತ್ತು. ಇದರಿಂದಾಗಿ ಮೇವಿನ ಕೊರತೆ ಕಾಡಲಿಲ್ಲ.

| ಡಾ.ಜಗದೀಶ್, ಉಪನಿರ್ದೇಶಕ ಪಶುಪಾಲನಾ ಇಲಾಖೆ ಬೆಂ.ಗ್ರಾಮಾಂತರ