ಜಿಲ್ಲೆ

ಜಿಲ್ಲೆಯಲ್ಲಿ ಕಣ್ಮರೆ ಆಗುವುದೇ ಭತ್ತ ಕೃಷಿ ?

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡಗಿನಲ್ಲೂ ಕೃಷಿ ಭೂಮಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗುತ್ತಿದೆ. ಒಂದೊಮ್ಮೆ ಭತ್ತದ ಕಣಜ ಎಂದು ಹೆಸರು ಮಾಡಿದ್ದ ಜಿಲ್ಲೆಯಲ್ಲಿ ಈಗ ಭತ್ತ ಬೆಳೆಯುವ ರೈತರ ಸಂಖ್ಯೆ ತೀರಾ ಕುಸಿದಿದೆ. ಇತರ ಬೆಳೆಗಳ ಬೇಸಾಯದತ್ತಲೂ ಆಸಕ್ತಿ ಕಂಡು ಬರುತ್ತಿಲ್ಲ. ಕೇವಲ 5 ವರ್ಷಗಳಲ್ಲಿ ಶೇ. 50ರಷ್ಟು ಪ್ರಮಾಣದಲ್ಲಿ ಕೊಡಗಿನಲ್ಲಿ ಕೃಷಿಭೂಮಿಯ ವಿಸ್ತೀರ್ಣ ಕಡಿಮೆ ಆಗಿರುವ ಮಾಹಿತಿ ಭವಿಷ್ಯದ ಬಗ್ಗೆ ಆತಂಕ ಹುಟ್ಟಿಸುವಂತಿದೆ.

ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆ ಮತ್ತು ಪೂರೈಕೆ ಎಲ್ಲಾ ಸರ್ಕಾರಗಳ ಮುಂದಿರುವ ದೊಡ್ಡ ಸವಾಲಾಗಿದೆ. ದೇಶಕ್ಕೆ ಸ್ವಾತಂತ್ರö್ಯ ಬಂದಾಗ ಈ ಸವಾಲನ್ನು ಎದುರಿಸಲು ನೀರಾವರಿಗೆ ಆದ್ಯತೆ ಕೊಟ್ಟು, ಅಣೆಕಟ್ಟೆಗಳ ನಿರ್ಮಾಣಕ್ಕೆ ಬಜೆಟ್‌ನಲ್ಲಿ ದೊಡ್ಡ ಪಾಲು ಮೀಸಲಾಗಿಡಲಾಗುತ್ತಿತ್ತು. ಪಂಚವಾರ್ಷಿಕ ಯೋಜನೆಗಳಲ್ಲೂ ಆಹಾರ ಉತ್ಪಾದನೆ ಹೆಚ್ಚಳಕ್ಕೆ ಯೋಜನೆಗಳನ್ನು ರೂಪಿಸಲಾಗುತ್ತಿತ್ತು. ಇದರ ಪರಿಣಾಮವಾಗಿಯೇ ಹಸಿರು ಕ್ರಾಂತಿ ಆರಂಭವಾಗಿ ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಿತ್ತು.

ಆದರೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಪ್ರೋತ್ಸಾಹದ ಹೊರತಾಗಿಯೂ ಕೃಷಿ ಭೂಮಿಯ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಇಳಿಕೆ ಆಗುತ್ತಿದೆ. ಮಲೆನಾಡಿನ ಮಡಿಲಲ್ಲಿ ಇರುವ ಕೃಷಿ ಪ್ರಧಾನ ಜಿಲ್ಲೆ ಕೊಡಗು ಕೂಡ ಈ ಬೆಳವಣಿಗೆಗೆ ಸಾಕ್ಷಿ ಆಗಿದೆ. ಭತ್ತದ ಕಣಜ ಎಂದು ಗುರುತಿಸಿಕೊಂಡು ಅಕ್ಕಿ ಉತ್ಪಾದನೆಗೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿದ್ದ ಜಿಲ್ಲೆಯಲ್ಲಿ ಕೃಷಿ ಕ್ಷೀಣಿಸುತ್ತಿದೆ. ಕೃಷಿ ಭೂಮಿಯ ವಿಸ್ತೀರ್ಣ ಪ್ರತಿ ವರ್ಷವೂ ವೇಗವಾಗಿ ಕಡಿಮೆ ಆಗುತ್ತಲೇ ಇದೆ. ಇದು ಆಹಾರ ಧಾನ್ಯಗಳ ಉತ್ಪಾದನೆ ಮೇಲೆ ಪರಿಣಾಮ ಬೀರಿದ್ದು, ಭತ್ತ ಸೇರಿದಂತೆ ಆಹಾರ ಧಾನ್ಯಗಳ ಉತ್ಪಾದನೆ ಪ್ರಮಾಣವೂ ಕುಸಿತ ಕಾಣುತ್ತಿದೆ.

2019-20ರಲ್ಲಿ ಜಿಲ್ಲೆಯಲ್ಲಿ 29,759 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳ ಬಿತ್ತನೆ ಮಾಡಲಾಗುತ್ತಿತ್ತು. ಇದು ಈಗ 2023-24ರಲ್ಲಿ 15,820 ಹೆಕ್ಟೇರ್ ಪ್ರದೇಶಕ್ಕೆ ಬಂದು ನಿಂತಿದೆ. ಇದರಿಂದಾಗಿ ಭತ್ತ ಸೇರಿದಂತೆ ಆಹಾರ ಧಾನ್ಯಗಳ ಉತ್ಪಾದನೆ ಮೇಲೂ ಪರಿಣಾಮ ಬೀರಿದೆ. 2019-20ರಲ್ಲಿ ಕೊಡಗಿನಲ್ಲಿ 1,06,975 ಟನ್‌ಗಳಷ್ಟು ಭತ್ತ ಬೆಳೆಯಲಾಗುತ್ತಿತ್ತು. 2023-24ರಲ್ಲಿ ಈ ಪ್ರಮಾಣ 53,152 ಟನ್‌ಗಳಿಗೆ ಕುಸಿದಿದೆ. 37 ಟನ್ ಬೆಳೆಯುತ್ತಿದ್ದ ರಾಗಿ ಈಗ 28 ಟನ್‌ಗೆ ಇಳಿದಿದೆ. ವಿಶೇಷ ಎಂದರೆ ಭತ್ತ ಬೆಳೆಯುವ ಪ್ರಮಾಣ ಇಳಿದಿದ್ದರೂ ಮುಸುಕಿನ ಜೋಳ ಉತ್ಪಾದನೆ ತುಸು ಹೆಚ್ಚಾಗಿದೆ. 5 ವರ್ಷಗಳ ಹಿಂದೆ 7,773 ಇದ್ದ ಮುಸುಕಿನ ಜೋಳದ ಉತ್ಪಾದನೆ ಈಗ 8,210 ಟನ್ ಆಗಿದೆ.

ಕೃಷಿ ಭೂಮಿ ವಿಸ್ತೀರ್ಣದ ಪ್ರಮಾಣ ಒಮ್ಮಿಂದೊಮ್ಮೆಲೇ ಇಳಿಕೆ ಆಗಿಲ್ಲ. ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಾ ಬರುತ್ತಿರುವುದನ್ನು ಗಮನಿಸಬಹುದಾಗಿದೆ. 2019-20ರಲ್ಲಿ ಜಿಲ್ಲೆಯಲ್ಲಿ 29,759 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳ ಬಿತ್ತನೆ ಮಾಡಲಾಗುತ್ತಿದ್ದರೆ, ಈ ಪ್ರಮಾಣ 2020-21ರಲ್ಲಿ 22,229 ಹೆಕ್ಟೇರ್ ಪ್ರದೇಶಕ್ಕೆ ಇಳಿಕೆ ಆಯಿತು. 2021-22ರಲ್ಲಿ ಸ್ವಲ್ಪ ಏರಿಕೆ ಕಂಡು 22,458 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳ ಬಿತ್ತನೆ ಕಾರ್ಯ ನಡೆದಿದ್ದರೂ 2022-23ರಲ್ಲಿ ಏಕಾಏಕಿ 15, 517 ಹೆಕ್ಟೇರ್ ಪ್ರದೇಶಕ್ಕೆ ಕುಸಿಯಿತು. ಕಳೆದ ವರ್ಷ ಇದು ಅಲ್ಪ ಏರಿಕೆ ಕಂಡುಬAದಿದ್ದು 15,820 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿರುವುದಾಗಿ ಕೃಷಿ ಇಲಾಖೆ ಅಂಕಿ ಅಂಶಗಳು ಮಾಹಿತಿ ನೀಡಿವೆ.

ಕೃಷಿ ಭೂಮಿ ವಿಸ್ತೀರ್ಣದ ಪ್ರಮಾಣ ಇಳಿಕೆ ಆಗುತ್ತಿರುವುದರಿಂದ ಆಹಾರ ಧಾನ್ಯಗಳ ಉತ್ಪಾದನೆಯೂ ಕಡಿಮೆ ಆಗುತ್ತಿದೆ. 2019-20ರಲ್ಲಿ ಕೊಡಗಿನಲ್ಲಿ 1,06,975 ಟನ್‌ಗಳಷ್ಟು ಭತ್ತ ಉತ್ಪಾದನೆ ಆಗಿದ್ದರೆ, 2020-21ರಲ್ಲಿ ಪ್ರಮಾಣ 84,549 ಟನ್‌ಗಳಿಗೆ ಇಳಿಕೆ ಆಯಿತು. 2021-22ರಲ್ಲಿ 78,554 ಟನ್ ಭತ್ತ ಬೆಳೆಯಲಾಗಿತ್ತು. 2022-23ರಲ್ಲಿ 50,795 ಟನ್‌ಗಳಿಗೆ ಕುಸಿತ ಕಂಡಿತು. ಕಳೆದ ವರ್ಷ ಭತ್ತದ ಉತ್ಪಾದನೆಯಲ್ಲಿ ಅಲ್ಪ ಚೇತರಿಕೆ ಕಂಡುಬAದಿದ್ದು, 53,152 ಟನ್‌ಗಳಷ್ಟು ಭತ್ತ ಕೊಡಗಿನಲ್ಲಿ ಬೆಳೆಯಲಾಗಿದೆ.

ಆಹಾರ ಧಾನ್ಯ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಸಾಕಷ್ಟು ಪ್ರೋತ್ಸಾಹಕ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದ್ದರೂ ಕೃಷಿ ಭೂಮಿ ವಿಸ್ತೀರ್ಣ ಕಡಿಮೆ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸರ್ಕಾರ 2024-25ನೇ ಸಾಲಿನಲ್ಲಿ ರಾಷ್ಟಿçÃಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಸಮಗ್ರ ಕೃಷಿ ಪದ್ಧತಿಯ ವಿಸ್ತರಣೆ ಮತ್ತು ಜನಪ್ರಿಯಗೊಳಿಸುವ ಕಾರ್ಯಕ್ರಮ ರೂಪಿಸಿದೆ. ಕೃಷಿ ಮತ್ತು ಕೃಷಿ ಸಂಬAಧಿತ ಚಟುವಟಿಕೆಗಳಾದ ತೋಟಗಾರಿಕೆ ಮತ್ತು ಪಶುಸಂಗೋಪನೆಯನ್ನು ಒಂದುಗೂಡಿಸಿ ರೈತರ ಆದಾಯ ಹೆಚ್ಚಳಕ್ಕೆ ನೆರವಾಗುವುದು ಈ ಯೋಜನೆಯ ಉದ್ದೇಶವಾಗಿದೆ.

ಕೃಷಿ ಕ್ಷೇತ್ರವನ್ನು ಸುಸ್ಥಿರ ಮತ್ತು ಲಾಭದಾಯವಾಗಿಸಲು ಕೃಷಿ ಭಾಗ್ಯ ಯೋಜನೆ ಕೇಂದ್ರವಾಗಿರಿಸಿಕೊAಡು ವಿವಿಧ ರೈತ ಪರ ಯೋಜನೆಗಳನ್ನು ಸಂಯೋಜಿಸುವ ಮೂಲಕ ಆಹಾರ ಉತ್ಪಾದನೆ ಮತ್ತು ರೈತರ ಆದಾಯ ಹೆಚ್ಚಿಸುವ ಕಾರ್ಯಕ್ರಮವನ್ನೂ ರೂಪಿಸಲಾಗಿದೆ. ಕೇಂದ್ರ ಪುರಸ್ಕೃತ ಆಹಾರ ಮತ್ತು ಪೌಷ್ಠಿಕ ಭದ್ರತೆ ಯೋಜನೆ ಅಡಿಯಲ್ಲಿ ಅಕ್ಕಿ, ದ್ವಿದಳ ಧಾನ್ಯ, ಸಿರಿಧಾನ್ಯ, ಒರಟುಧಾನ್ಯ, ದ್ವಿದಳ ಧಾನ್ಯ ಕಾರ್ಯಕ್ರಮಗಳನ್ನೂ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗಿದ್ದು, ರೈತರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.

ಆಹಾರ ಧಾನ್ಯ ಉತ್ಪಾದನೆ ಹೆಚ್ಚಳಕ್ಕೆ ಸರ್ಕಾರದಿಂದ ಎಲ್ಲಾ ರೀತಿಯ ಪ್ರೋತ್ಸಾಹ ಮಧ್ಯೆಯೂ ಕೃಷಿ ಭೂಮಿ ವಿಸ್ತೀರ್ಣ ಇಳಿಕೆ ಆಗಲು ಕೃಷಿ ಲಾಭದಾಯಕ ಅಲ್ಲ ಎನ್ನುವ ರೈತರ ಮನೋಭಾವವೇ ಕಾರಣ ಎನ್ನಲಾಗಿದೆ. ಕೊಡಗಿನ ರೈತರು ಕಾಫಿ ರೀತಿಯ ವಾಣಿಜ್ಯ ಬೆಳೆಗಳನ್ನು ಬೆಳೆಸುವುದಕ್ಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಕಂಡುಬರುತ್ತಿದೆ. ಭತ್ತದ ಗದ್ದೆಗಳು ಅಡಿಕೆ ತೋಟಗಳಾಗಿಯೂ ಪರಿವರ್ತನೆ ಆಗಿದೆ. ಶುಂಠಿ ಕೃಷಿಯೂ ಆಹಾರ ಧಾನ್ಯಗಳ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಕೃಷಿ ಭೂಮಿ ವಾಣಿಜ್ಯ ಭೂಮಿಯಾಗಿ ಪರಿವರ್ತನೆ ಆಗಿ ಲೇಔಟ್ ಸೇರಿದಂತೆ ಇತರ ಉದ್ದೇಶಗಳಿಗೆ ಬಳಕೆ ಆಗುತ್ತಿರುವುದರಿಂದಲೂ ಕೃಷಿ ಭೂಮಿಯ ವಿಸ್ತೀರ್ಣ ಇಳಿಕೆ ಆಗುತ್ತಿದೆ.

ಬೆಳೆ ಪದ್ಧತಿ ಆಧಾರಿತ ತರಬೇತಿಗಳು, ಜಿಲ್ಲಾ ಮಟ್ಟದ ಕಾರ್ಯಗಾರ, ರಾಜ್ಯಮಟ್ಟದ ಕಾರ್ಯಗಾರ ಮತ್ತು ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳ ಮುಖಾಂತರ ರೈತರಿಗೆ ನವೀನ ಮಾದರಿಗಳ ತಾಂತ್ರಿಕತೆಗಳನ್ನು ಅಳವಡಿಸುವ ಬಗ್ಗೆ ತರಬೇತಿ ನೀಡುವುದರ ಮೂಲಕ ಬೇಸಾಯದ ಖರ್ಚು ಕಡಿಮೆ ಮಾಡಿ ಉತ್ಪಾದಕತೆಯನ್ನು ಹೆಚ್ಚಿಸುವುದಕ್ಕೆ ಕ್ರಮವಹಿಸಲಾಗಿದೆ. ಕರ್ನಾಟಕದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಇಲಾಖೆಯಲ್ಲಿ ಎಲ್ಲಾ ವರ್ಗದ ರೈತರಿಗೆ ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಮತ್ತು ಕೃಷಿ ಕಾರ್ಮಿಕರ ಸಮಸ್ಯೆಯನ್ನು ನೀಗಿಸಿ ಹೆಚ್ಚಿನ ಇಳುವರಿ ಪಡೆಯಲು ನೆರವಾಗುವಂತೆ ಕೃಷಿ ಯಾಂತ್ರೀಕರಣ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ.

ಎನ್. ಚೆಲುವರಾಯ ಸ್ವಾಮಿ, ಕೃಷಿ ಸಚಿವ

ಆಹಾರ ಬೆಳೆಗಳ ಕೃಷಿ ಲಾಭದಾಯಕ ಅಲ್ಲ. ಉದಾಹರಣೆಗೆ ಭತ್ತಕ್ಕೆ ಸಿಗುತ್ತಿರುವ ಬೆಲೆ ಏನೇನೂ ಸಾಲದು. ಕ್ವಿಂಟಾಲ್‌ಗೆ ಕನಿಷ್ಠ 5 ಸಾವಿರ ರೂ. ಆದರೂ ಸಿಗಬೇಕು. ಹುಲ್ಲಿಗೆ ಬೇಡಿಕೆಯೇ ಇಲ್ಲ. ಕಾರ್ಮಿಕರ ಕೊರತೆಯೂ ಇದೆ. ಕಾಫಿಗೆ ಈ ವರ್ಷ ಉತ್ತಮ ಬೆಳೆ ಬಂದಿದೆ. ಮುಂದಿನ ವರ್ಷ ಹೆಚ್ಚು ಫಸಲು ಬರುವ ನಿರೀಕ್ಷೆ ಇದೆ. ಇದು ಕೂಡ ಕೃಷಿ ಭೂಮಿ ವಿಸ್ತೀರ್ಣ ಕಡಿಮೆ ಆಗಲು ಕಾರಣ ಆಗಬಹುದು.

ಬಿ.ಪಿ. ರವಿಶಂಕರ್, ಪ್ರಗತಿಪರ ರೈತ, ಪೊನ್ನಂಪೇ