ಮಂಜುನಾಥ ಅಂಗಡಿ ಧಾರವಾಡ
ಕೃಷಿ ಸಾರ್ವಜನಿಕ ಸೇವೆಯಲ್ಲಿ ಪ್ರಧಾನ ಇಲಾಖೆ. ರೈತರು ಬಹುತೇಕ ಅವಲಂಬಿಸಿರುವ ಕೃಷಿ ಇಲಾಖೆಯಲ್ಲಿ ಪ್ರಮುಖ ಹುದ್ದೆಗಳಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರೂ ತಾಂತ್ರಿಕ ಹುದ್ದೆಗಳು ಖಾಲಿಯಾಗಿವೆ. ಸರ್ಕಾರ ಹುದ್ದೆಗಳ ಭರ್ತಿ ಮಾಡಿಕೊಳ್ಳದಿರುವುದರಿಂದ ಇಲಾಖೆಯಲ್ಲಿ ಪ್ರಭಾರಿಗಳ ಕಾರುಬಾರು ಮುಂದುವರಿದಿದೆ.
ಜಿಲ್ಲೆಯಲ್ಲಿ ಮಂಜೂರಾದ ಹುದ್ದೆಗಳ ಸಂಖ್ಯೆ 125, ಈ ಪೈಕಿ 67 ಹುದ್ದೆಗಳು ಖಾಲಿ ಇವೆ. ನಿವೃತ್ತಿ, ವರ್ಗಾವಣೆಯಿಂದ ವರ್ಷಗಟ್ಟಲೇ ಹುದ್ದೆಗಳು ಖಾಲಿ ಇದ್ದರೂ ಭರ್ತಿಯಾಗಿಲ್ಲ. ಹೀಗಾಗಿ ಇರುವ ಅಧಿಕಾರಿ- ಸಿಬ್ಬಂದಿಯೇ ಹೆಚ್ಚುವರಿ ಕಾರ್ಯಭಾರ ಹೊತ್ತು ನಿರ್ವಹಿಸುತ್ತಿದ್ದಾರೆ.
ಜಿಲ್ಲೆಗೆ ಕೃಷಿ ಜಂಟಿ ನಿರ್ದೇಶಕ ಇದ್ದಾರೆ. 4 ಉಪ ನಿರ್ದೇಶಕರಲ್ಲಿ 1 ಹುದ್ದೆ ಖಾಲಿ ಇದೆ. ಮಂಜೂರಾದ 10 ಸಹಾಯಕ ಕೃಷಿ ನಿರ್ದೇಶಕರಿದ್ದಾರೆ. 38 ಇರಬೇಕಾದ ಕೃಷಿ ಅಧಿಕಾರಿಗಳು 33 ಇದ್ದು, 5 ಹುದ್ದೆಗಳ ಜವಾಬ್ದಾರಿಯನ್ನು ಇದ್ದವರೇ ಹೆಚ್ಚುವರಿಯಾಗಿ ನಿಭಾಯಿಸುತ್ತಿದ್ದಾರೆ. 10 ಸಹಾಯಕ ಕೃಷಿ ಅಧಿಕಾರಿ ಹುದ್ದೆ ಭರ್ತಿಯಾಗದಿರುವುದರಿಂದ ತಾಂತ್ರಿಕ ಕಾರ್ಯಗಳಿಗೆ ಇರುವ ಸಿಬ್ಬಂದಿಯನ್ನೇ ನೆಚ್ಚಿಕೊಳ್ಳಬೇಕಾಗಿದೆ.
* ರೈತ ಸಂಪರ್ಕ ಕೇಂದ್ರಗಳಲ್ಲಿ ತೊಂದರೆ:
ಜಿಲ್ಲಾ, ತಾಲೂಕು ಕೇಂದ್ರಗಳು ಹಾಗೂ ಹೋಬಳಿ ಸೇರಿ 14 ರೈತ ಸಂಪರ್ಕ ಕೇಂದ್ರಗಳಿವೆ. ಇಲ್ಲಿ ರೈತರಿಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆ ಮಾಡಲಾಗುತ್ತದೆ. ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ರೈತರು ಖರೀದಿಗೆ ಮುಗಿಬೀಳುವುದರಿಂದ ದಟ್ಟಣೆ ಇರುತ್ತದೆ. ಹೀಗಾಗಿ ಪ್ರಸ್ತುತ ಮುಂಗಾರಿನಲ್ಲಿ ಜಿಲ್ಲೆಯಾದ್ಯಂತ ಹೆಚ್ಚುವರಿಯಾಗಿ 14 ರೈತ ಸಂಪರ್ಕ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ಕಾರ್ಯನಿರ್ವಹಿಸಬೇಕಾಗಿದ್ದ ಐವರು ಕೃಷಿ ಅಧಿಕಾರಿಗಳ ಹುದ್ದೆ ಖಾಲಿ ಇವೆ.
* ರೈತರಲ್ಲಿಲ್ಲ ಹುಮ್ಮಸ್ಸು:
ಮೇ ಕೊನೇ ವಾರದಲ್ಲಿ ಒಂದೆರಡು ಬಾರಿ ಮಳೆಯಾಗಿದ್ದರಿಂದ ಕೆಲ ರೈತರು ಬಿತ್ತನೆ ಬೀಜ, ರಸಗೊಬ್ಬರ ಖರೀದಿದ್ದಾರೆ. ಆದರೆ, ಮುಂಗಾರು ವಿಳಂಬವಾಗಿದ್ದರಿಂದ ಒಣಹವೆ, ಬಿಸಿಲ ವಾತಾವರಣ ಮುಂದುವರಿದಿದೆ. ಹೀಗಾಗಿ ರೈತರಲ್ಲಿ ಬಿತ್ತನೆಯ ಹುಮ್ಮಸ್ಸು ಇಲ್ಲದಾಗಿದೆ. ಜೂನ್‌ನಲ್ಲಿ ರೈತರಿಂದ ತುಂಬಿರುತ್ತಿದ್ದ ರೈತ ಸಂಪರ್ಕ ಕೇಂದ್ರಗಳು ಬಿಕೋ ಎನ್ನುತ್ತಿವೆ.
* ಬೀಜ- ಗೊಬ್ಬರ ದಾಸ್ತಾನು:
ಜಿಲ್ಲೆಯಲ್ಲಿ 2.73 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಮೇನಲ್ಲಿ ಸುರಿದ ಅಕಾಲಿಕ ಮಳೆಯಿಂದ ಅಲ್ಲಲ್ಲಿ ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ. ಹೀಗಾಗಿ ಕೃಷಿ ಇಲಾಖೆ ರೈತರಿಗೆ ಅಗತ್ಯ ಮುಂಗಾರು ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ಸಿದ್ಧತೆ ಮಾಡಿಕೊಂಡಿದೆ. 15,000 ಕ್ವಿಂಟಲ್ ಸೋಯಾಬಿನ್, 1,600 ಕ್ವಿಂಟಲ್ ಹೆಸರು, 2,000 ಕ್ವಿಂಟಲ್ ಮೆಕ್ಕೆಜೋಳ, 500 ಕ್ವಿಂಟಲ್ ಉದ್ದು ಬೀಜ ದಾಸ್ತಾನಿದೆ. ಅದೇರೀತಿ 8,285 ಟನ್ ಯೂರಿಯಾ, 11,036 ಟನ್ ಡಿಎಪಿ, 613 ಟನ್ ಎಂಒಪಿ, 333 ಟನ್ ಎಸ್‌ಎಸ್‌ಪಿ ಸೇರಿ 35,696 ಟನ್ ರಸಗೊಬ್ಬರ ದಾಸ್ತಾನಿದೆ.
ಜಿಲ್ಲೆಯಲ್ಲಿ ಪ್ರಮುಖ 67 ಹುದ್ದೆಗಳು ಖಾಲಿ ಇದ್ದು, ಸರ್ಕಾರದ ಮಟ್ಟದಲ್ಲಿ ಭರ್ತಿ ಪ್ರಕ್ರಿಯೆ ನಡೆಯಬೇಕು. ಖಾಲಿ ಹುದ್ದೆಗಳ ಜವಾಬ್ದಾರಿಯನ್ನು ಇರುವ ಸಿಬ್ಬಂದಿಯೇ ನಿರ್ವಹಿಸುತ್ತಿದ್ದಾರೆ. ಈ ಬಾರಿ ಮುಂಗಾರು ಮಳೆ ಪ್ರವೇಶ ವಿಳಂಬವಾಗಿದ್ದು, ಇನ್ನೂ ಬಿತ್ತನೆ ಚಟುವಟಿಕೆ ಚುರುಕುಗೊಂಡಿಲ್ಲ. ರೈತರ ಬೇಡಿಕೆಗೆ ಅನುಗುಣವಾಗಿ ಬೀಜ, ರಸಗೊಬ್ಬರ ಪೂರೈಸಲು ಇಲಾಖೆ ದಾಸ್ತಾನು ಮಾಡಿಕೊಂಡಿದೆ.
- ಶಿವನಗೌಡ ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕ