ಜಿಲ್ಲೆ

ಬಿಎಂಆರ್‌ಸಿಎಲ್ ಮತ್ತು ಬಾಗ್ಮಾನೆ ಸಂಸ್ಥೆಯ ನಡುವೆ ಒಪ್ಪಂದ

ಪ್ರಶಾಂತ ರಿಪ್ಪನ್​ಪೇಟೆ

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಹಾಗೂ ಬಾಗ್ಮಾನೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ನಡುವೆ ಹಂತ-2ಎ ಯೋಜನೆಯ ಅಡಿಯಲ್ಲಿ ಕೇಂದ್ರ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆ.ಆರ್ ಪುರ ಟರ್ಮಿನಲ್ ನಡುವೆ ಬರುವ ಡಿ.ಆರ್.ಡಿ.ಒ ಸ್ಪೋರ್ಟ್ಸ್ ಕಾಂಪ್ಲೆಕ್ಸೃ್ ಮೆಟ್ರೋ ನಿಲ್ದಾಣದ ನಿರ್ಮಾಣಕ್ಕಾಗಿ ಒಪ್ಪಂದಕ್ಕೆ (ಎಂ.ಒ.ಯು) ಸಹಿ ಮಾಡಲಾಗಿದೆ. ಈ ಒಪ್ಪಂದದ ಪ್ರಕಾರ ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸೃ್ ಮೆಟ್ರೋ ನಿಲ್ದಾಣಕ್ಕೆ ಬಾಗ್ಮಾನೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಮೆಟ್ರೋ ನಿಲ್ದಾಣದ ನಾಮಕರಣದ ಹಕ್ಕುಗಳನ್ನು ಪಡೆಯಲು 20 ವರ್ಷಗಳ ಅವಧಿಗೆ ರೂ. 40 ಕೋಟಿ ನೀಡಲಿದೆ. ಇದಲ್ಲದೆ ಸೀತಾರಾಮಪಾಳ್ಯ, ಬೆಳ್ಳಂದೂರು, ಮತ್ತು ಇಸ್ರೋ ಮೆಟ್ರೋ ನಿಲ್ದಾಣಗಳಲ್ಲಿನ ಕಾನ್‌ಕೋರ್ಸ್ ಮಟ್ಟದಿಂದ ತಮ್ಮ ಕ್ಯಾಂಪಸ್‌ಗೆ ಸಂಪರ್ಕವನ್ನು ಒದಗಿಸಲು 30 ವರ್ಷಗಳ ಅವಧಿಗೆ ಪ್ರತಿನಿಲ್ದಾಣಕ್ಕೆ ರೂ. 10 ಕೋಟಿ ಬಿ.ಎಂ.ಆರ್.ಸಿ.ಎಲ್ ಗೆ ನೀಡಲಿವೆ. ಅದರ ಭಾಗವಾಗಿ 10 ಕೋಟಿ ಮುಂಗಡವನ್ನು ಪಾವತಿಸಿದೆ.

ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದ ನಂತರ ನಿಲ್ದಾಣದ ನಾಮಕರಣ ಹಾಗೂ ಸಂಪರ್ಕವನ್ನು ಕಲ್ಪಿಸುವ ಕಾರ್ಯವಾಗಲಿದೆ.

ಹೊಸ ನೀಲಿ ಮಾರ್ಗವು 17.00ಕಿ.ಮೀ ಉದ್ದವಿದ್ದು, 13 ನಿಲ್ದಾಣಗಳನ್ನು ಹೊಂದಿದೆ. ಇದು ಬೆಂಗಳೂರಿನ ಎಲ್ಲಾ ಭಾಗಗಳ ನಿವಾಸಿಗಳು ಹಾಗೂ ವಿಶೇಷವಾಗಿ ಐಟಿ ಉದ್ಯೋಗಿಗಳಿಗೆ ಹೆಚ್ಚು ಉಪಯೋಗವಾಗಲಿದೆ. ಟ್ರಾಫಿಕ್ ಕಿರಿಕಿರಿ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಮೆಟ್ರೋ ಪೂರಕವಾಗಿದೆ.