ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ವಿಭಜನೆ ಕನಸು ನನಸಾಗಿದೆ. ಒಕ್ಕೂಟವನ್ನು ವಿಭಜನೆ ಮಾಡಿ ಪ್ರತ್ಯೇಕ ಒಕ್ಕೂಟ ಸ್ಥಾಪನೆ ಮಾಡಬೇಕು ಎಂಬ ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಬೇಡಿಕೆ ಈಡೇರಿದೆ.
ಕೋಲಾರ&ಚಿಕ್ಕಬಳ್ಳಾಪುರ ಒಕ್ಕೂಟವನ್ನು ವಿಭಜನೆ ಮಾಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹೊಸ ಒಕ್ಕೂಟ ಸ್ಥಾಪಿಸಲು ರಾಜ್ಯ ಸರ್ಕಾರ ಸೂಚನೆ ಮೇರೆಗೆ ಸಹಕಾರ ಸಂಘಗಳ ಜಂಟಿ ನಿಬಂಧಕರು ಸೆ.25ರಂದು ಆದೇಶ ಹೊರಡಿಸಿದ್ದಾರೆ.
ಕೋಲಾರ ಹಾಲು ಒಕ್ಕೂಟವನ್ನು ವಿಭಜನೆ ಮಾಡಬೇಕು ಎಂದು ಒಕ್ಕೂಟದ ಚಿಕ್ಕಬಳ್ಳಾಪುರ ಜಿಲ್ಲೆಯ ಮಾಜಿ ನಿರ್ದೇಶಕರು, ಹಾಲು ಉತ್ಪಾದಕರ ಬಹುವರ್ಷಗಳ ಬೇಡಿಕೆಯಾಗಿತ್ತು. ಈ ಸಂಬಂಧ ರಾಜಕೀಯವಾಗಿ ಅಡೆ- ತಡೆಗಳಿದ್ದವು.
ಕೋಲಾರ ಜಿಲ್ಲೆಯಿಂದ ಪ್ರತ್ಯೇಕ ಮಾಡಲು ಚಿಕ್ಕಬಳ್ಳಾಪುರ ಜಿಲ್ಲೆಯ ಜನಪ್ರತಿನಿಧಿಗಳು ಆಸಕ್ತಿ ತೋರಿ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಭಜನೆ ಮಾಡಿ ಆದೇಶಿಸಿ, ಆಡಳಿತಾಧಿಕಾರಿಯನ್ನೂ ನೇಮಕ ಮಾಡಲಾಗಿತ್ತು, ಇದರಿಂದಾಗಿ ಪ್ರತ್ಯೇಕ ಒಕ್ಕೂಟಗಳಲ್ಲಿ ಚಟುವಟಿಕೆಗಳು ಸಹ ಮುಂದುವರಿದಿದ್ದವು.
ಆದರೆ ಚಿಕ್ಕಬಳ್ಳಾಪುರ ನಿರ್ದೇಶಕರು ಅಧಿಕಾರದಲ್ಲಿ ಮುಂದುವರಿಯಲು ಅವಕಾಶವಿಲ್ಲ ಎಂಬ ಷರತ್ತು ವಿಧಿಸಿದ್ದರಿಂದ ಕೋರ್ಟ್ ಮೋರೆ ಹೋದರು. ಅಷ್ಟರೊಳಗೆ ಸರ್ಕಾರ ಬದಲಾದ ಕಾರಣ ಪ್ರಾಬಲ್ಯ ಬಳಸಿ ಆದೇಶ ರದ್ದುಗೊಳಿಸಿ ಕೋಚಿಮುಲ್ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿ ಮುಂದುವರಿಯುವಂತೆ ಅವಕಾಶ ಪಡೆದುಕೊಂಡಿದ್ದರು.
ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಬಿಜೆಪಿ ಸರ್ಕಾರದ ಆದೇಶ ರದ್ದುಗೊಳಿಸಿ, ಯಥಾವತ್ತಾಗಿ ಕೋಮುಲ್ ಒಕ್ಕೂಟವು ಮುಂದುವರಿಯಲು ನಿರ್ದೇಶಿಸಿತು. ಇದು ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿತ್ತು. ಈಗ ಹೊಸ ಆದೇಶ ಹೊರ ಬೀಳುತ್ತಿದ್ದಂತೆ ಎಲ್ಲದಕ್ಕೂ ತೆರೆ ಬಿದ್ದಂತಾಗಿದೆ.
ಸರ್ಕಾರವು ಶ್ರೀದಲ್ಲೇ ಎರಡು ಒಕ್ಕೂಟಗಳಿಗೆ ಪ್ರತ್ಯೇಕ ಆಡಳಿತಾಧಿಕಾರಿಗಳನ್ನು ನೇಮಿಸಲಾಗುವುದು ಎಂದು ಸಹಕಾರ ಇಲಾಖೆ ಆದೇಶದಲ್ಲಿ ಸ್ಪಷ್ಪಪಡಿಸಿದೆ. ಇನ್ನಾದರೂ ಚುನಾವಣೆ ಸಕಾಲಕ್ಕೆ ನಡೆಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
2024ರ ಸೆ.23ರಂದು ನಡೆದ ಒಕ್ಕೂಟದ ವಿಶೇಷ ಸಾಮಾನ್ಯ ಸಭೆಯಲ್ಲಿ ಕಾನೂನು ಅಭಿಪ್ರಾಯ ಪರಿಗಣಿಸಿ, ಸರ್ವಾನುಮತದಿಂದ ತೀರ್ಮಾನಿಸಿ ವಿಭಜನೆ ಮಾಡಿ ರ್ನಿಣಯ ಕೈಗೊಳ್ಳಲಾಗಿದೆ. ಇದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಇದರಿಂದಾಗಿ ಸರ್ಕಾರವು ಒಕ್ಕೂಟ ವಿಭಜನೆಗೆ ಆದೇಶ ನೀಡಲಾಗಿದೆ ಎಂದು ನಮೂದು ಮಾಡಲಾಗಿದೆ.
ಒಕ್ಕೂಟದ ವಿಭಜನೆಗೆ ಸರ್ವ ಸದಸ್ಯರ ರ್ನಿಣಯ ಸಿಕ್ಕಿದೆ. ಇದಕ್ಕೆ ಸರ್ಕಾರವು ಆದೇಶ ಮಾಡಿದ್ದು, ಮುಂದಿನ ಚಟುವಟಿಕೆಗಳಲ್ಲಿ ಕೈಗೊಳ್ಳಲು ಸಮಿತಿ ರಚನೆಯಾದ ನಂತರ ಅಂತಿಮಗೊಳ್ಳಲಿದೆ.
ಅಶ್ವತ್ಥನಾರಾಯಣಬಾಬು, ನಿರ್ದೇಶಕ, ಕೋಚಿಮುಲ್
ಬರಿಗೈಯಲ್ಲಿ ವಿಭಜನೆ ಮಾಡಲುವ ಬದಲು ಒಕ್ಕೂಟ ನಡೆಯಲು ಅಗತ್ಯ ಬೇಕಿರುವ ಪ್ಯಾಕಿಂಗ್ ಘಟಕಕ್ಕೆ ಅನುದಾನ ಕೊಟ್ಟು ಈಗಿನ ಅಧ್ಯಕ್ಷರು ಪುಣ್ಯ ಕಟ್ಟಿಕೊಳ್ಳಲ್ಲಿ, ಅಧ್ಯಕ್ಷರನ್ನು ಚಿಕ್ಕಬಳ್ಳಾಪುರಕ್ಕೆ ಕರೆಸಿ ಸನ್ಮಾನ ಮಾಡುತ್ತೇವೆ.
ಕೆ.ವಿ.ನಾಗರಾಜ್ಮಾಜಿ ಅಧ್ಯಕ್ಷ, ಕೋಚಿಮುಲ್