ಜಿಲ್ಲೆ

ಕೃಷಿಕ ಸಮಾಜದಿಂದ ಪ್ರತಿಭಟನೆ

ಬೆಳಗಾವಿ: ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ರೈತರಿಂದ ನಡೆಯುತ್ತಿರುವ ಧರಣಿಗೆ ಬೆಂಬಲಿಸಿ ಬೆಳಗಾವಿಯಲ್ಲಿ ಭಾರತೀಯ ಕೃಷಿಕ ಸಮಾಜ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟಿಸಿದರು. ರೈತರು, ಕಾರ್ಮಿಕರು ಮತ್ತು ನೇಕಾರರ ವಿರುದ್ಧವಾಗಿ ಕೇಂದ್ರ ಸರ್ಕಾರ ಕಾನೂನು ಜಾರಿಗೆ ತರುತ್ತಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಭಾರತೀಯ ಕೃಷಿಕ ಸಮಾಜ ಅಧ್ಯಕ್ಷ ಸಿದ್ಧಗೌಡ ಮೋದಗಿ ಮಾತನಾಡಿ, ರೈತರು, ಕಾರ್ಮಿಕರು ಮತ್ತು ನೇಕಾರ ವಿರುದ್ಧವಾಗಿ ಕೇಂದ್ರ ಸರ್ಕಾರ ಕಾನೂನು ಜಾರಿಗೊಳಿಸುತ್ತಿದೆ. ರೈತ ವಿರೋಧಿ ಕಾನೂನು ಜಾರಿಗೊಳಿಸಿದ್ದನ್ನು ಖಂಡಿಸಿ ದೆಹಲಿಗೆ ದೇಶದ ಮೂಲೆಗಳಿಂದ ರೈತರು ಬಂದು ಪ್ರತಿಭಟಿಸುತ್ತಿದ್ದಾರೆ.

ಅವರ ಈ ಹೋರಾಟಕ್ಕೆ ಭಾರತೀಯ ಕೃಷಿಕ ಸಮಾಜ ತನ್ನ ನೈತಿಕ ಬೆಂಬಲ ಸೂಚಿಸುತ್ತಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರ ರೈತ, ಕಾರ್ಮಿಕರು ಮತ್ತು ನೇಕಾರ ಅಭಿವೃದ್ಧಿಗೆ ನೂತನ ಕಾನೂನು ಜಾರಿಗೆ ತರಬೇಕೆಂದು ಆಗ್ರಹಿಸಿದರು. ಖಾಸಗೀಕರಣ ಹಾಗೂ ಸ್ವಾಮಿನಾಥನ್ ವರದಿ ಜಾರಿಗೆ ತಂದು ರೈತ ಹಿತ ಕಾಪಾಡಬೇಕೆಂದು ಕಾರ್ಯಕರ್ತರು ಆಗ್ರಹಿಸಿದರು.

ಬಳಿಕ ಜಿಲ್ಲಾಧಿಕಾರಿ ಅವರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಮನವಿ ಸಲ್ಲಿಸಿದರು. ರವಿ ಪಾಟೀಲ, ಸೋಮಶೇಖರ್ ಕವಡಿ, ಶಂಕರ ಢವಳಿ, ಮೀರಾ ಬೀಕಣ್ಣವರ, ಚಾಂಗದೇವ ದೇಸಾಯಿ ನೇತೃತ್ವ ವಹಿಸಿದ್ದರು.