ಬೆಳಗಾವಿ: ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಲ್ಲಿ ರೈತರಿಗೆ ತರಬೇತಿ ಮತ್ತು ಮಾರ್ಗದರ್ಶನದ ಮೂಲಕ ರಾಸಾಯನಿಕ ಮುಕ್ತ ಕೃಷಿಗೆ ಒತ್ತು ನೀಡಿ ಸುರಕ್ಷಿತ ಆಹಾರ ಉತ್ಪಾದನೆ ಮತ್ತು ಭೂಮಿಯ ಫಲವತ್ತತೆ ಹೆಚ್ಚಿಸಲು ಅಧಿಕಾರಿಗಳು ಕಾಳಜಿಪೂರ್ವಕವಾಗಿ ಕಾರ್ಯನಿರ್ವಹಿಸಬೇಕೆಂದು ಜಿಪಂ ಸಿಇಒ ರಾಹುಲ್ ಶಿಂಧೆ ಸೂಚನೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ (21) ಕೃಷಿ ಇಲಾಖೆಯ ವಿವಿಧ ಯೋಜನೆಗಳಾದ ಆತ್ಮಾ ಯೋಜನೆ, ರಾಷ್ಟ್ರೀಯ ಆಹಾರ ಮತ್ತು ಪೌಷ್ಠಿಕ ಭದ್ರತೆ, ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ, ಆರ್.ಕೆ.ವ್ಹಿ. ವಾಯ್. ಬೆಳೆ ಅಭಿವೃದ್ದಿ ಕಾರ್ಯಕ್ರಮ, ಹೈಟೆಕ್ ಹರ‍್ವೆಸ್ಟರ್ ಹಬ್, ಎಸ್.ಎಮ್.ಎ.ಎಮ್. ಯೋಜನೆ, ಕೃಷಿ ಭಾಗ್ಯ ಯೋಜನೆ, ಕರ್ನಾಟಕ ರೈತ ಸಮೃದ್ಧಿ ಯೋಜನೆ, ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಹಾಗೂ ಕೃಷಿ ಯಂತ್ರಧಾರೆ ಯೋಜನೆಗಳ ಪ್ರಗತಿ ಪರಿಶೀಲನೆ ಹಾಗೂ ಅನುಮೊದನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿ ಇಲಾಖೆ, ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ ರಾಜ್ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು ಒಗ್ಗೂಡಿಸುವಿಕೆಯಿಂದ ಕಾರ್ಯನಿರ್ವಹಿಸಿ ರೈತರಿಗೆ ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಪ್ರಯೋಜನಗಳನ್ನು ನಿಯಮಾನುಸಾರ ತಲುಪಿಸಲು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು. ಕೃಷಿ ಇಲಾಖೆಯ ವಿವಿಧ ಯೋಜನೆಗಳನ್ನು ಪರಿಶೀಲಿಸಿ ಕಳೆದ ಸಾಲಿನಲ್ಲಿ ಹೈಟೆಕ ಹಾರ‍್ವೆಸ್ಟರ್ ಹಬ್ಬ ಯೋಜನೆಯನ್ನು ಜಿಲ್ಲೆಯಲ್ಲಿ ಗುರಿಗಿಂತ ಹೆಚ್ಚು ಅಚ್ಚುಕಟ್ಟಾಗಿ ಸಾಧನೆ ಮಾಡಿದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ರೈತರೂ ಕೂಡಾ ಈ ಯೋಜನೆಯಿಂದ ಪ್ರಯೋಜನವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಸಂತಸವೆಂದರು.
ಎಲ್ಲಾ ಯೋಜನೆಗಳಲ್ಲಿ ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿ, ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೆ ಎರಡರಂತೆ ಗ್ರಾಮೀಣ ಸಂತೆಯ ಕಟ್ಟೆಗಳನ್ನು ನರ್ಮಿಸಲು ನಬಾರ್ಡ ವ್ಯವಸ್ಥಾಪಕರಿಗೆ ಸೂಚಿಸಿ ಇತರೆ ಇಲಾಖೆಯ ಅಧಿಕಾರಿಗಳು ಇದರಲ್ಲಿ ಭಾಗವಹಿಸಿ ಕ್ರಮ ವಹಿಸಿಲು ಸೂಚಿಸಿದರು. ರೈತರಿಗೆ ಪ್ರಧಾನ ಮಂತ್ರಿ ಜೀವನ ಸುರಕ್ಷಾ, ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮೆ ಮಾಡಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದರು. ಸಂಜೀವಿನಿ ಯೋಜನೆಯಲ್ಲಿ ರಚಿಸಿದ ಮಹಿಳಾ ರೈತ ಉತ್ಪಾದಕ ಗುಂಪುಗಳಿಗೆ ಅಧ್ಯತೆ ಮೇರೆಗೆ ಕೃಷಿ ಹಾಗೂ ಸಂಬಂಧಿತ ಇಲಾಖೆಗಳು ಕಾರ್ಯಕ್ರಮ ನೀಡಲು ಕ್ರಮವಹಿಸಿಲು ಸೂಚಿಸಿದರು.
ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಗ್ರಾಮ ಪಂಚಾಯತಗಳಿಂದ ನಿರ್ಮಿತವಾದ ಎಲ್ಲ ಕೃಷಿ ಹೊಂಡಗಳ ಸುತ್ತಲೂ ಕಡ್ಡಾಯವಾಗಿ. ತಂತಿ ಬೇಲಿ ನಿರ್ಮಿಸಿ ಜನ ಮತ್ತು ಜಾನುವಾರುಗಳ ಸುರಕ್ಷತೆ ಖಚಿತ ಪಡಿಸಲು ಸಂಬಂಧಿತ ಇಲಾಖೆಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು ಹಾಗೂ ಈ ವಿಷಯ ಬಗ್ಗೆ ಅರಿವು ಮೂಡಿಸುವ ಭಿತ್ತಪತ್ರಗಳನ್ನು ಬಿಡುಗಡೆಗೊಳಿಸಿದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಶಂಕರಗೌಡಾ ಪಾಟೀಲ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಕೊಳೆಕರ, ತೋಟಗಾರಿಕೆ ಉಪ ನಿರ್ದೇಶಕರಾದ ಮಹಾಂತೇಶ ಮುರಗೋಡ, ಕೃಷಿ ಸಂಬಂಧಿತ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಬಂಧಿತ ಸಂಸ್ಥೆಗಳ ಮುಖ್ಯಸ್ಥರು, ಪ್ರಗತಿಪರ ರೈತರು ಉಪಸ್ಥಿತರಿದ್ದರು.