ಜಿಲ್ಲೆ

ರಾಷ್ಟ್ರ, ನಾಡು-ನುಡಿಯ ರಕ್ಷಣೆಗೆ ಶ್ರಮಿಸಿ...

ಯುವ ಸಮುದಾಯಕ್ಕೆ ದಿನಕರ ಹೇರೂರು ಸಲಹೆ

ಅಗ್ನಿ ಬನ್ನಿರಾಯ ಜಯಂತಿ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ದೇಶದ ಎಲ್ಲ ದಾರ್ಶನಿಕರೂ ಸಮಾಜ ಸುಧಾರಣೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದು ಇತಿಹಾಸದಿಂದ ತಿಳಿದುಬರುತ್ತದೆ. ಅಗ್ನಿ ಬನ್ನಿರಾಯ ಅವರು ಅಂದಿನ ಕಾಲದಲ್ಲಿಯೇ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದ ಆಶಯ ವ್ಯಕ್ತಪಡಿಸಿದ್ದರು. ಇಂದಿನ ಯುವ ಸಮುದಾಯ ದಾರ್ಶನಿಕರ ಮಾರ್ಗ ಅನುಸರಿಸುವ ಮೂಲಕ ರಾಷ್ಟ್ರ, ನಾಡು-ನುಡಿಯ ರಕ್ಷಣೆಗೆ ಶ್ರಮಿಸಬೇಕು ಎಂದು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಸಲಹೆ ನೀಡಿದರು.

ಉಡುಪಿ ಬ್ರಹ್ಮಗಿರಿಯಲ್ಲಿರುವ ರೆಡ್​ಕ್ರಾಸ್​ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಮಾ.28ರಂದು ಆಯೋಜಿಸಿದ್ದ ಅಗ್ನಿ ಬನ್ನಿರಾಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಪಂ ಉಪಕಾರ್ಯದರ್ಶಿ ಶ್ರೀನಿವಾಸ ರಾವ್​ ಮಾತನಾಡಿ, ಅಗ್ನಿ ಬನ್ನಿರಾಯ ಅವರು ಸಮಾಜಕ್ಕೆ ನೀಡಿದ ಕೊಡುಗೆ ತಿಳಿಸಿದರು. ಜೀವನದಲ್ಲಿ ಅವರ ತತ್ವ ಸಿದ್ಧಾಂತ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಕಳದ ಭುವನೇಂದ್ರ ಕಾಲೇಜಿನ ಉಪನ್ಯಾಸಕಿ ಸುಲೋಚನಾ ಪಚ್ಚಿನಡ್ಕ ಅವರು ಅಗ್ನಿ ಬನ್ನಿರಾಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಉಡುಪಿಯ ಭಾರತೀಯ ರೆಡ್​ಕ್ರಾಸ್​ ಸಂಸ್ಥೆಯ ಖಜಾಂಜಿ ರಮಾದೇವಿ, ಉಪಸಭಾಪತಿ ಡಾ. ಅಶೋಕ ವೈ.ಜಿ., ಮಾಜಿ ಸದಸ್ಯ ಕಾರ್ಯದರ್ಶಿ ಕೆ.ಬಾಲಕೃಷ್ಣ ಹೆಗ್ಡೆ, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ರೆಡ್​ಕ್ರಾಸ್​ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಇಲಾಖೆಯ ವರ್ಷಾ ಕೋಟ್ಯಾನ್​ ಕಾರ್ಯಕ್ರಮ ನಿರೂಪಿಸಿದರು.

ಮಹಾಪುರುಷರ ವ್ಯಕ್ತಿತ್ವ ಹಾಗೂ ಅವರ ತತ್ವ ಸಿದ್ಧಾಂತಗಳ ಅರಿವು ಹೊಂದುವುದು ಇಂದಿನ ಅಗತ್ಯವಾಗಿದೆ. ವಿದ್ಯಾರ್ಥಿಗಳು ಮಹನೀಯರ ಕುರಿತು ಹೆಚ್ಚಿನ ವಿಚಾರ ತಿಳಿದುಕೊಳ್ಳುವ ಮೂಲಕ ಪ್ರಜ್ಞಾವಂತರಾಗಬೇಕು. ಮುಂದೆ ತಾವುಗಳು ದಾರ್ಶನಿಕರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. | ಡಾ.ಗಣನಾಥ ಶೆಟ್ಟಿ ಎಕ್ಕಾರು. ಡಾ.ಶಿವರಾಮ ಕಾರಂತ ಟ್ರಸ್ಟ್​ನ ಅಧ್ಯಕ್ಷ