ಜಿಲ್ಲೆ

ರೈತ ವಿರೋಧಿ ನಿರ್ಧಾರ ಕೈಬಿಡದಿದ್ದರೆ ಬಿಜೆಪಿ ರೈತ ಮೋರ್ಚಾದಿಂದ ಆಂದೋಲನ: ಸರ್ಕಾರಕ್ಕೆ‌ ಎಚ್ಚರಿಕೆ

ಬೆಳಗಾವಿ: ಹಿಂದಿನ ಬಿಜೆಪಿ ಸರ್ಕಾರ ರೂಪಿಸಿದ್ದ ರೈತ ವಿದ್ಯಾನಿಧಿ, ಗೋಶಾಲೆ, ಕಿಸಾನ ಸಮ್ಮಾನ ನಿಧಿ, ಭೂ ಸಿರಿಯಂತ ಯೋಜನೆಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರದ್ದು ಮಾಡುವುದಕ್ಕೆ ಮುಂದಾಗಿದೆ. ಈ ರೈತ ವಿರೋಧಿ ನಿರ್ಧಾರಗಳನ್ನು ಕೈಬಿಡದಿದ್ದರೆ ಬಿಜೆಪಿ ರೈತ ಮೋರ್ಚಾ ವತಿಯಿಂದ ಆಂದೋಲನ ನಡೆಸಲಾಗುವುದು ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ ಎಚ್ಚರಿಸಿದರು.
ಸದಾಶಿವ ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನಿರ್ಧಾರಗಳನ್ನು ಕೈಗೊಳ್ಳಲು ಮುಂದಾಗಿದೆ. ಎಪಿಎಂಸಿ ಕಾಯ್ದೆ ರದ್ದತಿಗೂ ಮುಂದಾಗಿದೆ. ನೀರಾವರಿ ಯೋಜನೆಗಳಿಗೆ ಹಣ ಕಡಿತದಂತಹ ವಿವಾದಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಸರ್ಕಾರ ಈ ನಿರ್ಧಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ರೈತರಿಗೆ ಪೂರಕ ನೀತಿ ಜಾರಿಗೊಳಿಸಿತ್ತು. ನೀರಾವರಿ ಯೋಜನೆಗಳಿಗೆ 23 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಕಾಂಗ್ರೆಸ್ ಸರ್ಕಾರ ಅದನ್ನು 19 ಸಾವಿರ ಕೋಟಿ ರೂ.ಗೆ ಇಳಿಸಿದೆ. ಹಲವು ವಿವಾದಾತ್ಮಕ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದ್ದು, ಇದರಿಂದ ರೈತರಿಗೆ ಅನನಕೂಲವಾಗಲಿದೆ. ಹಳೆಯ ಕಾಯ್ದೆ- ಕಾನೂನುಗಳು ಮತ್ತು ಯೋಜನೆಗಳನ್ನು ಮುಂದುವರಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ. ರೈತ ಮೋರ್ಚಾ ರಾಜ್ಯಾಧ್ಯಕ್ಷ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರೊಂದಿಗೆ ಚರ್ಚಿಸಿ ಚಳವಳಿಯ ರೂಪುರೇಷೆ ನಿರ್ಧರಿಸಲಾಗುವುದು. ಅದರಂತೆ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಧರಣಿ ನಡೆಸಲಾಗುವುದು ಎಂದರು.
ಮಹಾನಗರ ಜಿಲ್ಲಾಧ್ಯಕ್ಷ ಕಲ್ಲಪ್ಪ ಶಹಾಪುರಕರ, ಪ್ರಧಾನ ಕಾರ್ಯದರ್ಶಿ ಪ್ರದೀಪ ಸಾಣಿಕೊಪ್ಪ, ಬಾಹುಬಲಿ ದೊಡ್ಡಣ್ಣನವರ, ಶರದ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.