ಶ್ರೀರಂಗಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಮಂಗಳವಾರ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ನಡೆಸುತ್ತಿದ್ದ ಸ್ಥಳಕ್ಕೆ ಬಂದ ಉಮಾ ಹಾಗೂ ಚೇತನಾ ಯಾದವ್ ಅವರಿಗೆ ಹಳೇ ಕಿರಂಗೂರು ಗ್ರಾಮದ ರಾಮಮಂದಿರದಲ್ಲಿ ನೆಲೆಸಿದ್ದ ನೊಂದ ಕುಟುಂಬಸ್ಥರು ಸುತ್ತುವರೆದು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.  
ಜಿಲ್ಲೆ

ನೊಂದ ಕುಟುಂಬ, ಅಧಿಕಾರಿಗಳ ಜಟಾಪಟಿ

ಶಿವಶಂಕರ್ ಎಂ. ಹೆಬ್ಬಳ್ಳ

ಶ್ರೀರಂಗಪಟ್ಟಣ: ತಾಲೂಕಿನ ಕಿರಂಗೂರಿನ ಶ್ರೀರಾಮ ದೇವರ ದೇವಾಲಯ ಸುಪರ್ದಿ ವಿಚಾರಕ್ಕೆ ಸಂಬಂಧಿಸಿದಂತೆ ಭೂಮಿ ತಾಯಿ ಹೋರಾಟ ಸಮಿತಿ ಹಾಗೂ ತಾಲೂಕು ಆಡಳಿತ ನಡುವೆ ನಡೆಯುತ್ತಿದ್ದ ಪ್ರತಿಭಟನೆ ಬುಧವಾರ ತೀವ್ರ ಸ್ವರೂಪಕ್ಕೆ ತಿರುಗಿ ಅಧಿಕಾರಿಗಳು ಮತ್ತು ಹೋರಾಟಗಾರರ ನಡುವೆ ಜೋರು ಮಾತಿನ ಚಕಮಕಿ ಉಂಟಾಯಿತು.

ಪಟ್ಟಣದ ತಾಲೂಕು ಕಚೇರಿಯ ಮುಂಭಾಗದಲ್ಲಿ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಸೋಮವಾರದಿಂದ ಹಮ್ಮಿಕೊಂಡ ಪ್ರತಿಭಟನೆ ಮಂಗಳವಾರವು ಸಹ ಮುಂದುವರಿದಿದ್ದು, ಮನವಿ ಆಲಿಸಲು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದ ವೇಳೆ ಈ ಜಟಾಪಟಿ ಸಂಭವಿಸಿದೆ.

ಏನಿದು ಘಟನೆ?:

ತಾಲೂಕಿನ ಹಳೇ ಕಿರಂಗೂರು ಗ್ರಾಮದ ರಾಮಮಂದಿರ ಮುಜರಾಯಿ ಇಲಾಖೆಯ ಆಸ್ತಿಯಾಗಿದ್ದು, ಈ ದೇಗುಲ ಮತ್ತು ಅದರ ಒಳಭಾಗದಲ್ಲೇ ಇರುವ ಮನೆಯಲ್ಲಿ ಈರೇಗೌಡ ಎಂಬುವರ ಕುಟುಂಬದ ಸದಸ್ಯರು ಸಾಕಷ್ಟು ವರ್ಷಗಳಿಂದ ಅತಿಕ್ರಮಿಸಿಕೊಂಡು ನೆಲೆಸಿದ್ದಾರೆ ಎಂಬ ವಿವಾದದ ಹಿನ್ನೆಲೆಯಲ್ಲಿ ನ್ಯಾಯಾಲಯದ ನಿರ್ದೇಶನ ಹಾಗೂ ಮುಜರಾಯಿ ಇಲಾಖೆಯ ತಹಸೀಲ್ದಾರ್ ತಮ್ಮೇಗೌಡ ಅವರ ಸೂಚನೆ ಮೇರೆಗೆ ತಾಲೂಕಿನ ಮುಜರಾಯಿ ಅಧಿಕಾರಿ ಉಮಾ ಅವರು ತಹಸೀಲ್ದಾರ್ ಚೇತನಾ ಯಾದವ್ ಅವರ ಸಮ್ಮುಖದಲ್ಲಿ ಪೊಲೀಸರ ಭಿಗಿ ಭದ್ರತೆಯೊಂದಿಗೆ ಶನಿವಾರ ಕಾರ್ಯಾಚರಣೆ ನಡೆಸಿ ಸರ್ಕಾರದ ಸುಪರ್ದಿಗೆ ಪಡೆದು ಮನೆ ಮತ್ತು ದೇಗುಲದ ಬಾಗಿಲುಗಳಿಗೆ ಬೀಗ ಮುದ್ರೆ ಜಡಿದಿದ್ದರು. ಆದರೆ ಈ ಕಾರ್ಯಾಚರಣೆ ವೇಳೆ ಅಧಿಕಾರಿಗಳು ದರ್ಪ ಹಾಗೂ ದೌರ್ಜನ್ಯ ಮೆರೆದಿದ್ದಾರೆ ಎಂದು ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಖಂಡಿಸಿ ಸೋಮವಾರದಿಂದ ಪ್ರತಿಭಟನೆ ಕೈಗೊಂಡಿದ್ದರು.

ಈ ಪ್ರತಿಭಟನೆ ಮಂಗಳವಾರ ಸಹ ಮುಂದುವರಿದು ತಾಲೂಕು ಕಚೇರಿ ಮುಂಭಾಗದಲ್ಲೇ ಅಡುಗೆ ಮಾಡಿ ಹೋರಾಟಗಾರರೆಲ್ಲರೂ ಊಟ ಮಾಡಿ ಮಲಗುವ ಹೋರಾಟ ನಡೆಯುತ್ತಿದ್ದ ಸ್ಥಳಕ್ಕೆ ಮುಜರಾಯಿ ಇಒ ಉಮಾ ಹಾಗೂ ತಹಸೀಲ್ದಾರ್ ಚೇತನಾ ಯಾದವ್ ಅವರು ಆಗಮಿಸಿ ಮನವಿ ಕೇಳಲು ಮುಂದಾಗಿದ್ದು, ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಅಧಿಕಾರಿಗಳನ್ನು ಪ್ರಶ್ನಿಸಿ ಸಮಂಜಸ ಉತ್ತರಕ್ಕೆ ಆಗ್ರಹಿಸುತ್ತಿದ್ದ ವೇಳೆ ನೊಂದ ಕುಟುಂಬದ ಸದಸ್ಯರು ಪೊಲೀಸರ ಸಮ್ಮುಖದಲ್ಲೇ ಮಹಿಳಾ ಅಧಿಕಾರಿಗಳನ್ನು ಆಕ್ರೋಶದಿಂದ ಸುತ್ತುವರೆದು ಏರು ದನಿಯಲ್ಲಿ ನಿಂದಿಸಿದ ವೇಳೆ ಮಾತಿನ ಚಕಮಕಿ ಉಂಟಾಗಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು.

ವಿಷಯ ತಿಳಿದು ಸ್ಥಳಕ್ಕೆ ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್ ಆಗಮಿಸಿ ಪ್ರತಿಭಟನಾಕಾರರ ಮನವಿ ಆಲಿಸಿದ್ದು, ಕೈಗೊಂಡ ಕಾರ್ಯಾಚರಣೆ ಹಾಗೂ ಕುಟುಂಬಸ್ಥರ ವಾದದ ಕುರಿತು ಕಾನೂನು ತಜ್ಞರ ಸಲಹೆ ಹಾಗೂ ದಾಖಲೆಗಳ ಪರಿಶೀಲನೆಯ ಮಾಹಿತಿ ಪಡೆದು ವರದಿ ನೀಡುವ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಸಮ್ಮನಾದರು.

ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ, ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಮಹದೇವು, ಸದಸ್ಯರಾದ ಶಿವಣ್ಣ, ಶಿವರಾಜು, ಶಂಕರ್, ಪುರುಷೋತ್ತಮ್, ರವಿ ಲಕ್ಷಣ, ಮಹದೇವು ಸೇರಿದಂತೆ ಹಲವರು ಈ ವೇಳೆ ಭಾಗಿಯಾಗಿದ್ದರು.